ಅಂದು ೨೧ ಮೇ ೧೯೩೦. ಗುಜರಾತಿನ ಕರಾವಳಿಯ ಧರಸಾನ ಎಂಬ ಪುಟ್ಟ ಹಳ್ಳಿಯಲ್ಲಿ ಸುಡುತ್ತಿದ್ದ ಸೂರ್ಯ ತನ್ನ ಪ್ರಕಾಶವನ್ನು ಕಳೆದುಕೊಂಡು ಕೆಂಪು ಬಣ್ಣಕ್ಕೆ ತಿರುಗಿದ್ದ. ಮನೆಯಲ್ಲೇ ನೇಯ್ದ ಒರಟು ಖಾದಿ ದೋತ್ರ, ಅಂಗಿ, ಗಾಂಧಿ ಟೊಪ್ಪಿ ಧರಿಸಿದ ಸುಮಾರು ೨೫೦೦ ಸತ್ಯಾಗ್ರಹಿಗಳು ಧರಸಾನದ ದಿಬ್ಬಗಳ ಮೇಲೆ ಸೇರಿದ್ದರು.  

ಆ ಸತ್ಯಾಗ್ರಹಿಗಳು ಮುನ್ನೆಡೆಯುವ ಮುನ್ನ ಪ್ರಾರ್ಥನೆ ಮಾಡಬೇಕೆಂದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಕೇಳಿಕೊಂಡಾಗ ಇಡೀ ಗುಂಪು ಮಂಡಿಯೂರಿತು. ಅವರನ್ನುದ್ದೇಶಿಸಿ ಭಾವೋದ್ರಿಕ್ತರಾಗಿ ಸರೋಜಿನಿ ನಾಯ್ಡು ಉಪದೇಶಿಸುತ್ತಾರೆ  “ಗಾಂಧೀಜಿಯವರ ದೇಹ ಸೆರೆಮನೆಯಲ್ಲಿದ್ದರೂ ಅವರ ಆತ್ಮ ಇಲ್ಲೇ ಇದೆ. ಭಾರತದ ಘನತೆ ನಿಮ್ಮ ಕೈಯಲ್ಲಿದೆ. ನೀವು ಯಾವುದೇ ಪರಿಸ್ಥಿತಿಯಲ್ಲೂ ಹಿಂಸಾಚಾರಕ್ಕೆ ಮುಂದಾಗಬಾರದು. ನಿಮ್ಮನ್ನು ಅವರು ಹೊಡೆಯುತ್ತಾರೆ ಆದರೆ ನೀವು ಅವರನ್ನು ತಡೆಯಬಾರದು, ಕೈ ಮೇಲೆತ್ತಿ ಹೊಡೆತ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬಾರದು.” ಶಿಳ್ಳೆ ಚಪ್ಪಾಳೆಗಳೊಂದಿಗೆ ಅವರ ಮಾತು ಮುಗಿಯುತ್ತದೆ.

ಉಪ್ಪಿನ ಸತ್ಯಾಗ್ರಹವೆಂದೇ ಪ್ರಸಿದ್ಧವಾದ ದಂಡಿ ಪಾದಯಾತ್ರೆಯ ಮುಂದುವರಿದ ಭಾಗವಾಗಿ ಬ್ರಿಟಿಷ್ ಸುಪರ್ದಿಯಲ್ಲಿದ್ದ ಧರಸಾನದ ಉಪ್ಪಿನ ಕಾರ್ಯಾಗಾರಕ್ಕೆ ದಾಳಿ ಮಾಡುವುದಕ್ಕೆ ಗಾಂಧೀಜಿ ಯೋಚಿಸಿದರು. ಆಗ ಭಾರತಲ್ಲಿ ವೈಸರಾಯ್ ಆಗಿದ್ದ ಲಾರ್ಡ್ ಇರ್ವಿನ್ ಗೆ ಪತ್ರಬರೆದು ದಂಡಿಯಿಂದ ಸುಮಾರು ೪೦ ಕಿಲೋಮೀಟರ್ ದೂರದಲ್ಲಿದ್ದ ಧರಸಾನಕ್ಕೆ ಹೊರಟಿದ್ದರು. ಅರ್ಧ ದಾರಿಯಲ್ಲಿ, ಅರ್ಧ ರಾತ್ರಿಯಲ್ಲಿ ಅವರನ್ನು ಬಂಧಿಸಲಾಯಿತು. ಗಾಂಧೀಜಿಯ ಬಂಧನವಾದರೂ ಸತ್ಯಾಗ್ರಹ ನಿಂತಿರಲಿಲ್ಲ. ಅಬ್ಬಾಸ್ ತ್ಯಾಬ್ಜಿ ಎಂಬ ನಾಯಕರ ಮುಂದಾಳತ್ವದಲ್ಲಿ ಸತ್ಯಾಗ್ರಹಿಗಳು ಧರಸಾನದತ್ತ ಮುನ್ನೆಡದರು. ಮಧ್ಯದಲ್ಲೇ ಅವರನ್ನೂ ಬಂಧಿಸಿದಾಗಲೇ ಸರೋಜಿನಿ ನಾಯ್ಡು ಅವರು ಈ ಸತ್ಯಾಗ್ರಹದ ಮುಖಂಡತ್ವವನ್ನು ವಹಿಸಿದ್ದರು. 

