ವಯರ್ಲೆಸ್ ರೇಡಿಯೋ ಜನರೇಟರ್ ಇಂಜಿನ್
೧೯೪೬ರಲ್ಲಿ ಒಂದು ದಿನ ಸೊಇಚಿರೊ ಹೋಂಡಾ ತಮ್ಮ ಒಬ್ಬ ಸ್ನೇಹಿತನಾದ ಕೆಂಜಬುರೋ ಇನುಕಾಯಿ ಎಂಬಾತನ ಮನೆಗೆ ಭೇಟಿ ಕೊಟ್ಟರು. ಅಲ್ಲಿ ಅಕಸ್ಮಾತಾಗಿ ಸಣ್ಣ ಇಂಜಿನ್ ಒಂದನ್ನು ನೋಡಿದರು. ಇನುಕಾಯಿ ಅವರು, ತಮ್ಮ ವಾಹನ ರಿಪೇರಿ ಕೆಲಸಕ್ಕೆಂದು, ಹೋಂಡಾ ಅವರು ಆಗ ನೆಡೆಸುತ್ತಿದ್ದ ಆರ್ಟ್ ಶೋಕಾಯಿನ ಹಮಾಮಾತ್ಸು ಶಾಖೆಗೆ ಆಗಾಗ ಬರುತ್ತಿದ್ದರು. ಇನುಕಾಯಿ ಅವರು ಟ್ಯಾಕ್ಸಿ ಕಂಪನಿಯೊಂದನ್ನು ನೆಡೆಸುತ್ತಿದ್ದರು.
ತಮ್ಮ ಪರಿಚಯದವರೊಬ್ಬರು ಬಿಟ್ಟು ಹೋದ ಸಣ್ಣ ಜನರೇಟರ್ ಇಂಜಿನ್ ಇನುಕಾಯಿ ಅವರ ಬಳಿಯಲ್ಲಿತ್ತು. ಆಗಿನ ಇಂಪೀರಿಯಲ್ ಆರ್ಮಿ (ಜಪಾನೀ ಸೈನ್ಯ) ಬಳಸುತ್ತಿದ್ದ, ವಯರ್ಲೆಸ್ ರೇಡಿಯೋಗೆ ಬೇಕಾದ ವಿದ್ಯುಶ್ಶಕ್ತಿ ಒದಗಿಸಲು ವಿನ್ಯಾಸಗೊಳಿಸಿದ ಜನರೇಟರ್ ಇಂಜಿನ್ ಇದಾಗಿತ್ತು. ಇದನ್ನು ನೋಡಿದೊಡನೆ ಹೋಂಡಾ ಅವರಿಗೆ ತಟ್ಟನೆ ಒಂದು ಐಡಿಯಾ ಹೊಳೆಯಿತು ಮತ್ತು ಅದೇ ಅವರ ಜೀವನದ ಮುಂದಿನ ದಿಕ್ಕನ್ನು ತೋರಿಸಿತು. ಇದೇ ನಿರ್ಣಾಯಕ ಕ್ಷಣದಿಂದ ಮುಂದೆ ಹೋಂಡಾ ಮೋಟಾರ್ ಕಂಪನಿ ಜನಿಸಿತು.
“ಈ ಇಂಜಿನ್ ಅನ್ನು ಸೈಕಲ್ ಗೆ ಅಳವಡಿಸೋಣ” ಎಂದು ಐಡಿಯಾ ಬರಲು ವಾಹನ ಮೆಕ್ಯಾನಿಕ್ ಮತ್ತು ಸಂಶೋಧಕರಾದ ಹೋಂಡಾ ಅವರಿಗೆ ಜಾಸ್ತಿ ಸಮಯ ಹಿಡಿಯಲಿಲ್ಲ.
ಜನರೇಟರ್ ನಂತಹ ವಾಹನೇತರ ಬಳಕೆಗೆ ಉಪಯೋಗಿಸುವ ಇಂಜಿನ್ ಅನ್ನು ಸೈಕಲ್ ಗೆ ಚಾಲನೆ ಕೊಡಲು ಅಳವಡಿಸುವುದು ಹೊಸದೇನಾಗಿರಲಿಲ್ಲ. ಮೋಟಾರ್ ಸೈಕಲ್ ನ ಮೂಲ ಪರಿಕಲ್ಪನೆ ಕೂಡ ಹೀಗೆ ಆಗಿತ್ತಲ್ಲವೇ?
ಇಂಜಿನ್ ಅಳವಡಿಸಿದ ಸೈಕಲ್ ಒಂದು ಹೆಚ್ಚು ಕಮ್ಮಿ ಮೋಟಾರ್ ಸೈಕಲ್ ನಂತೆಯೇ. ಇದನ್ನು ಆಗಲೇ ಒಂದು ವಾಣಿಜ್ಯ ಉತ್ಪನ್ನವಾಗಿ ಇಂಗ್ಲೆಂಡ್ ಮತ್ತು ಇತರ ಕಡೆಗಳಲ್ಲಿ ಮಾರಲಾಗುತ್ತಿತ್ತು ಮತ್ತು ಅಂತಹ ಕೆಲ ಉತ್ಪನ್ನಗಳು ಯುದ್ಧಕ್ಕೂ ಮೊದಲು ಜಪಾನಿಗೂ ಆಮದಾಗಿದ್ದವು.
