ಭಾಗ ೪: ಕಂಪನಿ ನೋಂದಣಿ ಆಯಿತು

ನಿಮಗೆ ಸೆಪ್ಟೆಂಬರ್ ೨೪, ೧೯೪೮ ನೆನಪಿದೆಯೇ?

“ಇಲ್ಲ, ನೆನಪಾಗುತ್ತಿಲ್ಲ. ಉಳಿದ ದಿನಗಳಂತೆಯೇ ಸಾಧಾರಣವಾದ ಒಂದು ದಿನವಾಗಿರಬೇಕು”

ಕಿಯೋಶಿ ಕಾವಾಶಿಮಾ ಆ ದಿನ ಅಲ್ಲಿದ್ದರು:

ಅವರು ಹೇಳಿದರು “ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಲು ಅಣಿಯಾಗುತ್ತಿದ್ದಂತೆ ಯಾರೋ ನನಗೆ ಹೇಳಿದರು ‘ನಾವು ಇಂದು ನೋಂದಾಯಿತ ಕಂಪನಿಯಾದೆವು ಎಂದು ಅವರೆಲ್ಲ ಹೇಳುತ್ತಿದ್ದಾರೆ”

ಆಗ ಉದ್ಯೋಗಿಯಾಗಿದ್ದ ಸೆಇಜಿ ಇಸೊಬೆ ಹೀಗೆ ನೆನಪಿಸಿಕೊಳ್ಳುತ್ತಾರೆ:

“ಕಂಪನಿ ಸ್ಥಾಪನೆ ಆಯಿತು ಎಂದು ಎಲ್ಲರೂ ಸೇರಿ ಸಂಭ್ರಮ ಆಚರಿಸಿದ್ರಾ? ಆ ರೀತಿ ಏನೂ ಇರಲಿಲ್ಲ. ಅಧ್ಯಕ್ಷರಿಂದ ಯಾವುದೇ ಭಾಷಣ ಕೂಡ ಇರಲಿಲ್ಲ. ಕಾರ್ಖಾನೆಯ ಮುಂದಿದ್ದ ನಾಮ ಫಲಕ ಬದಲಾಗಲಿಲ್ಲ. ಅದು ಹೇಗೆ ಇತ್ತೋ ಹಾಗೇ ಇತ್ತು ಅಂತ ಅನ್ನಿಸುತ್ತದೆ.”

ಆದರೂ ಈ ದಿನ ಅಂದರೆ ೧೯೪೮ ಸೆಪ್ಟೆಂಬರ್ ೨೪ರಂದು ಹೋಂಡಾ ಮೋಟಾರ್ ಕಂಪನಿ ಲಿಮಿಟೆಡ್ ಸ್ಥಾಪನೆಯಾಯಿತು. ಒಂದು ಮಿಲಿಯನ್ ಯೆನ್ ಮೂಲ ಬಂಡವಾಳ ಹೊಂದಿತ್ತು. ಅಧ್ಯಕ್ಷ ಹೋಂಡಾರನ್ನು ಸೇರಿ ೩೪ ಉದ್ಯೋಗಿಗಳಿದ್ದರು. ಸ್ಥಾಪನೆಯ ಸಂಭ್ರಮದಂತಹ ಆಚರಣೆಗಳೇನೂ ಅಲ್ಲಿ ಇರಲಿಲ್ಲ. ಯಾವತ್ತಿನಂತೆ ಎಲ್ಲರೂ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ಈಗಿನ ತಾವು ಮಾಡುತ್ತಿರುವ ಕೆಲಸಕ್ಕೂ ಮತ್ತು ನಿನ್ನೆಯಷ್ಟೇ ಹೋಂಡಾ ಟೆಕ್ನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್  ಎಂದು ಕರಿಸಿಕೊಳ್ಳುತ್ತಿದ್ದಾಗ ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ವ್ಯತ್ಯಾಸ ಇರಲಿಲ್ಲ,  ತಮ್ಮ ಕೆಲಸದಲ್ಲಿ ಏನೂ ಬದಲಾವಣೆಯಿರಲಿಲ್ಲ. 

ಸೆಪ್ಟೆಂಬರ್ ೧೯೪೮ರಲ್ಲಿ ಜಪಾನ್ ಹೇಗಿತ್ತು? 

ಆ ಸಮಯದಲ್ಲಿ ಬಾಳಿದವರಿಗೆ ಈಗ ಅದು ಮರೆತೇ ಹೋದಂತಿದೆ.  ಈಗಿನ ಯುವ ಜನತೆಗೆ ಆ ಸಮಯದಲ್ಲಿ ಜಪಾನ್ ಹೇಗಿತ್ತು ಎಂದು ಅರ್ಥ ಮಾಡಿಕೊಳ್ಳಲು ಯಾವುದೇ ದಾರಿಯಲ್ಲ. 

ಇಲ್ಲಿ ನಾವೀಗ ಹೋಂಡಾ ಸ್ಥಾಪನೆಯಾದ ಆ ದಿನ ಹೇಗಿತ್ತು ಎಂದು ನೆನಪಿನ ಲೋಕದಲ್ಲಿ ಹಿಂಸರಿದು ನೋಡೋಣ. 

ಆ ದಿನದ ಯಾವುದೇ ದಿನಪತ್ರಿಕೆ ಲಭ್ಯವಿಲ್ಲ ಏಕೆಂದರೆ ಆ ದಿನ ವೃತ್ತ ಪತ್ರಿಕೆಗಳ ರಜಾ ದಿನವಾಗಿತ್ತು. 

