ಸರಳವಾಗಿ ಉತ್ತರಿಸಬೇಕೆಂದರೆ ನಮ್ಮ ನಂಬಿಕೆಯನ್ನು ಪುಷ್ಟೀಕರಿಸುವ ಪುರಾವೆಗಳನ್ನೇ ಹುಡುಕುವುದರಿಂದ. ಇದನ್ನೇ ದೃಢೀಕರಣ ಪಕ್ಷಪಾತ ಎನ್ನುತ್ತಾರೆ
ದೃಢೀಕರಣ ಪಕ್ಷಪಾತವೆಂದರೆ ನಮ್ಮ ಪೂರ್ವಗ್ರಹೀತ ನಂಬಿಕೆಗಳನ್ನು ದೃಢೀಕರಿಸುವ ಪುರಾವೆಗಳನ್ನೇ ಹುಡುಕುವ ಪ್ರವೃತ್ತಿ. ಅದನ್ನು ಬೆಂಬಲಿಸುವ ಪುರಾವೆಗಳನ್ನೇ ಓಲೈಸುತ್ತ, ಅದರ ವಿರುದ್ಧವಾದ ಪುರಾವೆಗಳನ್ನು ನಿರ್ಲಕ್ಷಿಸಿವುದು ಅಥವಾ ಹುಡುಕಲು ಪ್ರಯತ್ನಿಸದೇ ಇರುವುದು. (ಅಮೆರಿಕನ್ ಸೈಕಾಲಜಿ ಅಸೋಸಿಯೇಷನ್)
ಇದೇನೆಂದರೆ ನಮಗೆ ಯಾವುದೇ ವಿಷಯದ ಬಗ್ಗೆ ಹೊಸ ಮಾಹಿತಿಗಳು ದೊರೆತಾಗ ಅವನ್ನು ನಮಲ್ಲಿ ಈ ಮೊದಲೇ ಇರುವ ನಂಬಿಕೆ, ಕಲ್ಪನೆ ಅಥವಾ ಸಿದ್ಧಾಂತಗಳ ಆದರದ ಮೇಲೆ ಅರ್ಥೈಸುವ ನಮ್ಮ ಪ್ರವೃತ್ತಿ. ನಮ್ಮ ಪೂರ್ವಗ್ರಹ ಆಲೋಚನೆಗಳನ್ನೇ ಸಮರ್ಥಿಸುವ ಮಾಹಿತಿಗಳನ್ನೇ ಶೋಧಿಸಿದರೆ ಅದೇ ರೀತಿಯ ಮಾಹಿತಿಗಳೆ ನಮಗೆ ದೊರೆಯುತ್ತದೆ. ನಿಜವಾದ ಪುರಾವೆಗಳು ಇದ್ದರೂ ಸಹ ನಮ್ಮ ನಂಬಿಕೆಗಳಿಗೆ ವಿರುದ್ಧವಾಗಿದ್ದರೆ, ಅದನ್ನು ನಿರ್ಲಕ್ಷಿಸಿ ಬಿಡುತ್ತೇವೆ.
ನಮ್ಮ ಪೂರ್ವಗ್ರಹಗಳನ್ನು ದೃಢಪಡಿಸುವ ಸತ್ಯ ಪುರಾವೆಗಳಿಗೆ ನಾವು ಒಲವು ಜಾಸ್ತಿ ತೋರುವುದರಿಂದ, ಈ ಅರಿವಿನ ಪಕ್ಷಪಾತವನ್ನು ದೃಢೀಕರಣ ಪಕ್ಷಪಾತ ಎನ್ನುತ್ತಾರೆ.