ಯುದ್ಧದ ನಂತರ ಜಪಾನಿನಲ್ಲಿ ಸಾರಿಗೆ ವ್ಯವಸ್ಥೆ ಕಂಗಾಲಾಗಿ, ಜನರ ಪ್ರಧಾನ ಸಾರಿಗೆ ಸೈಕಲ್ ಆಗಿ ಬಿಟ್ಟಿತ್ತು. ಸರಕು ಸಾಗಿಸಲು ಕೂಡ ಸೈಕಲ್ ಅನ್ನೇ ಬಳಸುತ್ತಿದ್ದರು. ಹೀಗಿರುವಾಗ ಸೈಕಲ್ ಗೆ ಸಣ್ಣ ಇಂಜಿನ್ ಅಳವಡಿಸಿದರೆ ಜನರಿಗೆ ಉಪಯುಕ್ತವಾಗಿರುತ್ತದೆ ಎಂದು ಹೋಂಡಾ ಯೋಚಿಸಿದರು. ಅದು ಒಂದು ಒಳ್ಳೆಯ ವ್ಯವಹಾರ ಕೂಡ ಆಗಬಹುದು ಮತ್ತು ಅಷ್ಟೇ ಅಲ್ಲದೆ ಇದು ಹೋಂಡಾ ಅವರ ಆಸಕ್ತಿಯುತ ಕ್ಷೇತ್ರವಾಗಿತ್ತು.
ಕೂಡಲೇ ಮೂಲ ಮಾದರಿಯೊಂದನ್ನು (prototype) ತಯಾರಿಸಲು ಕೆಲಸ ಆರಂಭಿಸಿದರು. ಈ ಸಮಯದಲ್ಲೇ ಅವರು ತಮ್ಮ ಮನೆಯಲ್ಲಿ ಲಭ್ಯವಿದ್ದ ಜಪಾನೀ ಸ್ಟೈಲ್ ನ ಬಿಸಿನೀರಿನ ಬಾಟಲ್ ಅನ್ನು ಇಂಧನ ಟ್ಯಾಂಕ್ ಆಗಿ ಉಪಯೋಗಿಸಿದ್ದು. ಮೊದಲನೇ ಮೂಲಮಾದರಿಯಲ್ಲಿ ಇಂಜಿನ್ ಅನ್ನು ಸೈಕಲ್ ನ ಹ್ಯಾಂಡಲ್ ಗಿಂತ ಮುಂದಿರುವ ಚಕ್ರಕ್ಕೆ ಅಳವಡಿಸಿದ್ದರು. ಇಂಜಿನ್ ನ ಶಕ್ತಿಯನ್ನು ಒಂದು ರಬ್ಬರ್ ರೋಲರ್ ನ ಘರ್ಷಣೆಯ ಮೂಲಕ ಮುಂದಿನ ಟೈಯರ್ ಗೆ ವರ್ಗಾಯಿಸುವ ವ್ಯವಸ್ಥೆ ಇತ್ತು. ಇದು ಫ್ರಾನ್ಸ್ ನಲ್ಲಿ ಆಗ ಅತೀ ಹೆಚ್ಚು ಮಾರಾಟವಾಗುತ್ತಿದ್ದ ವೆರೋ ಸೋಲೆಕ್ಸ್ ಎಂಬ ಮೊಪೆಡ್ ನಂತೆಯೇ ಇತ್ತು.
ಆದರೆ ಕಳಪೆ ಗುಣಮಟ್ಟದ ಟಯರ್ ಗಳು ಘರ್ಷಣೆಯಿಂದ ಸವೆದು ಉರಿದು ಹೋಗುತ್ತಿದ್ದವು. ಸೈಕಲ್ ಅನ್ನು ಚಲಾಯಿಸುವುದು ಕೂಡ ಕಷ್ಟವಾಗುತ್ತಿತ್ತು. ಈ ಕಾರಣಗಳಿಂದ ಈ ವ್ಯವಸ್ಥೆಯನ್ನು ಕೂಡಲೇ ಕೈಬಿಟ್ಟು ಹೆಚ್ಚು ಸಾಂಪ್ರದಾಯಿಕವೆನ್ನಬಹುದಾದ, ವಿ ಬೆಲ್ಟ್ ಮೂಲಕ ಹಿಂದಿನ ಚಕ್ರಕ್ಕೆ ಇಂಜಿನ್ ನ ಶಕ್ತಿಯನ್ನು ವರ್ಗಾಯಿಸುವ ವಿನ್ಯಾಸವನ್ನು ಅಳವಡಿಸಿಕೊಂಡರು.