ಮಾರನೆಯ ದಿನವಾದ ಸೆಪ್ಟೆಂಬರ್ ೨೫ರ ಆಶಾಹಿ ಶಿಂಬುನ್ ಎಂಬ ದಿನಪತ್ರಿಕೆಯ ಮುಖಪುಟದ ಮೇಲಿರುವ ಸುದ್ದಿ “ಜಪಾನ್ ಮತ್ತು ಜರ್ಮನಿಯಲ್ಲಿ ಬಹಳ ವೇಗವಾಗಿ ಶಾಂತಿ ನೆಲಸುತ್ತಿದೆ; ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮಾರ್ಷಲ್ ಯುನೈಟೆಡ್ ನೇಶನ್ಸ್ ಸಾಮಾನ್ಯ ಸಭೆಯಲ್ಲಿ “ ಇದು ಶಾಂತಿ ಒಪ್ಪಂದಕ್ಕೂ ಮೊದಲು.  ಜಪಾನ್ ಯುದ್ಧದಲ್ಲಿ ಮಣಿದ ನಂತರ ಮಿತ್ರ ರಾಷ್ಟ್ರಗಳ ಸೇನೆಗಳ ಕೆಳಗೇ ಇತ್ತು. 

ಮತ್ತೊಂದು ದೊಡ್ಡ ಶೀರ್ಷಿಕೆ ಹೀಗಿತ್ತು “ಅಕ್ಟೋಬರ್ ೩೧ ರಿಂದ ಶ್ರಮಿಕರಿಗೆ ನೀಡುವ ಪಡಿತರದಲ್ಲಿ ಹೆಚ್ಚಳ. ಇನ್ನೂ ಶ್ರಮಿಕರ ವಿಭಾಗಗಳನ್ನು ಸೇರಿಸಲಾಗಿದೆ” ಈ ಲೇಖನ, ಕೆಲವು ಶ್ರಮವತ್ತಾದ ಕೆಲಸ ಮಾಡುವ ಶ್ರಮಿಕರಿಗೆ ನೀಡುವ ಪ್ರಧಾನ ಆಹಾರವಾದ ಅಕ್ಕಿಯ ಪಡಿತರದ ಹೆಚ್ಚಳ ಆದ ಬಗ್ಗೆ ಇದೆ. 

ಉದಾಹರಣೆಗೆ ಕಲ್ಲಿದ್ದಲು ಗಣಿಯಲ್ಲಿ ದುಡಿಯುವವರಿಗೆ ಸುಮಾರು ೦.೮ ಲೀಟರ್ ನಷ್ಟು ಜಾಸ್ತಿ ಅಕ್ಕಿ ಮತ್ತು ಸೈಕಲ್ ಕಾರ್ಖಾನೆಯಲ್ಲಿ ದುಡಿಯುವವರಿಗೆ ಕಾಲು ಲೀಟರ್ ಗಿಂತ ಸ್ವಲ್ಪ ಜಾಸ್ತಿ ಅಕ್ಕಿ ಕೊಡಲಾಗುತ್ತಿತ್ತು. ಕೆಲಸದ ರೀತಿಯ ಮೇಲೆ ಪಡಿತರ ಹಂಚಲಾಗುತ್ತಿತು. ನಿಗದಿತವಾಗಿ ಒಬ್ಬನಿಗೆ ಪ್ರತಿದಿನ ಮೂರು ಹೊತ್ತಿಗೂ ಸೇರಿ ಅರ್ಧ ಲೀಟರ್ ಗಿಂತಲೂ ಕಡಿಮೆ ಪಡಿತರ ಸಿಗುತ್ತಿತ್ತು. ಇದು ಈಗಿನ ಜಪಾನ್ ಗೆ ಹೋಲಿಸಿದರೆ ತುಂಬಾ ಕಡಿಮೆ. ಅನ್ನದ ಜೊತೆ ಪೂರಕವಾಗಿ ತಿನ್ನುತ್ತಿದ್ದ ಗೆಣಸುಗಳನ್ನು ಕೂಡ ಪಡಿತರವಾಗಿ ನೀಡಲಾಗುತ್ತಿತ್ತು. ಅದು ಸುಧೀರ್ಘವಾದ ಆಹಾರದ ಕೊರತೆ ಮತ್ತು ಹಸಿವಿನ ಸಮಯವಾಗಿತ್ತು. 

ದಿನ ಪತ್ರಿಕೆಯ ಎರಡನೇ ಪುಟದಲ್ಲಿ ಸಾಮಾನ್ಯ ಸುದ್ದಿಗಳು. ಒಂದು ಮುಖ್ಯವಾದ ಲೇಖನದ ಶೀರ್ಷಿಕೆ “ಜಪಾನೀ ಉತ್ಪನ್ನಗಳು ವಿಶ್ವ ದರ್ಜೆಯ ಸಮೀಪ” ಆ ಲೇಖನದ  ಮೊದಲ ಕೆಲವು ಸಾಲುಗಳು ಹೀಗಿವೆ “ಯುದ್ಧ ಮುಗಿದು ಮೂರು ವರ್ಷವಾಗಿದೆ, ಎಲ್ಲವೂ ಕೊರತೆಯಿಂದ ಬಳಲುತ್ತಿದ್ದರೆ ವಿಶ್ವ ದರ್ಜೆಗೆ ಸಮವಾಗಿ ಜಪಾನೀ ಉತ್ಪನ್ನಗಳು ಕಾಣತೊಡಗಿರುವುದರಿಂದ ಜಪಾನಿನ ಚೇತರಿಕೆಗೆ ಸಣ್ಣ ಆಶಯ ತಂದಿವೆ.” ಲೇಖನ ಮುಂದುವರಿದು ನಿರ್ವಾತ ಕೊಳವೆಗಳು(Vacuum Tubes), ಕ್ಯಾಮೆರಾಗಳು, ಬಟನ್ ಗಳು ಮತ್ತು ಸಂಸ್ಕರಿಸಿದ ಮುತ್ತುಗಳಲ್ಲಿ ಜಪಾನ್ ಸುಮಾರು ಶೇಕಡಾ ೮೦ರಷ್ಟು ವಿಶ್ವ ದರ್ಜೆಯ ಮಾನದಂಡವನ್ನು ಮುಟ್ಟಿದೆ ಆದರೂ ಎಲ್ಲಾ ಕ್ಷೇತ್ರಗಳಲ್ಲಿ ಸಾಮಗ್ರಿಗಳ ಕೊರತೆಯಿಂದ ಅಡಚಣೆ ಉಂಟಾಗಿದೆಯೆಂದು ಲೇಖನ ಮುಕ್ತಾಯವಾಗುತ್ತದೆ. 