ಅವರ ಮಾತುಗಳನ್ನು ಕೇಳಿ ಹುರುಪಿನಿಂದ  ಸತ್ಯಾಗ್ರಹಿಗಳು ನಿಧಾನವಾಗಿ ಮತ್ತು ಮೌನವಾಗಿ ಅಲ್ಲಿಂದ ಅರ್ಧ ಮೈಲಿ ದೂರದಲ್ಲಿದ್ದ ಉಪ್ಪಿನ ದಾಸ್ತಾನಿನತ್ತ ಮುನ್ನೆಡೆದರು.  ಗಾಂಧೀಜಿಯವರ ಎರಡನೇ ಮಗ ಮಣಿಲಾಲ್ ಈ ಸತ್ಯಾಗ್ರಹಿಗಳ ಗುಂಪಿನ ಮುಂಚೂಣಿಯಲ್ಲಿದ್ದ. ಅವರಲ್ಲೇ ಗಾಯಾಳುಗಳಿಗೆ ನೆರವಾಗಲೆಂದು ನೇಮಿಸಿದ್ದವರು, ಕೈಯಲ್ಲೇ ಕೆಂಪು ಬಣ್ಣ ಬಳಿದ ಕಚ್ಚಾ ಬಟ್ಟೆಯನ್ನು ಕೂಡಿಸುವ ಚಿಹ್ನೆಯಂತೆ ತೋಳ ಮೇಲೆ ಪಿನ್ ನ ಸಹಾಯದಿಂದ ಧರಿಸಿದ್ದರು. ಕಂಬಳಿಗಳೇ ಅವರ ಸ್ಟ್ರೆಚೆರ್. ಸತ್ಯಾಗ್ರಹಿಗಳ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ದೂರ ದೂರಕ್ಕೂ ಕೇಳಿಸುತಿತ್ತು. 

ಇತ್ತ ಬ್ರಿಟಿಷರು ಉಪ್ಪಿನ ದಾಸ್ತಾನಿನ ಸುತ್ತಲೂ ನೀರು ತುಂಬಿದ ಕಣಿವೆ ನಿರ್ಮಿಸಿ ಮುಳ್ಳಿನ ತಂತಿಯ ಬೇಲಿ ಹಾಕಿದ್ದರು. ಸುಮಾರು ೪೦೦ ಸ್ಥಳೀಯ ಆದರೆ ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದ ಖಾಕಿ ಚಡ್ಡಿ , ಕಂದು ಬಣ್ಣದ ಪೇಟ ಧರಿಸಿದ್ದ  ಪೊಲೀಸರನ್ನು ಧರಸಾನದ ಈ ಉಪ್ಪಿನ ದಾಸ್ತಾನನ್ನು ಕಾಯಲು ನಿಯೋಜಿಸಲಾಗಿತ್ತು. ಅದಲ್ಲದೆ ಇಪ್ಪತ್ತೈದು ಜನರ ರೈಫಲ್ ಪಡೆ ಯಾವ ಕ್ಷಣದಲ್ಲೂ ಗುಂಡು ಹಾರಿಸಲು ಸಿದ್ಧವಾಗಿತ್ತು. ಪೊಲೀಸರು ಐದು ಅಡಿ ಉದ್ದದ ಲೋಹದ ತುದಿಯುಳ್ಳ ಲಾಠಿ ಹಿಡಿದು ಬ್ರಿಟಿಷ್ ಮೇಲಧಿಕಾರಿಗಳ ಆಜ್ಞೆಗಾಗಿ ಕಾಯುತ್ತಿದ್ದರು.   

ಮೌನವಾಗಿ ಮುನ್ನೆಡೆಯುತ್ತಿದ್ದ ಸತ್ಯಾಗ್ರಹಿಗಳ ದಂಡು ದಾಸ್ತಾನಿನ ಸುಮಾರು ೧೦೦ ಗಜ ದೂರದಲ್ಲಿ ನಿಂತಿತು. ಅವರಲ್ಲೇ ಕೆಲವು ಮಂದಿಯ ಗುಂಪೊಂದು ಮುಂದುವರಿದು ಕಣಿವೆ ದಾಟಿ ಮುಳ್ಳು ತಂತಿ ಬೇಲಿಯಿಂದ ಸುತ್ತುವರಿದ ದಾಸ್ತಾನಿನ ಹತ್ತಿರ ಸಮೀಪಿಸಿತು. ಅವರಲ್ಲೇ ಕೆಲವರು ತಾವು ತಂದಿದ್ದ ಹಗ್ಗದಿಂದ ತಂತಿ ಬೇಲಿಯ ಆಧಾರಕ್ಕಾಗಿ ನೆಟ್ಟ ಕಂಬಗಳನ್ನು ಸುತ್ತಿ ಎಳೆಯಲು ನೋಡಿದರು. ಪೊಲೀಸ್ ಅಧಿಕಾರಿಗಳು ಅವರನ್ನು ಕೂಡಲೇ ಅಲ್ಲಿಂದ ನಿರ್ಗಮಿಸುವಂತೆ ಇತ್ತೀಚಿಗೆ ಜಾರಿಗೆ ಬಂದಿದ್ದ  ಒಂದೇ ಜಾಗದಲ್ಲಿ ಐದು ಜನಕ್ಕೂ ಮಿಕ್ಕಿ ಗುಂಪು ಸೇರಬಾರದೆಂಬ ನಿಷೇದಾಜ್ಞೆಯಂತೆ ಆದೇಶಿಸಿದರು. 