ಯುದ್ಧಾನಂತರ ಜಪಾನ್ ನಲ್ಲಿ ಅಲ್ಲಲ್ಲಿ ಇಂಜಿನ್ ಅಳವಡಿಸಿದ ಸೈಕಲ್ ಗಳು ಕಂಡು ಬರಲು ಆರಂಭಿಸಿದವು, ಇದು ಕಾಕತಾಳೀಯವಾಗಿರದೆ ಅಂದಿನ ಪರಿಸ್ಥಿತಿಗೆ ತಕ್ಕ ಪ್ರತಿಕ್ರಿಯೆಯಾಗಿತ್ತು. ಮೋಟಾರ್ ಸೈಕಲ್ ನ ಉತ್ಪಾದನೆ ಆರಂಭವಾಗಿತ್ತಾದರೂ ಅವುಗಳ ಬೆಲೆ, ಸಾಮಾನ್ಯ ಜನರ ಕೈಗೆಟಕುವಂತಿರಲಿಲ್ಲ. ಅದಕ್ಕೆ ಹೋಲಿಸಿದರೆ ಚಿಕ್ಕ ಇಂಜಿನ್ ಅಳವಡಿಸಿದ ಸೈಕಲ್ ಗಳು ಹೆಚ್ಚು ಅನುಕೂಲಕರವೂ ಆಗಿ ಕೈಗೆಟಕುವ ಬೆಲೆಯಲ್ಲಿ ದೊರೆಯುತಿತ್ತು.
ಹೋಂಡಾ ಮೋಟಾರ್ ಕಂಪನಿಯನ್ನು ಪ್ರತಿನಿಧಿಸುವ ೨ ಸ್ಟ್ರೋಕ್ ೫೦ಸಿಸಿ ಜನರೇಟರ್ ಇಂಜಿನ್ ಹೊಂದಿದ ಸೈಕಲ್ ಗಳು ಆ ರೀತಿಯ ಉತ್ಪನ್ನಗಳಲ್ಲಿ ಮೊದಲನೆಯದಾಗಿತ್ತು.
ಹೋಂಡಾ ತಾಂತ್ರಿಕ ಸಂಶೋಧನಾ ಸಂಸ್ಥೆ ಯ ಸ್ಥಾಪನೆ
೧೯೪೬ರಲ್ಲಿ ಹಮಾಮಾತ್ಸು ಸಿಟಿಯ ಯಮಶೀತ-ಚೊ ಎಂಬಲ್ಲಿ ರುವ ಖಾಲಿ ಪ್ಲಾಟ್ ನಲ್ಲಿ ಪಂಪಾಸ್ ಹುಲ್ಲುಗಳ ನಡುವೆ ಸಿಪಾಯಿಗಳ ಮನೆಗಳಂತೆ ಇರುವ ಒಂದು ಚಿಕ್ಕ ಕಟ್ಟಡವನ್ನು ನಿರ್ಮಿಸಲಾಯಿತು. ಈ ಕಟ್ಟಡದದೊಳಗೆ ವಿ-ಬೆಲ್ಟ್ ಹೊಂದಿದ ಲೇತ್ ಯಂತ್ರ ಮತ್ತು ಹೊರಗೆ ಇನ್ನೂ ಅನೇಕ ಯಂತ್ರೋಪಕರಣಗಳಿದ್ದವು. ಕಟ್ಟಡದ ಪ್ರವೇಶದ್ವಾರದಲ್ಲಿ “ಹೋಂಡಾ ಟೆಕ್ನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ “ ಎಂಬ ಬೋರ್ಡನ್ನು ತೂಗು ಹಾಕಲಾಯಿತು. ಅಧ್ಯಕ್ಷ ಮತ್ತು ಹತ್ತು ಹದಿಮೂರು ಉದ್ಯೋಗಿಗಳು ಕಾರ್ಯನಿರತರಾಗಿದ್ದದು.
ಇಂಜಿನ್ ಅಳವಡಿಸಿದ ಸೈಕಲ್ ಅನ್ನು ಒಂದು ತಿಂಗಳ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಆ ಸಂಧರ್ಭವನ್ನು ಹೋಂಡಾ ಪತ್ನಿ ಸಾಚಿ ಹೀಗೆ ನೆನೆಪಿಸಿಕೊಳ್ಳುತ್ತಾರೆ.