ಯಾವುದೂ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ಕೇವಲ ಎರಡು ಪುಟ ಹೊಂದಿದ ಒಂದು ಹಾಳೆ ದಿನ ಪತ್ರಿಕೆಗಳೇ ಇದಕ್ಕೆ ಉದಾಹರಣೆ. ಬೆಳಿಗ್ಗೆ ಮಾತ್ರ ಸಿಗುತ್ತಿತ್ತು, ಸಂಜೆಯ ಆವೃತ್ತಿ ಇರಲಿಲ್ಲ. 

ಆದರೂ ೧೯೪೮ರಲ್ಲಿ  ಒಂದು ಉತ್ತಮ ಸುದ್ದಿಯೆಂದರೆ ಈಜುಗಾರ ಹೀರೋನೋಶಿನ್ ಫ್ಯೂರುಹಾಶಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದು.  ಹಿಂದಿನ ವರ್ಷ ೧೯೪೭ ರಿಂದಲೂ ಆತ ೪೦೦ ಮೀಟರ್ ಫ್ರೀಸ್ಟೈಲ್ ನಲ್ಲಿ ಒಂದಾದ ನಂತರ ಇನ್ನೊಂದು ದಾಖಲೆ ಬರೆದಿದ್ದ. ಎರಡನೇ ವಿಶ್ವ ಯುದ್ಧದ ನಂತರ ಮೊದಲ ಬಾರಿಗೆ ೧೯೪೮ರಲ್ಲಿ ಒಲಿಂಪಿಕ್ಸ್ ಲಂಡನ್ ನಲ್ಲಿ ನೆಡೆದಿತ್ತಾದರೂ ಜಪಾನ ಮತ್ತು ಜೆರ್ಮನಿಗೆ ಯುದ್ಧದಲ್ಲಿ ಸೋತ ದೇಶಗಳೆಂದು ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅನುಮತಿ ನೀಡಿರಲಿಲ್ಲ. ಒಲಿಂಪಿಕ್ಸ್ ನೆಡೆಯುವ ಸಮಯದಲ್ಲೇ ನೆಡೆದ ಜಪಾನ್ ಚಾಂಪಿಯನ್ ಶಿಪ್ ಸ್ವಿಮ್ಮಿಂಗ್ ಮೀಟ್ ನಲ್ಲಿ ಆತ ೧೫೦೦ ಮೀಟರ್ ಫ್ರೀಸ್ಟೈಲ್ ನಲ್ಲಿ   ಲಂಡನ್ ನಲ್ಲಿ ಜಯಶಾಲಿಯಾದವನು ತೆಗೆದುಕೊಂಡ  ಸಮಯಕ್ಕಿಂತ ೪೦ ಸೆಕೆಂಡ್ ಕಡಿಮೆ ಅವಧಿಯಲ್ಲಿ ಕ್ರಮಿಸಿ ಹೊಸ ವಿಶ್ವ ದಾಖಲೆ ಬರೆದ. ಅವನ ಈ ದಾಖಲೆ ವಿಜಯ, ಯುದ್ಧದಲ್ಲಿ ಸೋತು ತಮ್ಮ ಆತ್ಮ ವಿಶ್ವಾಸವನ್ನೇ ಕಳೆದುಕೊಂಡಿದ್ದ ಜಪಾನಿಯರಿಗೆ ಹೊಸ ಭರವಸೆ ನೀಡಿತು. 

ಫ್ಯೂರುಹಾಶಿಯ ಈ ಮಹತ್ತರ ಸಾಧನೆಯಿಂದ ಸ್ಫೂರ್ತಿ ಪಡೆದು ತಾನು ಏನಾದರೂ ಸಾಧನೆ ಮಾಡಬೇಕೆಂದು ಆಲೋಚಿಸಿದವರಲ್ಲಿ  ಸೊ ಇಚಿರೊ ಹೋಂಡಾ ಕೂಡ ಒಬ್ಬರು. ಎಷ್ಟಾದರೂ ಫ್ಯೂರುಹಾಶಿ ಹುಟ್ಟಿದ್ದು, ಈಗ ಹೋಂಡಾ ಜೀವಿಸುತ್ತಿದ್ದ ಪಟ್ಟಣವಾದ ಹಮಾಮಾತ್ಸುವಿನಲ್ಲೇ ಮತ್ತು ಇಬ್ಬರೂ ಪಶ್ಚಿಮ ಶಿಝುಓಕಾದ ಏನ್ಶು ಪ್ರದೇಶದವರೇ. 