ಕೆಲವು ಉದಾಹರಣೆಗಳು
೧. ಸಾಮಾಜಿಕ ಜಾಲತಾಣ: ಜನ ತಮ್ಮ ದೃಷ್ಟಿಕೋನಕ್ಕೆ ಅನ್ವಯವಾಗುವಂತಹ ಸುದ್ದಿಗಳನ್ನೇ ಓದುವುದು. ಬೇರೆ ಬೇರೆ ನ್ಯೂಸ್ ಚಾನೆಲ್ ಗಳು ಸುದ್ದಿಗಳನ್ನು (ಕೆಲವೊಮ್ಮೆ ಒಂದೇ ಸುದ್ದಿ) ವಿಭನ್ನವಾಗಿ ಪ್ರಸ್ತುತ ಪಡಿಸುತ್ತಾರೆ. ಕೆಲವು ರೋಚಕ ಶೀರ್ಷಿಕೆ ಹೊಂದಿದ್ದರೆ ಮತ್ತು ಕೆಲವು ತೀರಾ ಪಕ್ಷಪಾತಿಯಾಗಿರುತ್ತದೆ. ಜನ ತಮ್ಮ ದೃಷ್ಟಿಕೋನಕ್ಕೆ ಯಾವುದು ಸರಿ ಹೊಂದುವುದೋ ಅಂತಹ ಚಾನೆಲ್ ಅನ್ನು ಆಯ್ದು ನೋಡಿ ತಮ್ಮ ಪಕ್ಷಪಾತದ ಅಭಿಪ್ರಾಯವನ್ನು ಗಟ್ಟಿ ಗೊಳಿಸುತ್ತಾರೆ.
೨. ಕೆಟ್ಟ ನಿರ್ಧಾರಗಳು: Confirmation Bias ನಿಂದ ತೆಗೆದುಕೊಂಡ ಅನೇಕ ನಿರ್ಧಾರಗಳು, ಕೆಟ್ಟ ಪರಿಣಾಮಗಳಿಗೆ ಎಡೆ ಮಾಡಿಕೊಟ್ಟಿದೆ. ಉದಾಹರಣೆಗೆ ನಿರ್ದಿಷ್ಟ ಹಣಕಾಸಿನ ಹೂಡಿಕೆಯು ಉತ್ತಮವಾಗಿದೆ ಎಂದು ನಮಗೆ ಮನವರಿಕೆಯಾದಲ್ಲಿ, ಅದರಿಂದ ನಷ್ಟವಾಗುವ ಸಾಧ್ಯತೆಯ ಎಚ್ಚರಿಕೆಯ ಚಿಹ್ನೆಗಳನ್ನು ನಾವು ನಿರ್ಲಕ್ಷಿಸಬಹುದು. ಅಥವಾ, ನಾವು ಒಂದು ನಿರ್ದಿಷ್ಟ ಕಂಪನಿಯಲ್ಲಿ ಕೆಲಸ ಪಡೆಯಲು ನಿರ್ಧರಿಸಿದ್ದರೆ, ನಮಗೆ ಹೆಚ್ಚು ಸೂಕ್ತವಾದ ಇತರ ಅವಕಾಶಗಳನ್ನು ನಾವು ಪರಿಗಣಿಸದೇ ಇರಬಹುದು.
ಮದುವೆ, ಚುನಾವಣೆ, ವೃತ್ತಿ, ಶಿಕ್ಷಣ, ಆರೋಗ್ಯ, ಬಂಡವಾಳ ಹೂಡಿಕೆ ಹೀಗೆ ಅನೇಕ ಮುಖ್ಯ ವಿಚಾರಗಳಲ್ಲಿ ನಿರ್ಣಯ ತೆಗೆದುಕೊಳ್ಳುವಾಗ , ಪ್ರಜ್ಞಾಪೂರ್ವಕವಾಗಿ ನಮ್ಮ ಪೂರ್ವಾಗ್ರಹಗಳನ್ನು ಬದಿಗೊತ್ತಿ ಎಲ್ಲ ರೀತಿಯಿಂದಲೂ ಆಲೋಚಿಸುವುದು ಬಹಳ ಮುಖ್ಯ.