ಮೌನವಾಗಿಯೇ ಈ ಆಜ್ಞೆಯನ್ನು ತಿರಸ್ಕರಿಸಿ ದಂಡು ನಿಧಾನವಾಗಿ ಮುಂದುವರಿಯಿತು. 

ಅಧಿಕಾರಿಗಳ ಅಪ್ಪಣೆಯಾಗುತ್ತಿದ್ದಂತೆ ಸುಮಾರು ಇಪ್ಪತ್ತು ಪೊಲೀಸರು ಇದ್ದಕಿದ್ದಂತೆ ಮುಂಬರುತ್ತಿದ್ದ ಸತ್ಯಾಗ್ರಹಿಗಳ ಮೇಲೆರಗಿ ತಮ್ಮ ಲೋಹದ ತುದಿಯ ಲಾಠಿಯನ್ನು ಎರಡೂ ಕೈಗಳಿಂದ ಮೇಲೆತ್ತಿ ಬಲವಾಗಿ ಅವರ ತಲೆಯ ಮೇಲೆ ಹೊಡೆಯಲಾರಂಭಿಸಿದರು. 

ಯಾವುದೇ ಪ್ರತಿರೋಧ ತೋರದೆ ಆ ಹೊಡೆತಗಳನ್ನು ಸತ್ಯಾಗ್ರಹಿಗಳು ಸ್ವೀಕರಿಸಿದರು. ಒಬ್ಬನೇ ಒಬ್ಬ ಸತ್ಯಾಗ್ರಹಿಯೂ ಹೊಡೆತವನ್ನು ತಪ್ಪಿಸಿಕೊಳ್ಳಲು ಕೈ ಕೂಡ ಎತ್ತಲಿಲ್ಲ. ತರಗೆಲೆಗಳಂತೆ ಒಬ್ಬೊಬ್ಬರಾಗಿ ಧರಾಶಾಹಿಗಳಾದರು. ಲಾಠಿಯ ಬಿಗಿ ಪೆಟ್ಟು ಬುರುಡೆಯ ಮೇಲೆ ಬಿದ್ದಾಗ ಕೇಳಿಸುವ ಸಪ್ಪಳವನ್ನು ಸಹಿಸಲಾರದೆ ನೋಡುತ್ತಾ ನಿಂತಿದ್ದ ಇತರ ಸತ್ಯಾಗ್ರಹಿಗಳು ಕೊರಗಿದರು. ಪ್ರತಿ ಹೊಡೆತಕ್ಕೂ ಬಾಯಿಯಿಂದ ಉಸಿರೆಳೆದುಕೊಳ್ಳುತ್ತಾ ಕರುಣೆಯಿಂದ ಮರುಗಿದರು. 

ಹೊಡೆತ ತಿಂದವರು ತಲೆ ಒಡೆದ ಭುಜ ಮುರಿದ ನೋವಿನಿಂದ ನರಳುತ್ತಾ ಅಥವಾ ಪ್ರಜ್ಞಾಹೀನರಾಗಿ ವಕ್ರವಾಗಿ ನೆಲದಲ್ಲಿ ಬಿದ್ದಿದ್ದರು. ಎರಡು ಮೂರು ನಿಮಿಷದಲ್ಲಿ ನೆಲದ ಮೇಲೆ ದೇಹಗಳ ಕಂಬಳಿ ಹಾಸಿದಂತಾಗಿತ್ತು. ಅವರು ಧರಿಸಿದ್ದ ಬಿಳಿಯ ಬಟ್ಟೆಯ ಮೇಲೆ ಕೆಂಪು ರಕ್ತದ ಕಲೆ ವಿಸ್ತರಿಸುತ್ತಾ ಹೋಯಿತು. 

ಗುಂಪಿನಲ್ಲಿ ಉಳಿದವರು ಒಬ್ಬರಾದ ಮೇಲೆ ಒಬ್ಬರಂತೆ ಸರತಿಯ ಸಾಲನ್ನು ಮುರಿಯದೇ ಮೌನವಾಗಿ ಛಲದಿಂದ ತಮ್ಮನ್ನು ಹೊಡೆದುರುಳಿಸುವವರೆಗೂ ಮುನ್ನೆಡೆದರು. ಒಂದು ಗುಂಪಿನ ಎಲ್ಲರೂ ಧರೆಗುರುಳಿದ ಕೂಡಲೇ ಗಾಯಾಳು ರಕ್ಷಣಾ ತಂಡದವರು ಸ್ಟ್ರೆಚೆರ್ ಹಿಡಿದು ಓಡಿ ಬಂದು ಗಾಯಾಳುಗಳನ್ನು ಒಂದು ಗುಡಿಸಲನ್ನೇ ತಾತ್ಕಾಲಿಕವಾಗಿ ಪರಿವರ್ತಿಸಿದ ಆಸ್ಪತ್ರೆಗೆ ಸಾಗಿಸಿದರು. 