ಮನುಷ್ಯ ರಜೆ 

ಯುದ್ಧದ ನಂತರ ಒಂದು ವರ್ಷ ಹೋಂಡಾರವರು ‘ಮನುಷ್ಯ ರಜೆ’ ತೆಗೆದುಕೊಳ್ಳುತ್ತೇನೆಂದು ಅವರ ಕುಟುಂಬದವರಿಗೆ ಹೇಳಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ, ಅದರಂತೆ ಅವರು ಆ ವರ್ಷ ಜಾಸ್ತಿ ಕೆಲಸ ಮಾಡಲಿಲ್ಲ. ಹಮಾಮಾತ್ಸುವಿನಲ್ಲಿ ಅನೇಕ ಮಿಲಿಟರಿ ಕಾರ್ಖಾನೆಗಳಿದ್ದದ್ದರಿಂದ ಪದೇ ಪದೇ ವಾಯು ದಾಳಿಗೆ ಅದು ತುತ್ತಾಗಿತ್ತು ಮತ್ತು ಕಣ್ಣಿಗೆ ಕಾಣುವಷ್ಟು ದೂರಕ್ಕೂ ಅವಶೇಷಗಳೇ ಕಾಣುತ್ತಿದ್ದವು. ಅಲ್ಲಿಯವರೆಗೂ ನೆಡೆಯುತ್ತಿದ್ದ  ಟೊಕಾಯಿ ಸೈಕಿ ಕಾರ್ಖಾನೆ ಈಗ ಕೇವಲ ಅವಶೇಷವಾಗಿತ್ತು. ವಿಮಾನಗಳು, ಹಡಗುಗಳು ಮತ್ತು ಮೋಟಾರ್ ವಾಹನಗಳ ಉತ್ಪಾದನೆ ಸಂಪೂರ್ಣ ನಿಂತು ಹೋಗಿತ್ತು. ಅಲ್ಲಿಯವರೆಗೂ ಹೋಂಡಾರವರ ಮುಖ್ಯ ಉತ್ಪನ್ನವಾಗಿದ್ದ ಪಿಸ್ಟನ್ ರಿಂಗ್ ಗಳಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದು ಹೋಯಿತು. ಆದರೆ ಅವರ ‘ಮನುಷ್ಯ ರಜೆ’ ಗೆ ಇದು ಕಾರಣವೆಂದು ಹೇಳಲು ಸಾಧ್ಯವಿಲ್ಲ. 

ಹೋಂಡಾರವರ ಪತ್ನಿ ಸಾಚಿ ಈ ಸಂದರ್ಭದಲ್ಲಿ ಹೋಂಡಾ ಹೇಗೆ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಯೋಚಿಸುತ್ತಿದ್ದದ್ದನ್ನು ಹೀಗೆ ವಿವರಿಸುತ್ತಾರೆ. 

“ಅವರು ಟೊಕಾಯಿ ಸೈಕಿ ಯ ತಮ್ಮ ಎಲ್ಲ ಶೇರ್ ಗಳನ್ನು ಮಾರಿ ನಿರುದ್ಯೋಗಿಗಳಾದರು. ಅವರು ನನ್ನಲ್ಲಿ ಹೀಗೆ ಹೇಳಿದರು “ಮಿಲಿಟರಿಯವರ ಸೊಕ್ಕಿನ ಕಾಲ ಮುಗಿದಿರುವುದು ಸಂತೋಷದ ವಿಚಾರ, ನಾನು ಇನ್ನು ಸ್ವಲ್ಪ ಸಮಯ ಏನೂ ಮಾಡುವುದಿಲ್ಲ. ಈ ಸಮಯದಲ್ಲಿ ನೀನೆ ನನ್ನನ್ನು ನೋಡಿಕೊಳ್ಳಬೇಕು.” ಮತ್ತು ಅವರು ಏನೂ ಕೆಲಸ ಮಾಡಲಿಲ್ಲ. ನೋಡಿ, ಅವು ಆಹಾರಕ್ಕೆ ತೀವ್ರ ಅಭಾವವಿದ್ದ  ದಿನಗಳಾಗಿದ್ದವು, ಅವರಲ್ಲದೆ ಮನೆಯಲ್ಲಿ ಬೆಳೆಯುತ್ತಿರುವ ಮೂರು ಮಕ್ಕಳಿದ್ದರು. ನಾವು ಕೈದೋಟದಲ್ಲಿ ತರಕಾರಿಗಳನ್ನು ಬೆಳೆದೆವು, ನನ್ನ ಕುಟುಂಬದವರು ರೈತರಾಗಿದ್ದರಿಂದ, ನಾನು ಅವರ ಬಳಿ ಸ್ವಲ್ಪ ಅಕ್ಕಿ ಕೇಳಬಹುದಿತ್ತು. ‘ಆ ಮನುಷ್ಯ ಕೈದೋಟಕ್ಕೆ ಹೋದರೆ ಒಂದು ಕಳೆ ಕೂಡ ಕೀಳುವುದಿಲ್ಲ. ಅಲ್ಲೇ ಕಲ್ಲಿನ ಮೇಲೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುಮ್ಮನೆ ಕುಳಿತಿರುತ್ತಾರೆ.’ ಎಂದು ನಮ್ಮ ನೆರೆಹೊರೆಯವರು ಮಾತನಾಡಿಕೊಳ್ಳುತ್ತಿದ್ದರು. ರಾತ್ರಿಯಾದ ತಕ್ಷಣ ಕೆಲವು ಸ್ನೇಹಿತರನ್ನು ಸೇರಿಸಿಕೊಂಡು ಮದ್ಯದಂಗಡಿಗೆ ಹೋಗುತ್ತಿದ್ದರು, ಆ ಅಂಗಡಿಯ ಮಾಲೀಕನ ಪರಿಚಯ ಅವರಿಗಿದ್ದಿದ್ದರಿಂದ, ಆತ ಅಡಗಿಸಿ ಇವರಿಗೆ ಮಾರುತ್ತಿದ್ದ ಮದ್ಯವನ್ನು ಕುಡಿಯುತ್ತಿದ್ದರು. ನನ್ನ ಗಂಡನ ವೈಶಿಷ್ಟ್ಯವೆಂದರೆ ಸಾಮಾನ್ಯ ಮದ್ಯಕ್ಕೆ ಹುರಿದ ಬಾರ್ಲಿ ಮತ್ತು ಕ್ರಿಪ್ಟೋಮೆರಿಯಾ ಎಂಬ ಜಪಾನೀ ಗಿಡದ ಎಲೆಗಳನ್ನು ಸೇರಿಸಿ ವಿಸ್ಕಿಯ ರುಚಿ ಬರುವಂತೆ ಮಾಡುತ್ತಿದ್ದದ್ದು. ನಿಜವೇನೆಂದರೆ ನಾನೇ ಇದನ್ನು  ಮಾಡಬೇಕಾಗಿತ್ತು, ಅವರು ಬಾರ್ಲಿ ಹುರಿದಿದ್ದು ಜಾಸ್ತಿಯಾಯ್ತು, ಅದು ಹಾಗೆ ಮಾಡು, ಇದು ಹೀಗೆ ಮಾಡು ಎಂದು ದೂರುತ್ತಿದ್ದರು. ಸ್ವಲ್ಪ ಸಮಯದ ನಂತರ ಅವರು ಉಪ್ಪು ಮಾಡುವ ಯಂತ್ರ ಮಾಡಿದ್ದಾರೆಂದು ಸುದ್ದಿ ಬಂತು, ಮತ್ತೆ  ಐಸ್ ಕ್ಯಾಂಡಿ ಮಾಡುವ ಯಂತ್ರ ಮಾಡಿದ್ದಾರೆಂದು ಕೆಲವರು ಹೇಳಿದರು ಆದರೆ ಇದರ ಬಗ್ಗೆ ಅವರೇ ಯಾವತ್ತು ನನ್ನಲ್ಲಿ ನೇರವಾಗಿ ಹೇಳಲಿಲ್ಲ ಮತ್ತು ಯಾವತ್ತೂ ಮನೆಗೆ ಒಂದು ಚಿಟಿಕೆ ಉಪ್ಪು ಅಥವಾ ಐಸ್ ಕ್ಯಾಂಡಿ ಕಡ್ಡಿಯನ್ನು ಅವರು ತರಲಿಲ್ಲ.”