“ನಾನು ಈ ರೀತಿಯ ಒಂದು ಯಂತ್ರ ಮಾಡಿದ್ದೇನೆ, ನೀನು ಅದನ್ನು ಚಲಾಯಿಸಿ ನೋಡು ಎಂದು ನನ್ನ ಪತಿ ಆ ಯಂತ್ರವನ್ನು ಮನೆಗೆ ತಂದು ಹೇಳಿದರು. ನಾನು ಸೈಕಲ್ ತುಳಿಯುತ್ತ ಆಹಾರ ಕೊಳ್ಳಲು ಹುಡುಕುತ್ತ ಸುಸ್ತಾಗುವುದನ್ನು ನೋಡಲಾಗದೆ ಈ ಯಂತ್ರವನ್ನು ತಯಾರಿಸಿದೆ ಎಂದು ಹೇಳಿದರೂ ಅದು ಅವರ ಕಟ್ಟು ಕಥೆಯಾಗಿತ್ತು. ಅದರಲ್ಲಿ ಕೆಲವಂಶ ಸತ್ಯವಾಗಿದ್ದರೂ ಇರಬಹುದು ಆದರೆ ನನ್ನ ಪ್ರಕಾರ ಮುಖ್ಯವಾಗಿ ಅವರು ಒಬ್ಬ ಮಹಿಳೆ ತಾವು ತಯಾರಿಸಿದ ಬೈಕನ್ನು ಚಲಾಯಿಸಬಹುದೇ ಎಂದು ತಿಳಿಯಬೇಕಿತ್ತು. ನಾನು ಅವರಿಗೆ ಗಿನ್ನಿ ಪಿಗ್ ಆಗಿದ್ದೆ. ಜನ ಜಂಗುಳಿ ಇದ್ದ ಎಲ್ಲ ಮುಖ್ಯ ರಸ್ತೆಗಳಲ್ಲಿ ನಾನು ಸೈಕಲ್ ಓಡಿಸುವಂತೆ ಮಾಡಿದರು, ಅದಕ್ಕೆ ನಾನು ನನ್ನ ಬಳಿ ಇದ್ದ ಉತ್ತಮ ಮೊಂಪೆ ಪ್ಯಾಂಟ್ ಧರಿಸಿ ಹೊರಟಿದ್ದೆ.” (ಮಹಿಳಾ ಕಾರ್ಮಿಕರು ಮತ್ತು ಕೃಷಿಕ ಮಹಿಳೆಯರು ಆಗ ತೊಡುತ್ತಿದ್ದ ದೊಗಳೆ ಪ್ಯಾಂಟ್ )
ಹೀಗೆ ಆರಂಭದ ಹೋಂಡಾ ಇತಿಹಾಸದಲ್ಲಿ ಪ್ರಥಮ ಮಹಿಳಾ ಟೆಸ್ಟ್ ರೈಡರ್ ಆದವರು, ಅದರ ಅಧ್ಯಕ್ಷರ ಪತ್ನಿ ಸಾಚಿ.
ಸಾಚಿಯವರು ಸೈಕಲ್ ಟೆಸ್ಟ್ ರೈಡ್ ಗೆ ಹೋದಾಗಲೆಲ್ಲ ಆಸುಪಾಸಿನ ಜನರು ಕುತೂಹಲದಿಂದ ಅವರನ್ನೇ ನೋಡುತ್ತಿದ್ದರು. ಮೋಟಾರ್ ಸೈಕಲ್ ನಂತೆ ಇರುವ ಸೈಕಲ್ ಒಂದನ್ನು ನಗರದ ಬೀದಿಗಳಲ್ಲಿ ಒಬ್ಬ ಮಹಿಳೆ ಓಡಿಸುತ್ತಿದ್ದರೆ ಆಶ್ಚರ್ಯ ವಾಗದೆ ಇರದೇ. ಇದರ ಒಂದು ಭಾಗವಾಗಿ ತಮ್ಮ ಹೊಸ ಯಂತ್ರವನ್ನು ಜನರಿಗೆ ಪರಿಚಯಿಸಿ, ಮನೆ ಮಾತಾಗಿಸುವ ಉದ್ದೇಶ ಕೂಡ ಹೋಂಡಾ ಅವರದಾಗಿತ್ತು.
“ಸ್ವಲ್ಪ ಸಮಯ ಈ ಸೈಕಲ್ ಚಲಾಯಿಸಿ ಮನೆಗೆ ಹಿಂದುರುಗಿ ಹೋದಾಗ ನನ್ನ ಮೊಂಪೆ ಪ್ಯಾಂಟ್ ಎಲ್ಲ ಆಯಿಲ್ ಆಗಿತ್ತು” ಸಾಚಿ ಮುಂದುವರೆಸಿದರು. “ಇದೇನು ಒಳ್ಳೆಯದಲ್ಲ, ನಿಮ್ಮ ಗ್ರಾಹಕರು ತಿರುಗಿ ಬಂದು ನಿಮ್ಮನ್ನು ಬೈಯುತ್ತಾರೆ”. ಸಾಮನ್ಯವಾಗಿ ಈ ಮಾತಿಗೆ “ಸುಮ್ಮನಿರು, ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ” ಎನ್ನುವವರು ಈ ಸಲ “ಹೌದಾ, ಬಯ್ಯಬಹುದು” ಎಂದು ನಮ್ರ ವಾಗಿ ನುಡಿದರು.
ಬಟ್ಟೆ ಆಯಿಲ್ ನಿಂದ ಕೊಳೆಯಾಗುವುದಕ್ಕೆ, ಕಾರ್ಬೋರೇಟರ್ ಮೂಲಕ ಇಂಧನ ಮತ್ತು ಆಯಿಲ್ ನ ಮಿಶ್ರಣ ಹೊರಗೆ ಚೆಲ್ಲುವುದೇ ಕಾರಣವಾಗಿತ್ತು. ಹೋಂಡಾ ಅವರು ಹೇಳಿದಂತೆಯೇ ಹೀಗಾಗದಂತೆ ತಡೆಯುವ ಸೂಕ್ತ ಪರಿಹಾರ ಕಂಡುಕೊಂಡು ಮಾರ್ಕೆಟ್ ಮಾಡೆಲ್ ನಲ್ಲಿ ಕಾರ್ಯಗತಗೊಳಿಸಲಾಯಿತು.