ಈಗ ಇನ್ನೊಂದು ಗುಂಪು ಮುಂದುವರಿಯಲು ಅಣಿಯಾಗಿತ್ತು. ನಾಯಕರು ಅವರನ್ನು ಯಾವುದೇ ಕಾರಣಕ್ಕೂ ಸ್ವಯಂ ನಿಯಂತ್ರಣ ಕಳೆದುಕೊಳ್ಳಬಾರದೆಂದು ಮನವಿ ಮಾಡುತ್ತಿದ್ದರು. ಇನ್ನು ಕೆಲವೇ  ಕ್ಷಣದಲ್ಲಿ  ನನ್ನನ್ನು ಹೊಡೆದುರುಳಿಸಹಹುದು ಅಥವಾ ಕೊಲ್ಲಬಹುದು ಎಂದು ಪ್ರತಿಯೊಬ್ಬನಿಗೂ ತಿಳಿದಿದ್ದರೂ ಅವರ ಮುಖದಲ್ಲಿ ನಡುಕವಾಗಲೀ ಭಯವಾಗಲೀ ಇರಲಿಲ್ಲ. ಇದ್ದದ್ದು ಭಾರತಮಾತೆಯನ್ನು ಸೆರೆಯಿಂದ ಬಿಡಿಸಬೇಕೆಂಬ ಛಲ ಮಾತ್ರ. ಅಲ್ಲಿ ಯಾವುದೇ ಪ್ರೋತ್ಸಾಹದ ಸಂಗೀತವಾಗಲೀ, ಹರ್ಷೋದ್ಘಾರವಾಗಲೀ ಅಥವಾ ನೋವು, ಸಾವಿನಿಂದ ತಪ್ಪಿಸ್ಕೊಳ್ಳುವ ಸಾಧ್ಯತೆಗಳಾಗಲೀ ಇರಲಿಲ್ಲ. ಆದರೂ ತಲೆ ಎತ್ತಿ, ಎದೆಯುಬ್ಬಿಸಿ ಸತ್ಯಾಗ್ರಹಿಗಳು ಮುನ್ನಡೆದರು. 

ಪೊಲೀಸರು ಧಾವಿಸಿ ಬಂದು ಕ್ರಮವಾಗಿ, ಯಾಂತ್ರಿಕವೆಂಬಂತೆ ಎರಡನೇ ಗುಂಪನ್ನೂ ಹೊಡೆದು ಬಡಿದು ಬೀಳಿಸಿದರು. ಒಬೊಬ್ಬರೂ ಅವರನ್ನು ಹೊಡೆದುರುಳಿಸುವವರೆಗೂ ಉಪ್ಪಿನ ದಾಸ್ತಾನಿನತ್ತ ಮುನ್ನೆಡೆದರು. ಅಲ್ಲಿ ಯಾವುದೇ ಪ್ರತಿರೋಧ, ಕೂಗು ಇರಲಿಲ್ಲ, ಕೆಳಗೆ ಬಿದ್ದಾಗ ಆಕ್ರಂದನ ಮಾತ್ರ ಇತ್ತು. 

ಗಾಯಾಳುಗಳನ್ನು ಸಾಗಿಸಲು ಸಾಕಷ್ಟು ಜನರಿರಲಿಲ್ಲ, ಹದಿನೆಂಟು ಜನರನ್ನು ಒಮ್ಮೆಲೇ ಸ್ಟ್ರೆಚರ್ ಮೂಲಕ ಸಾಗಿಸುತ್ತಿದ್ದರೆ ನಲ್ವತ್ತೆರಡು ಮಂದಿ ಇನ್ನೂ ಅಲ್ಲಿಯೇ ಬಿದ್ದು ರಕ್ತಸ್ರಾವದಿಂದ ನರಳುತ್ತಾ ಅವರನ್ನು ಕೊಂಡು ಹೋಗುವ ಸ್ವಯಂ ಸೇವಕರಿಗಾಗಿ ಕಾಯುತ್ತಿದ್ದರು. ಸ್ಟ್ರೆಚರ್ ಮಾಡಲು ಉಪಯೋಗಿಸಿದ್ದ ಕಂಬಳಿಗಳು ನೆತ್ತರಿನಿಂದ ನೆನೆದು ಹೋಗಿದ್ದವು. 