ಸುಮಾರು ಒಂದು ವರ್ಷ ಕಳೆಯುತ್ತಿದ್ದಂತೆ ಅವರು ಕೆಲಸ ಮಾಡಲು ಸಿದ್ಧವಾದರು. 

೧೯೪೬ರ ಬೇಸಿಗೆಯಲ್ಲಿ, ಹೋಂಡಾ ಅವರು ತಮ್ಮನಾದ ಬೆಂಜಿರೋ ಮತ್ತು ಟೊಕಾಯಿ ಸೈಕಿಯ ಕೆಲವು ಮಾಜಿ ಉದ್ಯೋಗಿಗಳನ್ನು  ಕಂಪನಿಯ ಹಾಳಾಗಿದ್ದ ಯಾಮಶೀತ ಕಾರ್ಖಾನೆಗೆ ಕರೆದರು. ಅವರೆಲ್ಲ ಸೇರಿ ಅಲ್ಲೇ ಸಿಕ್ಕ ಕೆಲವು ಕಟ್ಟಡ ಸಾಮಗ್ರಿಗಳನ್ನು ಸೇರಿಸಿ ಸಣ್ಣ ಕಾರ್ಖಾನೆ ಕಟ್ಟಡ ನಿರ್ಮಿಸಿದರು. ಹಮಾಮಾತ್ಸು ಆಗ ಜವಳಿ ಉದ್ಯಮದ ತವರಾಗಿದ್ದರಿಂದ, ಒಂದು ತಿರುಗುವ ನೇಯ್ಗೆ ಯಂತ್ರವನ್ನು ನಿರ್ಮಿಸಲು ಯೋಚಿಸಿದರು, ಆದರೆ ಬಂಡವಾಳ ದೊರಕದೆ ವಿಫಲರಾದರು. ಹೂಗಳ ಮಾದರಿ ಹೊಂದಿದ್ದ ಫ್ರಾಸ್ಟೆಡ್ ಗಾಜು ತಯಾರಿಸುವ ಪ್ರಯತ್ನ ಮಾಡಿದರು, ನಂತರ ಛಾವಣಿಗೆ ಹೊದೆಸುವ ಗಾರೆಯಲ್ಲಿ ಅದ್ದಿದ ಹೆಣೆದ ಬಿದಿರಿನ ಶೀಟ್ ತಯಾರಿಸಲು ಮುಂದಾದರು. ಆದರೆ ಆಶ್ಚರ್ಯವೇನೆಂದರೆ ಹೋಂಡಾ ಅವರ ಸ್ವಭಾವಕ್ಕೆ ವಿರುದ್ಧವಾಗಿ, ಅವರು ತಮ್ಮ ಪ್ರಯತ್ನಗಳನ್ನು ಅರ್ಧದಲ್ಲೇ ಕೈ ಬಿಟ್ಟರು. 

ಬಹುಶಃ ತಮ್ಮ ತನು ಮನಗಳನ್ನು ಅರ್ಪಿಸಿ ದುಡಿಯುವ ಕೆಲಸ ಅವರಿಗಿನ್ನೂ ದೊರಕಿರಲಿಲ್ಲ. 