ವಯರ್ಲೆಸ್ ರೇಡಿಯೋ ಜನರೇಟರ್ ಇಂಜಿನ್ ಅನ್ನು ಮಿಕುನಿ ಶೋಕೋ ಎಂಬ ಕಂಪನಿ ತಯಾರಿಸುತ್ತಿತ್ತು. ಆ ಸಂಸ್ಥೆ ಕಾರ್ಬೋರೇಟರ್ ತಯಾರಿಕೆಯಲ್ಲಿಯೂ ಮುಂಚೂಣಿಯಲ್ಲಿತ್ತು. ಈಗಲೂ ಇದೆ. ಹೋಂಡಾ ಅವರು ಆ ಕಂಪನಿಯ ಕಾರ್ಖಾನೆಗಳಲ್ಲಿ ಉಳಿದ ಎಲ್ಲ ಇಂಜಿನ್ ಗಳನ್ನು ಕೂಡಲೇ ಹೋಗಿ ಖರೀದಿಸಿದರು.
ತಮಗೆ ಸಿಕ್ಕ ಸುಮಾರು ೫೦೦ ಇಂಜಿನ್ ಗಳನ್ನು ನೇರವಾಗಿ ಸೈಕಲ್ ಗಳಿಗೆ ಅಳವಡಿಸಿ ಮಾರಾಟ ಮಾಡದ ಅವರು, ಪ್ರತಿ ಇಂಜಿನ್ ಅನ್ನು ಬಿಚ್ಚಿ, ಅದರ ಮೇಲೆ ಸ್ವಲ್ಪ ಕೆಲಸ ಮಾಡಿ ಹಾಗೆಯೇ ಜೋಡಿಸಿ ಸೈಕಲ್ ಗೆ ಅಳವಡಿಸುತ್ತಿದ್ದರು. ಮಾರಾಟಕ್ಕೂ ಮುನ್ನ ಟೆಸ್ಟ್ ರೈಡ್ ಮಾಡುತ್ತಿದ್ದರು. ಇವತ್ತಿನ ಗ್ರಾಹಕರ ಕೈಗೊಪ್ಪಿಸುವ ಮೊದಲು ನೆಡೆಸುವ ತಪಾಸಣೆಯ (ಪ್ರಿ ಡೆಲಿವರಿ ಇನ್ಸ್ಪೆಕ್ಷನ್) ಮುಂಚಿನ ಆವೃತ್ತಿ ಇದಾಗಿತ್ತು.
ಹೋಂಡಾ ಟೆಕ್ನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಹೆಸರಿಗೆ ಕಳಂಕ ಬರದಂತೆ ನೋಡಿಕೊಳ್ಳಲು ಪ್ರತಿ ಸೈಕಲ್ ಇಂಜಿನ್ ಗು ಇದೇ ರೀತಿಯ ತಪಾಸಣೆ ಮಾಡಲಾಗುತ್ತಿತ್ತು.
ಹೀಗೆ ಡೆಲಿವರಿ ಮಾಡಿದ ಸೈಕಲ್ ಇಂಜಿನ್ ಗಳು ಬಾಯ್ಮಾತಿನಿಂದಲೇ ಜನಪ್ರಿಯವಾದವು. ಈ ವಿಶೇಷ ಯಂತ್ರದ ಬಗ್ಗೆ ಕೇಳಿ ನಗೋಯಾ, ಒಸಾಕಾ , ಟೋಕಿಯೋ ಮತ್ತು ಇತರ ಪ್ರಮುಖ ಸಿಟಿಗಳಿಂದಲೂ ಕೊಳ್ಳಲು ಬರುತ್ತಿದ್ದರು.
ಇರುವ ಮಾರ್ಪಾಡು ಮಾಡಿದ ಜನರೇಟರ್ ಇಂಜಿನ್ ಗಳು ಬೇಗನೆ ಖಾಲಿಯಾಗುವುದೆಂದು ಈಗ ಸ್ಪಷ್ಟವಾಗತೊಡಗಿತ್ತು. ಅಧ್ಯಕ್ಷ ಹೋಂಡಾ ರವರು ಸ್ವಂತ ಇಂಜಿನ್ ಅಭಿವೃದ್ಧಿಗೊಳಿಸಲು,ಮತ್ತು ಹೋಂಡಾ ಇಂಜಿನ್ ತಯಾರಿಕೆಯಲ್ಲಿ ಕಾರ್ಯ ನಿರತರಾದರು.