ಪ್ರತಿರೋಧ ಒಡ್ಡದ ಜನರನ್ನು ಕ್ರಮವಾಗಿ ಪ್ರಹಾರ ಮಾಡಿ ಧರೆಗುರುಳಿಸುತ್ತಿದ್ದ ಈ ರಕ್ತಸಿಕ್ತ ದೃಶ್ಯವನ್ನು ಅಲ್ಲಿಯೇ ಹತ್ತಿರದಿಂದ ವೀಕ್ಷಿಸುತ್ತಿದ್ದ ಅಮೆರಿಕನ್ ಪತ್ರಕರ್ತನೊಬ್ಬ ನೋಡಲಾಗದೆ ಮುಖ ತಿರುಗಿಸಿದ. ಆತನ ಪಾಶ್ಚಿಮಾತ್ಯ ಮನಸ್ಸಿಗೆ ಪ್ರತಿರೋಧವಿಲ್ಲದ ಅಹಿಂಸಾವಾದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಅಸಹಾಯಕನಾದ. ಲಾಠಿ ಉಪಯೋಗಿಸಿ ಹೊಡೆಯುವವರ ವಿರುದ್ಧವಷ್ಟೇ ಅಲ್ಲದೆ ವಿಧೇಯವಾಗಿ ಏಟುಗಳನ್ನು ಸ್ವೀಕರಿಸುತ್ತಿದ್ದವರ ಮೇಲೂ ಅವನಿಗೆ ಹೇಳಲಾಗದ ಕ್ರೋಧ, ಜುಗುಪ್ಸೆ ಉಂಟಾಯಿತು. 

ತಮ್ಮ ಸರದಿಗಾಗಿ ಕಾಯುತ್ತಿದ್ದ ಸತ್ಯಾಗ್ರಹಿಗಳ ನಿಯಂತ್ರಣ ನಾಯಕರ ಕೈ ಮೀರಿದಂತೆ ತೋರಿತು. ನಾಯಕರು ಮೇಲೋಡಿ ಕೆಳಗೋಡಿ ಅಂಗಲಾಚಿ ಸಹನೆ ಕಳೆದುಕೊಳ್ಳುತ್ತಿರುವ ಗುಂಪಿನಲ್ಲಿ ಗಾಂಧೀಜಿಯ ಸೂಚನೆಗಳನ್ನು ಮರೆಯದಂತೆ ಮನವಿ ಮಾಡಿಕೊಂಡರು. ಕಾಯುತ್ತಿರುವ ಗುಂಪು ಪೋಲೀಸರ ಮೇಲೆ ಸಮೂಹವಾಗಿ ದಾಳಿ ನೆಡೆಸುವ ಅಂಚಿನಲ್ಲಿರುವಂತೆ ಕಾಣುತ್ತಿತ್ತು. ಇದನ್ನು ಗಮನಿಸಿದ ಬ್ರಿಟಿಷ್ ಮೇಲಧಿಕಾರಿ ತನ್ನ ರೈಫಲ್ ತುಕಡಿಗೆ ಅಲ್ಲಿಯ ಒಂದು ದಿಬ್ಬದ ಮೇಲೆ ಹತ್ತಿ ಟ್ರಿಗರ್ ಒತ್ತಲು ಸಿದ್ಧರಾಗಿರುವಂತೆ ಸೂಚಿಸಿದ. 

ಆಗ ಒಬ್ಬ ಯುವ ವಿದ್ಯಾರ್ಥಿ ಬ್ರಿಟಿಷ್ ಮೇಲಧಿಕಾರಿ ಇರುವಲ್ಲಿಗೆ ಹೇಗೋ ಓಡಿ ಬಂದು ಕ್ರೋಧದಿಂದ ತನ್ನ ಖಾದಿ ಅಂಗಿಯನ್ನು ಹರಿದು ನಗ್ನ ಎದೆಯನ್ನು ತೋರಿಸಿ “ನನ್ನನ್ನು ಶೂಟ್ ಮಾಡು, ಶೂಟ್ ಮಾಡು ಈಗ, ಕೊಲ್ಲು ನನ್ನನ್ನು, ಈ ಪ್ರಾಣ ನನ್ನ ದೇಶಕ್ಕಾಗಿ!” ಎಂದು ಅರಚಿದ. ನಾಯಕರು ಹೇಗೋ ಗುಂಪನ್ನು ಸಮಾಧಾನಿಸಿದರು.

ಈಗ ಸತ್ಯಾಗ್ರಹಿಗಳು ತಮ್ಮ ತಂತ್ರಗಾರಿಕೆಯನ್ನು ಬದಲಾಯಿಸಿದರು. ಉಪ್ಪಿನ ದಾಸ್ತಾನಿನೆಡೆ ಮುನ್ನುಗ್ಗುವ ಬದಲು ಇಪ್ಪತ್ತೈದು ಜನರ ತಂಡವೊಂದರಂತೆ  ಮುಂದೆ ಬಂದು ದಾಸ್ತಾನಿನ ಹತ್ತಿರ ನೆಲದ ಮೇಲೆ ಸುಮ್ಮನೆ ಕುಳಿತುಕೊಂಡರು. 

ಅಂಟಿಯ ಎಂಬ ಕಪ್ಪು ಕುರೂಪಿ ದೈತ್ಯ ದೇಹಾಕಾರದ ಪೊಲೀಸ್ ಅಧಿಕಾರಿಯ ನಾಯಕತ್ವದಲ್ಲಿ ಕೆಲವು ಪೊಲೀಸರು ಬಂದು ನಿಷೇದಾಜ್ಞೆ ಇರುವುದರಿಂದ ಕೂಡಲೇ ಅಲ್ಲಿಂದ ಚದರುವಂತೆ ಕರೆ ನೀಡಿದರು. ಸತ್ಯಾಗ್ರಹಿಗಳು ಅದನ್ನು ಮನ್ನಿಸುವುದು ಅಂತಿರಲಿ, ತಲೆಯ ಮೇಲೆ ಲಾಠಿ ಸುತ್ತುತ್ತಿದ್ದರೂ ಕಣ್ಣೆತ್ತಿ ಕೂಡ ಪೊಲೀಸರನ್ನು ನೋಡಲಿಲ್ಲ. 