೧೯೪೮. ಜನಸ್ನೇಹಿ ಉತ್ಪನ್ನಗಳು

“ಗ್ರಾಹಕರಿಗೆ ತೊಂದರೆ ಕೊಡುವ ಏನನ್ನೂ ಮಾಡಬೇಡಿ” ಇದು ನಾನು ಓಲ್ಡ್ ಮ್ಯಾನ್ ನಿಂದ ಯಾವಾಗಲೂ ಕೇಳುತ್ತಿದ್ದೆ ಎಂದು ಕಾವಶಿಮಾ ಹೇಳುತ್ತಾರೆ. “ನೀವು ಏನಾದರು ಮಾಡುವಾಗ, ಅದರೊಂದಿಗೆ ಜಾಸ್ತಿ ಸಮಯ ಕಳೆಯುವವರ ಬಗ್ಗೆ ಯೋಚನೆ ಮಾಡಿ” ಮತ್ತು “ ಅದರೊಂದಿಗೆ ಜಾಸ್ತಿ ಸಮಯ ಕಳೆಯುವವರು ಗ್ರಾಹಕರಲ್ಲವೇ? ಗ್ರಾಹಕರ ನಂತರ ಹೆಚ್ಚು ಸಮಯ ಕಳೆಯುವವರು, ನಮ್ಮ ಡೀಲರ್ ಗಳಲ್ಲಿ ಇರುವ ದುರಸ್ತಿ ಮಾಡುವವರು. ಅದರ ನಂತರ ನಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವವರು. ವಿನ್ಯಾಸಕಾರರಾದ ನೀವೇ ಉತ್ಪನ್ನವನ್ನು ಮಾಡಿದರೂ ಅದರ ಜೊತೆ ನೀವು ಕಳೆಯುವ ಸಮಯ ತುಂಬಾ ಕಡಿಮೆ. ಬಹಳ ಕಾಲ ಉತ್ಪನ್ನವನ್ನು ಬಳಕೆ ಮಾಡುವ ವ್ಯಕ್ತಿಯ ಜಾಗದಲ್ಲಿ ನಿಂತು ಯೋಚಿಸಿದರೆ ನೀವು ಸ್ನೇಹಿಯಲ್ಲದ ಉತ್ಪನ್ನವನ್ನು ವಿನ್ಯಾಸಗೊಳಿಸಲು ಸಾಧ್ಯವಿಲ್ಲ.” ಹೀಗೆ ನಮ್ಮೊಂದಿಗೆ ಓಲ್ಡ್ ಮ್ಯಾನ್ ಮಾತನಾಡುತ್ತಿದ್ದರು. 

ಚಿಮಣಿ ಇಂಜಿನ್ ಪುನರ್ನಿರ್ಮಾಣದ ಸಂದರ್ಭದಲ್ಲಿ ಮಿಸ್ಟರ್ ಒಂಡ ಅದರ ಸಂಬಂಧಿ ಉತ್ಪನ್ನವಾದ ಎ-ಮಾದರಿ ಇಂಜಿನ್ ನ್ನು ಕೂಡ ಬಹಳ ಕೂಲಂಕುಷವಾಗಿ ಪರಿಶೀಲಿಸಿದರು. 

ಅವರು ಹೇಳಿದರು “ಆ ಇಂಜಿನ್ ನ ಎಲ್ಲ ಕಡೆ ನಾವು ಇಂದು ಕರೆಯುವ ಸ್ನೇಹಪರ ವಿನ್ಯಾಸವನ್ನು ನೋಡಿ ಬೆರಗಾದೆ, ನಾನು ಆ ಇಂಜಿನ್ ಅನ್ನು ಬಿಚ್ಚಿದಾಗ ಇದನ್ನು ನೋಡಿದೆ. ನಾನು ಈ ಮಷೀನ್ ನಿಂದ  ನಟ್ ಗಳನ್ನು ಬಿಡಿಸಿದಾಗ ಯಾವುದೇ ಬಿಡಿ ಭಾಗ ಎಲ್ಲಿಯೂ ಬಿದ್ದು ಹೋಗಲಿಲ್ಲ. ಅರೆ! ಇದೇನಿದು? ಉದಾಹರಣೆಗೆ ಕ್ರ್ಯಾಂಕ್ ಶಾಫ್ಟ್ ಮತ್ತು ಗೇರ್ ಬಾಕ್ಸ್ ಬೇರಿಂಗ್ ಗಳಿಗೆ ಲಾಕ್ ನಟ್ಸ್ ಗಳನ್ನು ಅಳವಡಿಸಲಾಗಿತ್ತು. ಅಂದರೆ ಈ ತಿರುಪುಗಳು (screws) ತಿರುಗುವ ಶಾಫ್ಟ್ ನ್ನು ಹಿಡಿದುಕೊಂಡಿತ್ತು ಮತ್ತು ತಿರುಪುಗಳು ಎಲ್ಲಿಯಾದರೂ ಸಡಿಲವಾದರೆ, ಆ ತಕ್ಷಣಕ್ಕೆ ಏನೂ ಹಾನಿಯಾಗದಂತೆ ಅವುಗಳನ್ನು ವಿನ್ಯಾಸ ಮಾಡಲಾಗಿತ್ತು. 

ಒಂದೇ ತಿರುಪುಗಳು(Screws) ಸಂಪೂರ್ಣವಾಗಿ ಕಳಚಿ ಹೊರಬಾರದಂತೆ ಇದ್ದವು ಅಥವಾ ಅವುಗಳು ಸಂಪೂರ್ಣವಾಗಿ ಹೊರಬಂದರೆ, ಆ ಕೂಡಲೇ ಯಾವುದೇ ಭಾಗಗಳು ಮುರಿಯದಂತೆ ವ್ಯವಸ್ಥೆ ಮಾಡಲಾಗಿತ್ತು. ಏನೋ ತೊಂದರೆಯಿದೆಯೆಂದು ಡ್ರೈವರ್ ನ ಗಮನಕ್ಕೆ ಬರುವವರೆಗಾದರೂ ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿತ್ತು. ಇದು ಸುರಕ್ಷತೆಯ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ಆ ದಿನಗಳಲ್ಲಿ ತಿರುಪುಗಳು ಕನಿಷ್ಠ ನಿಖರತೆಯ ಸಾಧನಗಳಾಗಿದ್ದವು ಮತ್ತು ಎಷ್ಟೇ ಬಿಗಿಯಾಗಿಸಿದರೂ, ಹೇಗಾದರೂ ಸಡಿಲವಾಗಿ ಬಿಡುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಆ ಕಾರಣಕ್ಕಾಗಿಯೇ ಏನೋ ಅವರು ಈ ವಿನ್ಯಾಸವನ್ನು ಅಭಿವೃದ್ಧಿ ಪಡಿಸಿದರು.” 