ಮೊದಲ ಉದ್ಯೋಗಿ – ಕಾವಾಶಿಮಾ
1947ನೇ ಮಾರ್ಚ್ ನಲ್ಲಿ ಕಿಯೋಶಿ ಕಾವಾಶಿಮಾ ಅವರು ಇಂಜಿನಿಯರಿಂಗ್ ಪದವಿ ಹೊಂದಿದ ಕಂಪನಿಯ ಮೊದಲ ಉದ್ಯೋಗಿಯಾದರು. ಅಧ್ಯಕ್ಷ ಹೋಂಡಾರವರ ಮನೆಯಲ್ಲಿ, ಒಂದು ಜಪಾನೀ ಸಾಂಪ್ರದಾಯಿಕ ಕೊತತ್ಸು (ಜಪಾನೀ ಕಾಲು ಶಾಖ ಮಾಡುವ ಮೇಜು) ಮೇಜಿನ ಹತ್ತಿರ ಕುಳಿತುಕೊಂಡು ಈ ಉದ್ಯೋಗ ಸಂದರ್ಶನ ನೆಡೆದಿತ್ತು, ಈ ಸಂಧರ್ಭವನ್ನು ಹೋಂಡಾರವರ ಪತ್ನಿ ಸಾಚಿ ಹೀಗೆ ನೆನಪಿಸಿಕೊಳ್ಳುತ್ತಾರೆ.
“ಈಗ ನಾನು ಒಬ್ಬ ವಿಶ್ವ ವಿದ್ಯಾಲಯದ ಪದವೀಧರನಿಗೆ ಕೊಡುವಷ್ಟು ಸಂಬಳ ಕೊಡಲು ಸಾಧ್ಯವಿಲ್ಲ” ಎಂದು ನನ್ನ ಪತಿ ಹೇಳಿದರು, ಅದಕ್ಕೆ ಕಾವಾಶಿಮಾ “ಪರವಾಗಿಲ್ಲ” ಎಂದು ಉತ್ತರಿಸಿದರು.
ಕಾವಶಿಮಾ ನೆನಪಿಸಿಕೊಳ್ಳುತ್ತಾ…
“ನಿಜ ಹೇಳಬೇಕೆಂದರೆ ಅದು ೧೯೪೭ ಆಗಿತ್ತು, ನಿರುದ್ಯೋಗದ ಪರಮಾವಧಿ. ಆಗ ಒಂದು ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಸಿಕ್ಕರೆ ಸಾಕಿತ್ತು ಅಷ್ಟೇ, ಸಂಬಳದ ಯೋಚನೆಯಿರಲಿಲ್ಲ. ಓಲ್ಡ್ ಮ್ಯಾನ್ (ಸೊಇಚಿರೊ ಹೋಂಡಾ ಅವರನ್ನು ಕರೆಯುತ್ತಿದ್ದ ರೀತಿ) ಹಮಾಮಾತ್ಸುವಿನಲ್ಲಿ ಒಬ್ಬ ಖ್ಯಾತ ಇಂಜಿನಿಯರ್ ಆಗಿದ್ದರು ಮತ್ತು ಅವರ ಕಂಪನಿಯಲ್ಲಿ ಕೆಲಸ ಮಾಡುವ ಸದವಕಾಶ ಇದಾಗಿತ್ತು. ಅಷ್ಟೇ ಅಲ್ಲದೆ ನನ್ನ ಮನೆ ಯಮಶೀತೋ -ಚೊ ನ ಪಕ್ಕದಲ್ಲೇ ಇರುವ ಮೊಟೊಮೆ-ಚೊ ಅಲ್ಲಿತ್ತು, ಕೆಲಸಕ್ಕೆ ಹೋಗಲು ಕೇವಲ ೫ ನಿಮಿಷದ ಕಾಲುದಾರಿ. ಯಾವುದೇ ಸಾರಿಗೆ ವೆಚ್ಚವಿಲ್ಲ. ಮೊದಲು ಖಂಡಿತವಾಗಿಯೂ ಸಂಬಳ ಕಡಿಮೆಯಿತ್ತು, ಕೆಲವೊಮ್ಮೆ ಸಂಬಳ ಸರಿಯಾದ ಸಮಯಕ್ಕೆ ಕೈಗೆ ಸಿಗುವುದೇ ಎಂದು ಯೋಚನೆಯಾಗುತ್ತಿತ್ತು. ಆದರೆ ನಾನು ಪೋಷಕರ ಮನೆಯಲ್ಲೇ ಇದ್ದು ಅವಿವಾಹಿತನಾಗಿದ್ದರಿಂದ ಹೇಗೋ ನಿಭಾಯಿಸಲು ಸಾಧ್ಯವಾಯಿತು. ಈಗ ಹಿಂತುರುಗಿ ನೋಡಿದರೆ ನಾನು ಅದ್ರಷ್ಟವಂತ ಎಂದೆನಿಸುತ್ತದೆ.”