ಕೋಪಗೊಂಡ ಅಂಟಿಯ ಪೊಲೀಸರನ್ನು ಮುಂದುವರೆಯುವಂತೆ ಸಮ್ಮತಿ ಇತ್ತಾಗ ತಳಿತ ಮತ್ತೆ ಆರಂಭವಾಯಿತು. ನೆತ್ತಿಯಿಂದ ರಕ್ತ ಚಿಮ್ಮಿ ದೇಹಗಳು ಉರುಳಿದವು. ಒಂದಾದ ನಂತರ ಒಂದು ಗುಂಪು ಮುನ್ನುಗ್ಗಿ ಕುಳಿತುಕೊಳ್ಳುವುದು, ಪ್ರತಿರೋಧವಿಲ್ಲದೆ ಪೆಟ್ಟು ತಿನ್ನುವುದು ಮುಂದುವರೆಯಿತು. ಸಾಧು ಪ್ರಾಣಿಯೊಂದಕ್ಕೆ ಮನುಷ್ಯ ಹೊಡೆಯುವಂತೆ ತೋರುತ್ತಿದ್ದ ಆ ದೃಶ್ಯ ಕರುಣಾಜನಕವಾಗಿತ್ತು. 

ತಿರುಗಿ ಹೊಡೆಯದ, ಹೋರಾಡದ ಈ ಸತ್ಯಾಗ್ರಹಿಗಳ ವರ್ತನೆ ಪೊಲೀಸರಿಗೆ ಅಸಹನೀಯವಾಗತೊಡಗಿತು. ಅವರು ಕುಳಿತವರ ಮೇಲೆ ಕ್ರೂರವಾಗಿ ತಮ್ಮ ಬೂಟ್ ಕಾಲಿನಿಂದ ಒದೆಯಲಾರಂಭಿಸಿದರು. ಹೊಟ್ಟೆಯ ಮೇಲೆ, ಮುಖದ ಮೇಲೆ, ವೃಷಣಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಸಿಕ್ಕ ಸಿಕ್ಕಲ್ಲಿ ಬಲವಾಗಿ ಒದ್ದರು. ಗಾಯಾಳುಗಳು ನೋವು ಸಂಕಟದಿಂದ ಮುದುಡಿದರು, ಕಿರುಚಿದರು. ಇದರಿಂದ ಪೊಲೀಸರು ಇನ್ನೂ ಕುಪಿತರಾದಂತೆ ತೋರಿದರೆ ಕಾಯುತ್ತಿರುವ ಗುಂಪಿನ ಸತ್ಯಾಗ್ರಹಿಗಳು ನಾಯಕರ ನಿಯಂತ್ರಣ ತಪ್ಪಿಸಿಕೊಂಡವರಂತೆ ಕಂಡರು. 

ಪೊಲೀಸರು ತಮ್ಮ ತಂತ್ರವನ್ನು ಬದಲಾಯಿಸಿ  ಕುಳಿತಿರುವ ಜನರ ಕೈ ಹಿಡಿದು ಅಥವಾ ಕಾಲು ಹಿಡಿದು ಎಳೆಯಲು ಪ್ರಾರಂಭಿಸಿದರು. ಕೆಲವೊಮ್ಮೆ ನೂರು ಗಜಗಳಷ್ಟು ದೂರ ಎಳೆದುಕೊಂಡು ಹೋಗಿ ಕಣಿವೆಯಲ್ಲಿ ಬಿಸಾಡಿದರು. ಒಬ್ಬ ಸತ್ಯಾಗ್ರಹಿಯನ್ನು ಎಳೆದು ಕಣಿವೆಯಲ್ಲಿ ಹಾಕಿದಾಗ ಅದರಲ್ಲಿದ್ದ ಕೆಸರು ನೀರು ಅಲ್ಲೇ ನಿಂತಿದ್ದ ಅಮೆರಿಕನ್ ಪತ್ರಕರ್ತನ ಮುಖಕ್ಕೆ ಸೀರಿತು. ಇನ್ನೊಬ್ಬ ಪೊಲೀಸ್, ಸತ್ಯಾಗ್ರಹಿಯನ್ನು ಕಣಿವೆಗೆ ಎಳೆದು ಅವನ ತಲೆಗೆ ಲಾಠಿಯಿಂದ ಕೈಲಾದಷ್ಟು ಬಲದಿಂದ ದಾಳಿ ಮಾಡಿದನು. 

ಬೆಳದಿಂಗಳ ರಾತ್ರಿಯಿಡೀ ರಕ್ಷಣಾ ದಳ ರಕ್ತ ಸ್ರವಿಸುತ್ತಿರುವ, ಅಬಲ ದೇಹಗಳನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸಿತು. 