ಅದೇ ರೀತಿಯ ಕಾಳಜಿ ಉತ್ಪನ್ನಗಳ ನಿರ್ವಹಣೆಯಲ್ಲಿಯೂ(Maintenance) ಕೂಡ ನೋಡಬಹುದು. ಮಿಸ್ಟರ್ ಒಂಡ ಹೇಳುವಂತೆ “ಆಗ ಜನರ ಹತ್ತಿರ ಈಗಿನಂತೆ ವಿಶೇಷ ಸಲಕರಣೆಗಳೇನೂ(Tools) ಇರುತ್ತಿರಲಿಲ್ಲ. ಹಾಗಾಗಿ ದುರಸ್ತಿ ಮಾಡುವವರಿಗೆ ಸುಲಭವಾಗಲೆಂದು, ಅವರು ಯಾವುದೇ ವಿಶೇಷ ಸಲಕರಣೆಗಳ ಬಳಕೆ ಮಾಡದೆ ಬಿಚ್ಚಲು ಮತ್ತು ಜೋಡಿಸಲು ಆಗುವಂತೆ ನಾವು ವಿನ್ಯಾಸಗೊಳಿದ್ದೆವು.”

ಇಂದಿಗೂ ಒಂದು ಗುರಿಯಾಗಿರುವ ಚಿಂತನಶೀಲ ವಿನ್ಯಾಸವನ್ನು ಎ-ಮಾದರಿ ಎಂಜಿನ್ ನಲ್ಲಿ ನೋಡಿ ಮಿಸ್ಟರ್ ಒಂಡ ಬೆರಗಾದರು. 

 ಎ-ಮಾದರಿ, ಇಂಧನ ಟ್ಯಾಂಕ್ ಮೇಲೆ ಹೋಂಡಾ ಹೆಸರು ಹೊಂದಿದ ಮೊದಲ ಉತ್ಪನ್ನವಾಗಿತ್ತು ಮತ್ತು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಎಂದಿನಂತೆ ದಲ್ಲಾಳಿಗಳು ಮಷೀನ್ ಪೂರ್ಣ ಸಿದ್ಧವಾಗುವರೆಗೆ ಕಾದು ಅದನ್ನು ಕೊಳ್ಳುತ್ತಿದ್ದರು. ಹಮಾಮಾತ್ಸು ಸುತ್ತ ಮುತ್ತಲಿನ ಜನ ತಮ್ಮ ಸೈಕಲ್ ಗಳನ್ನು ಕಾರ್ಖಾನೆಗೇ ತಂದು ಇಂಜಿನ್ ಅಳವಡಿಸಿ ಕೊಡುವಂತೆ ಕೋರುತ್ತಿದ್ದರು. 

ಈಗ ಹೆಚ್ಚು ಹೆಚ್ಚು ಸೈಕಲ್ ಶಾಪ್ ಗಳು ಎ -ಮಾದರಿ ಇಂಜಿನ್ ಮೊದಲೇ ಅಳವಡಿಸಿದ ಸೈಕಲ್ ಗಳನ್ನು ಮಾರುತ್ತಿದ್ದರು. ಕೆಲವು ಶಾಪ್ ಗಳು ತಮ್ಮದೇ ಸ್ವಂತ ಬಲವರ್ಧಿತ(Reinforced) ಸೈಕಲ್ ಫ್ರೇಮ್ ಗಳನ್ನು ನಿರ್ಮಿಸಿ ಅದಕ್ಕೆ ಎ-ಟೈಪ್ ಇಂಜಿನ್ ಅಳವಡಿಸಿ ಮಾರುತ್ತಿದ್ದವು. ಹೀಗೆ ಮುಂದೆ ಅವುಗಳು ಹೋಂಡಾದಂತೆಯೇ ತಮ್ಮ ಸ್ವಂತ ಇಂಜಿನ್ ಮಾಡಿ ಅವರೂ ತಯಾರಕರಾದರು. ಹೋಂಡಾದ ಯಶಸ್ಸಿನಿಂದ ಉತ್ತೇಜಿತರಾಗಿ ಸುಮಾರು ೪೦  ತಯಾರಕರು ಹಮಾಮಾತ್ಸು ಒಂದರಲ್ಲೇ ಕಾಣಿಸಿಕೊಂಡರು. ಜಪಾನಿನಲ್ಲಿ ಹಮಾಮಾತ್ಸು “ಪೊನ್ -ಪೊನ್ “ ಉತ್ಪಾದನೆಯ ಕೇಂದ್ರವಾಯಿತು. “ಪೊನ್ -ಪೊನ್” ಎಂಬುದು ಹಮಾಮಾತ್ಸುವಿನಲ್ಲಿ ಇಂಜಿನ್ ಅಳವಡಿಸಿದ ಸೈಕಲ್ ಗೆ ಇದ್ದ ಸ್ಥಳೀಯ ಹೆಸರು. 

ಹೊಸ ಉತ್ಪನ್ನಗಳು

ಸೆಪ್ಟೆಂಬರ್ ೨೪, ೧೯೪೮ ರಂದು ಹೋಂಡಾ ಮೋಟಾರ್ ಕಂಪನಿ ತನ್ನ ಎ -ಮಾದರಿ ಉತ್ಪನ್ನದ ಯಶಸ್ಸಿನ ಅಲೆ ಏರಿ ಮುಂದೆ ಸಾಗಲು ತೊಡಗಿತು. ಹಮಾಮಾತ್ಸು ಸ್ಟೇಷನ್ ಬಳಿಯ ಇಟಯ- ಚೊ ಎಂಬಲ್ಲಿ ಸಂಸ್ಥೆಯ ಪ್ರಧಾನ ಕಚೇರಿಯನ್ನು ಸ್ಥಾಪಿಸಲಾಯಿತು. ಅದು ಕೇವಲ ಒಂದು ಕೋಣೆಯ ಚಿಕ್ಕ ಕಚೇರಿಯಾಗಿತ್ತು. 