“ನೀನು ನಾಳೆ ಕೆಲಸ ಶುರು ಮಾಡಬಹುದು” ಎಂದು ಹೋಂಡಾ ಕಾವಶಿಮಾನಿಗೆ ಹೇಳಿದರು
“ನಾನು ಬಂದಾಗ, ವಯರ್ಲೆಸ್ ರೇಡಿಯೋ ಜೆನೆರೇಟರ್ ಇಂಜಿನ್ ಗಳನ್ನು ಮಾರ್ಪಡಿಸುವುದು ನನ್ನ ಮೊದಲ ಕೆಲಸವಾಗಿತ್ತು. ಸುಮಾರು ೧೦ ಇಂಜಿನ್ ಗಳನ್ನು ಸೋಮವಾರ ನನಗೆ ನೀಡಲಾಗುತ್ತಿತ್ತು ಮತ್ತು ನಾನು ಅವುಗಳ ಜನರೇಟರ್ ವ್ಯವಸ್ಥೆಯನ್ನು ಬೇರ್ಪಡಿಸಿ, ಇಂಜಿನ್ ಅನ್ನು ಬಿಚ್ಚುತ್ತಿದ್ದೆ. ಮಂಗಳವಾರ ಎಲ್ಲ ಬಿಡಿಭಾಗಗಳನ್ನು ಸ್ವಚ್ಛ ಗೊಳಿಸಿ, ಬುಧವಾರ, ಗುರುವಾರ ಹಾಗು ಶುಕ್ರವಾರ ಅವುಗಳ ಮೇಲೆ ಕೆಲಸ ಮಾಡುತ್ತಿದ್ದೆ. ಶನಿವಾರ ಎಲ್ಲ ಬಿಡಿಭಾಗಗಳನ್ನು ಏಕೀಕೃತ ಗೊಳಿಸುತ್ತಿದ್ದೆ. ಶನಿವಾರ ಮಧ್ಯಾಹ್ನ ಇಂಜಿನ್ ಗಳನ್ನು ಸೈಕಲ್ ಗೆ ಅಳವಡಿಸಿ ಟೆಸ್ಟ್ ರೈಡ್ ಗೆ ಕೊಂಡು ಹೋಗುತ್ತಿದ್ದೆ. ನಾನು ಟೆಸ್ಟ್ ರೈಡ್ ಎಂದು ಹೇಳುವ ಇದು, ಕೇವಲ ಸೈಕಲ್ ಅನ್ನು ಆಸುಪಾಸಿನಲ್ಲಿದ್ದ ಗುಡ್ಡವೊಂದಕ್ಕೆ ಹೊಡೆದುಕೊಂಡು ಹೋಗುವುದಾಗಿತ್ತು ಅಷ್ಟೆ. “ ಎಂದು ನಗಾಡಿಕೊಂಡು ಕಾವಾಶಿಮಾ ಹೇಳುತ್ತಾರೆ.
“ಟೆಸ್ಟ್ ರೈಡ್ ಕೊನೆಗೊಳ್ಳುವ ಸಮಯಕ್ಕೆ ಸರಿಯಾಗಿ, ವ್ಯಾಪಾರಿಗಳ – ನಾವು ಇವತ್ತು ಡೀಲರ್ ಎಂದು ಕರೆಯಬಹುದಾದ – ದೊಡ್ಡ ಗುಂಪೊಂದು ಅಲ್ಲಿ ಕಾಯುತ್ತಿತ್ತು. ಒಬೊಬ್ಬರು ಮುಂಗಡ ಹಣ ಪಾವತಿಸಿ ಎರಡು ಇಂಜಿನ್ ಗಳನ್ನು ದೊಡ್ಡ ಚೀಲಕ್ಕೆ ತುಂಬಿಸಿಕೊಂಡು ಟೋಕಿಯೋ, ಒಸಾಕಾ ಮತ್ತು ದೇಶದ ವಿವಿದೆಡೆ ಕೊಂಡೊಯ್ಯುತ್ತಿದ್ದರು. ಬಿಲ್ ಗಳ ಸುರುಳಿ ನೋಡಿ ನಾನು ಈ ತಿಂಗಳು ಸಂಬಳ ಸರಿಯಾದ ಸಮಯಕ್ಕೆ ಸಿಗಬಹುದು ಎಂದು ಯೋಚಿಸಿ ತುಂಬಾ ಖುಷಿ ಪಡುತ್ತಿದ್ದೆ. “
ಸೊಇಚಿರೊ ಹೋಂಡಾರವರ ಇನ್ನೊಂದು ಮುಖ
ಉದ್ಯೋಗಿಗಳ ಮೇಲೆ ರೇಗಾಡುವುದಕ್ಕೆ ಓಲ್ಡ್ ಮ್ಯಾನ್ ತುಂಬಾ ಖ್ಯಾತರಾಗಿದ್ದರು. ಆದರೆ ಹೋಂಡಾ ರಿಸರ್ಚ್ ಇನ್ಸ್ಟಿಟ್ಯೂಟ್ ನ ದಿನಗಳಲ್ಲಿ ನಾವು ಅವರ ಇನ್ನೊಂದು ಮುಖವನ್ನೂ ನೋಡಿದೆವು. ಒಂದು ದಿನ ಅವರ ಪತ್ನಿ ಯಮಶೀತ ಕಾರ್ಖಾನೆಯ ಕಚೇರಿಗೆ ಬಂದಿದ್ದರು. ನಾನು ಶ್ರೀಮತಿ ಹೊಂಡರವರು ಇಲ್ಲಿ ಬಂದಿದ್ದರಂತೆ, ಏನು ವಿಚಾರ ಎಂದು ಕೇಳಿದಾಗ, ಅಕೌಂಟ್ ನೋಡಿಕೊಳ್ಳುವವ ನನ್ನಲ್ಲಿ ಹೇಳಿದ, ಶ್ರೀಮತಿ ಹೋಂಡಾ ನನ್ನನ್ನು ಕೇಳಿದರು “ಅವರು ಯಾವುದೇ ಹಣವನ್ನು ಮನೆಖರ್ಚಿನ ಖಾತೆಗೆ ಹಾಕಿಲ್ಲ, ಹಾಗಾಗಿ ನನಗೆ ಶಾಪಿಂಗ್ ಮಾಡಲು ಆಗುತ್ತಿಲ್ಲ, ದಯವಿಟ್ಟು ಕ್ಷಮಿಸಿ ಆದರೆ ನೀವು ಸ್ವಲ್ಪ ಹಣವನ್ನು ನನಗೆ ಸಾಲ ನೀಡಬಹುದೇ?”