ಮುಂಚೂಣಿಯಲ್ಲಿ ನಿಂತು ಸತ್ಯಾಗ್ರಹಿಗಳನ್ನು, ಉಪನಾಯಕರನ್ನು ನಿರ್ದೇಶಿಸುತ್ತಿದ್ದ ಸರೋಜಿನಿ ನಾಯ್ಡು ಅವರಿದ್ದಲ್ಲಿಗೆ ಕೆಲವು ಬ್ರಿಟಿಷ್ ಅಧಿಕಾರಿಗಳು ಬಂದು ಅವರ ತೋಳುಗಳನ್ನು ಮುಟ್ಟಿ “ಸರೋಜಿನಿ ನಾಯ್ಡು, ಯು ಆರ್ ಅಂಡರ್ ಅರೆಸ್ಟ್”  ಎಂದರು. ಆಕೆ ತಿರಸ್ಕಾರದಿಂದ ದೇಹವನ್ನು ಸರಿಸಿ ಅವನ ಕೈಗಳಿಂದ ಬಿಡಿಸಿಕೊಂಡು “ನಾನು ಬರುತ್ತೇನೆ, ಆದರೆ ನನ್ನನ್ನು ಮುಟ್ಟಬೇಡ” ಎಂದರು. ಬಂಧನಕ್ಕೊಳಗಾಗಿ ಅಧಿಕಾರಿಗಳೊಂದಿಗೆ ಅವರು ದಾಸ್ತಾನಿಗೆ ಹಾಕಿದ್ದ ಮುಳ್ಳು ತಂತಿ ಬೇಲಿಯ ಮುಂಭಾಗದಲ್ಲಿ ನಿರ್ಗಮಿಸುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ನಂತರ ಅವರನ್ನು ಸೆರೆಮನೆಯಲ್ಲಿ ಇಡಲಾಯಿತು. ಮಣಿಲಾಲ್ ಗಾಂಧಿಯನ್ನು  ಕೂಡ ಬಂಧಿಸಿದರು. 

ಬೆಳಗಿನ ಜಾವದಲ್ಲಿ ಗಾಂಧೀಜಿಯ ಅನುಪಸ್ಥಿತಿಯಲ್ಲಿ ಸ್ವರಾಜ್ಯ ಆಂದೋಲನವನ್ನು ಮುನ್ನೆಡೆಸುತ್ತಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಣ್ಣನಾಗಿದ್ದ ವಿಠ್ಠಲಭಾಯಿ ಪಟೇಲರು ಅಲ್ಲಿಗೆ ಬಂದರು. ಧರಸಾನದಲ್ಲಿ ಏನು ನೆಡೆಯಿತು ಎಂಬುದನ್ನು ಅರಿತು ಒಂದು ಮಾವಿನ ಮರದ ಕೆಳಗೆ ಕುಳಿತು ಹೀಗೆ ಹೇಳಿದರು “ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಭಾರತವನ್ನು ಸಮನ್ವಯಗೊಳಿಸುವ ಎಲ್ಲ ನಂಬಿಕೆಗಳು ಶಾಶ್ವತವಾಗಿ ಒಡೆದು ಹೋಯಿತು. ಯಾವುದೇ ಸರ್ಕಾರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರನ್ನು ಬಂಧಿಸಿ ಶಿಕ್ಷಿಸುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಆದರೆ ಒಂದು ನಾಗರಿಕ ಎಂದು ಕರೆಸಿಕೊಳ್ಳುವ ಸರ್ಕಾರ ಅಹಿಂಸಾವಾದಿ ಪ್ರತಿರೋಧವೊಡ್ಡದ ಜನರ ಮೇಲೆ ಅತ್ಯಂತ ಕ್ರೂರವಾಗಿ, ಅನಾಗರಿಕವಾಗಿ ಹೀಗೆ ನೆಡೆದುಕೊಳ್ಳುವುದು ನನಗೆ ಅರ್ಥವಾಗುತ್ತಿಲ್ಲ.”

ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಸೂರ್ಯನ ತಾಪ ೪೦ ಡಿಗ್ರಿ ಸೆಲ್ಶಿಯಸ್ ಮುಟ್ಟುತ್ತಿದ್ದಂತೆ ಸತ್ಯಾಗ್ರಹಿಗಳ ಚಟುವಟಿಕೆಗಳು ಕಡಿಮೆಯಾದವು. ತಾತ್ಕಾಲಿಕ ಆಸ್ಪತ್ರೆಯಲ್ಲಿ ಸಾಲು ಸಾಲಾಗಿ ನೆಲದ ಮೇಲೇ ಗಾಯಾಳುಗಳು ಮಲಗಿದ್ದರು. ಸುಮಾರು ೩೫೦ಕ್ಕೂ ಹೆಚ್ಚು ಮಂದಿ ಒಡೆದ ತಲೆಯ ಗಾಯದ ನೋವಿನಿಂದ ಅಥವಾ ಹೊಟ್ಟೆ, ವೃಷಣಗಳ ಮೇಲೆ ಒದ್ದ ಪರಿಣಾಮವಾಗಿ ಅತೀವ ಸಂಕಟದಿಂದ ತೊಳಲಾಡುತ್ತಿದ್ದರು. ಅಲ್ಲಿದ್ದ ಕೆಲವೇ ಕೆಲವು ವೈದ್ಯರು ಅಸಮರ್ಪಕ ಸೌಲಭ್ಯಗಳ ನಡುವೆಯೂ ತಮ್ಮ ಕೈಲಾದಷ್ಟು ಮಂದಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ಗಾಯಾಳುಗಳಿಗೆ ಗಂಟೆಗಟ್ಟಲೆ ಚಿಕಿತ್ಸೆ ದೊರೆಯಲಿಲ್ಲ. ಇಬ್ಬರು ಸತ್ಯಾಗ್ರಹಿಗಳು ಭಾರತದ ಸ್ವರಾಜ್ಯಕ್ಕಾಗಿ ಹುತಾತ್ಮರಾಗಿದ್ದರು. 