ಎ-ಮಾದರಿಯ  ನಂತರ ಕಂಪನಿ ೯೦ಸಿಸಿ ಯ ಚಿಕ್ಕ ಸಾಮಾನು ಸಾಗಣೆಯ ತ್ರಿಚಕ್ರ ವಾಹನ, ಬಿ-ಟೈಪ್ ನ ಮೂಲ ಮಾದರಿ ರಚಿಸಿತು. ಆದರೆ ಅದರ ಚಾಸಿಸ್ ಬೇರೆ ತಯಾರಿಕೆ ಕಂಪನಿಗೆ ಹೊರಗುತ್ತಿಗೆ ಕೊಡಬೇಕಾಗಿತ್ತು ಮತ್ತು ತ್ರಿಚಕ್ರದ ಸವಾರಿ ಅಸ್ಥಿರವಾಗಿತ್ತು. ಅಧ್ಯಕ್ಷ ಹೊಂಡಾರವರಿಗೆ ಇವೆರಡೂ ಇಷ್ಟವಾಗಲಿಲ್ಲ ಮತ್ತು ಇದನ್ನು ಮೂಲ–ಮಾದರಿಯ ಹಂತದಲ್ಲೇ ರದ್ದುಗೊಳಿಸಿ ಬಿಟ್ಟರು. 

ಎ-ಟೈಪ್ ಇಂಜಿನ್ ಆಧರಿಸಿದ ೯೬ ಸಿಸಿ ಯ ಸಿ-ಟೈಪ್,  ಹೋಂಡಾ ಅಭಿವೃದ್ಧಿ ಪಡಿಸಿದ ಮುಂದಿನ ಉತ್ಪನ್ನ. ಎ-ಟೈಪ್ ನ ಒಂದು ಅಶ್ವ ಶಕ್ತಿ (Horse power),  ಸಿ-ಟೈಪ್ ನಲ್ಲಿ ಮೂರಕ್ಕೆ ಏರಿತು. ಸಿ-ಟೈಪ್ ಬರೀ ಇಂಜಿನ್ ಆಗಿ ಮಾತ್ರವಲ್ಲದೆ ಒಂದು ಮೋಟಾರ್ ಸೈಕಲ್ ಆಗಿ ಕೂಡ ಮಾರಲಾಯಿತು. ವಿಶೇಷವಾಗಿ ಅಭಿವೃದ್ಧಿ ಪಡಿಸಿದ ಫ್ರೇಮ್ ಮೇಲೆ ಸಿ-ಟೈಪ್ ಇಂಜಿನ್ ಅಳವಡಿಸಿದ್ದ ಇದು ಪೆಡಲ್ ಇರುವ ಮೋಟಾರ್ ಸೈಕಲ್ ನಂತೆ ಇತ್ತು. ಆದರೆ ಫ್ರೇಮ್ ತಯಾರಿಕೆಯ ಸಾಮರ್ಥ್ಯ ಕಂಪನಿಯಲ್ಲಿ ಇಲ್ಲದ ಕಾರಣ ಹೊರಗುತ್ತಿಗೆ ನೀಡಬೇಕಾಗಿತ್ತು. ವೆಲ್ಡ್ ಮಾಡಿದ ಕೊಳವೆ (pipe) ತಯಾರಿಸಲು ಬಹಳ ಸಮಯ ಹಿಡಿಯುತ್ತಿತ್ತು ಮತ್ತು ಗುಣಮಟ್ಟದಲ್ಲಿ ಏರಿಳಿತವಿತ್ತು.  ಇದರಿಂದ ಹೋಂಡಾ ತಮ್ಮ ಸಂಯಮ ಕಳೆದು ಕೊಂಡರು.

ಸಿ-ಟೈಪ್ ನ ಒಂದು ಗಮನಾರ್ಹ  ಅಂಶವೇನೆಂದರೆ ಅದು ಮೋಟಾರ್ ಸೈಕಲ್ ರೇಸ್ ನಲ್ಲಿ ಭಾಗವಹಿಸಿದ ಹೋಂಡಾದ ಮೊದಲ ಉತ್ಪನ್ನವಾಗಿತ್ತು. ಜುಲೈ ೧೯೪೯ರಲ್ಲಿ ಮರುಕೊ ತಮಗಾವಾ ಎಂಬಲ್ಲಿ ನೆಡೆದ ಜಪಾನೀಸ್ – ಅಮೆರಿಕನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೇಣಿಯಲ್ಲಿ ಜಯಶಾಲಿಯಾಗಿತ್ತು. 

ಆದರೆ ಅಧ್ಯಕ್ಷ ಹೊಂಡರವರಿಗೆ ಇದು ಕೇವಲ ಒಂದು ಸಂಕ್ರಮಣ ಉತ್ಪನ್ನ ವಾಗಿತ್ತೇ ಹೊರತು ಅವರು ಹುಡುಕುತ್ತಿದ್ದ ಉನ್ನತ ಮಟ್ಟದ ಉತ್ಪನ್ನವಾಗಿರಲಿಲ್ಲ. ಬರಿ ಇಂಜಿನ್ ಗೆ ಸೀಮಿತವಾಗದೆ, ಇಂಜಿನ್ ಮತ್ತು ಬಾಡಿ ಎರಡನ್ನೂ ತಯಾರಿಸಿ ಮೋಟಾರ್ ಸೈಕಲ್ ಮಾಡುವ ಮಹತ್ವಾಕಾಂಕ್ಷೆ ಅವರಲ್ಲಿ ದಿನೇ ದಿನೇ ಬೆಳೆಯುತ್ತಿತ್ತು. 

ಮುಂದುವರೆಯುತ್ತದೆ… 

10ಮುಖಗಳು, ನಿಮ್ಮ ಇಮೇಲ್ ನಲ್ಲಿ !

10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ

ಫಾಲೋ ಮಾಡಿ