ಓಲ್ಡ್ ಮ್ಯಾನ್ ಗೆ ಉದ್ಯೋಗಿಗಳ ಸಂಬಳ ಮುಖ್ಯವಾಗಿತ್ತು, ಹೆಂಡತಿ, ಮಕ್ಕಳು ಆಮೇಲೆ ಬರುತ್ತಿದ್ದರು. ಆ ರೀತಿಯ ಮನುಷ್ಯ ಅವರು.
“ಆದರೂ ಈ ಸಂಗತಿಯು ಕಂಪನಿ, ಹೋಂಡಾ ಮೋಟಾರ್ ಕೋ ಲಿಮಿಟೆಡ್ ಆಗುವ ಮೊದಲು” ಕಾವಶಿಮಾ ಮುಂದುವೆರೆಸಿದರು “ಕಂಪನಿ ನೋಂದಣಿಯಾದ ಮೇಲೆ ಆ ರೀತಿ ಯಾವತ್ತೂ ಆಗಲಿಲ್ಲ.”
ಕಂಪನಿಯ ಉತ್ಪನ್ನಗಳು ಜಾಸ್ತಿ ಮಾರಾಟವಾಗುತ್ತಿದ್ದಂತೆ, ಹೋಂಡಾ ಟೆಕ್ನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಲೆಕ್ಕಪತ್ರ ನಿರ್ವಹಣೆ ಹೋಂಡಾರವರಿಗೆ ಕಷ್ಟವಾಗ ತೊಡಗಿತು. ಕಂಪನಿಗೆ ಬರಬೇಕಾಗಿರುವ ಮೊತ್ತ ದಿನೇ ದಿನೇ ಜಾಸ್ತಿಯಾಗುತ್ತಿತ್ತು. ಹೋಂಡಾರವರು ಹಣಕಾಸಿನ ಲೆಕ್ಕಪತ್ರಗಳ ನಿರ್ವಹಣೆ ಸ್ವಲ್ಪವೂ ಇಷ್ಟ ಪಡುತ್ತಿರಲಿಲ್ಲ.
“ ಅದೇ ನನಗೆ ಆಶ್ಚರ್ಯ” ಕಾವಶಿಮಾ ಮುಂದುವರೆಸಿದರು. “ಉತ್ಪನ್ನದ ವೆಚ್ಚ, ಕಾರ್ಖಾನೆಯಲ್ಲಿ ಉತ್ಪಾದನೆಯ ದಕ್ಷತೆಯಂತಹ ವಿಷಯ ಬಂದರೆ ಎಲ್ಲರಿಗಿಂತ ಹೆಚ್ಚಿನ ಶಿಸ್ತು ಅವರಲ್ಲಿತ್ತು. ಅಷ್ಟೇ ಅಲ್ಲದೆ ತರ್ಕಬದ್ಧವಾಗಿ ಆಲೋಚಿಸುತ್ತಿದ್ದರು. ಆದರೆ ಮಾರಾಟದ ವಿಷಯ ಬಂದಾಗ ಮಾತ್ರ ಅವರಿಂದ ನಿಭಾಯಿಸಲು ಆಗುತ್ತಿರಲಿಲ್ಲ”
ಮಾರ್ಪಾಡು ಮಾಡಿದ ಜನರೇಟರ್ ಇಂಜಿನ್ ಗಳು ಬೇಗನೆ ಖಾಲಿಯಾಗುವುದೆಂದು ಈಗಾಗಲೇ ಸ್ಪಷ್ಟವಾಗಿತ್ತು. ಅಧ್ಯಕ್ಷ ಹೋಂಡಾರವರು ಸ್ವಂತ ಇಂಜಿನ್ ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿದ್ದರು.