ಅಲ್ಲಿ ಆ ದಿನ “ಸತ್ಯಾಗ್ರಹ” ಅಥವಾ ಅಹಿಂಸಾ ನಾಗರೀಕ ಅಸಹಕಾರದ ಶ್ರೇಷ್ಠ ನಿದರ್ಶನಕ್ಕೆ ಸಾಕ್ಷಿಯಾದ ಅಮೆರಿಕನ್ ಪತ್ರಕರ್ತ ಒಂದು ವಿವರವಾದ ವರದಿ ತಯಾರಿಸಿ ತನ್ನ ಲಂಡನ್ ಆಫೀಸ್ ಗೆ ಟೆಲಿಗ್ರಾಫ್ ಮಾಡಿದ. ಆದರೆ ಈ ವರದಿಯನ್ನು ಬ್ರಿಟಿಷ್ ಟೆಲಿಗ್ರಾಫ್ ಅಧಿಕಾರಿಗಳು ಸೆನ್ಸಾರ್ ಮಾಡಿ ಕಳಿಸಿದ್ದರು. ಅವನ ಹೋಟೆಲ್ ಕೋಣೆಗೆ ಎಸೆದ ಒಂದು ಅನಾಮಧೇಯ ಕಾಗದದ ಚೀಟಿಯ ಮೂಲಕ ಈ ವಿಷಯವನ್ನು ತಿಳಿದುಕೊಂಡ ಆತ ನಂತರ ಬ್ರಿಟಿಷ್ ಸೆನ್ಸಾರ್ ಶಿಪ್ ಅನ್ನು ಜಗಜ್ಜಾಹೀರು ಮಾಡುವ ಬೆದರಿಕೆ ಒಡ್ಡಿದಾಗ ಅವನ ಸಂಪೂರ್ಣ ವರದಿಯನ್ನು ಕಳುಹಿಸಲು ಅನುಮತಿ ನೀಡಲಾಯಿತು. 

ಅವನ ಧರಸಾನ ಸತ್ಯಾಗ್ರಹದ ವರದಿ ಜಗತ್ತಿನಾದ್ಯಂತ ಸುಮಾರು ೧೩೫೦ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಯಿತು. ವಸಾಹತುಶಾಹಿ ಬ್ರಿಟಿಷರ ಕೌರ್ಯ ಬಹಿರಂಗವಾಗಿ ಸ್ವತಂತ್ರ ಭಾರತಕ್ಕಾಗಿ ವಿಶ್ವದೆಲ್ಲೆಡೆ ಬೆಂಬಲ ವ್ಯಕ್ತವಾಯಿತು. 

ಗಾಂಧೀಜಿಯ ದಂಡಿ ಪಾದಯಾತ್ರೆಯ ಆಶಯ ಧರಸಾನದಲ್ಲಿ ಅಂದು ಸಾಕಾರವಾಯಿತು. ದಂಡಿ ಸತ್ಯಾಗ್ರಹದ ಸಂಧರ್ಭದಲ್ಲಿ ಗಾಂಧೀಜಿ ಹೀಗೆ ಕರೆ ನೀಡಿದ್ದರು.:

“ಬಲದ ವಿರುದ್ಧದ ಈ ಹೋರಾಟದಲ್ಲಿ ನನಗೆ ಪ್ರಪಂಚದ ಸಹಾನುಭೂತಿ ಬೇಕಾಗಿದೆ”

(“I want world sympathy in this battle of right against might” – MK Gandhi)


ಆಧಾರ:

ಪ್ರತ್ಯಕ್ಷದರ್ಶಿ ಅಮೆರಿಕನ್ ಪತ್ರಕರ್ತ ವೆಬ್ ಮಿಲ್ಲರ್ ಅವರ   “I Found No Peace” (೧೯೩೬). 

ಯುನೈಟೆಡ್ ಪ್ರೆಸ್ ಇಂಟರ್ ನ್ಯಾಷನಲ್ – UPI Stories Text & Articles(1921-1930) – Natives beaten down by police in India salt bed raid

ಇಷ್ಟವಾದರೆ ಶೇರ್ ಮಾಡಿ

10ಮುಖಗಳು, ನಿಮ್ಮ ಇಮೇಲ್ ನಲ್ಲಿ !

10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ

ಫಾಲೋ ಮಾಡಿ