21 October 2024 ರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಒಂದು 397 ಅಡಿ ಉದ್ದದ, 5500 ಟನ್ ತೂಕದ ಸ್ಟೀಲ್ ಗಗನಚುಂಬಿ ಕಟ್ಟಡ ನೆಲದಿಂದ ನಭದೆಡೆಗೆ ಉಡಾವಣೆಗೊಂಡಿತು ಎಂದು ಕಲ್ಪಿಸಿಕೊಳ್ಳಿ. ಆಮೇಲೆ ಸುಮಾರು ಏಳು ನಿಮಿಷದ ನಂತರ ಆ ಕಟ್ಟಡದ ಒಂದು ಭಾಗ ಭುವಿಯಕಡೆ ಬೀಳುತ್ತಿದೆ ಮತ್ತು ಅದನ್ನು 400ಅಡಿ ಉದ್ದದ ಟವರ್ ಗೆ ಅಂಟಿದ ಯಾಂತ್ರಿಕ ಬಾಹುಗಳಿಂದ ಕ್ಯಾಚ್ ಮಾಡಲಾಯಿತು ಎಂದುಕೊಳ್ಳಿ.
ಹೌದು. ಅದೇ ರೀತಿ ನೆಡೆಯಿತು ಅಕ್ಟೋಬರ್ ಹದಿಮೂರರ ಸ್ಪೇಸ್ ಎಕ್ಸ್ ಸ್ಟಾರ್ ಶಿಪ್ ನ ಐದನೇ ಹಾರಾಟ ಪರೀಕ್ಷೆ ಸಂದರ್ಭದಲ್ಲಿ. ಸ್ಟಾರ್ ಶಿಪ್ ಇಂದಿನವರೆಗೂ ಯಾವುದೇ ಮಾನವ ನಿರ್ಮಿತ ರಾಕೆಟ್ ಗಿಂತಲೂ ಹಲವು ಪಟ್ಟು ದೊಡ್ಡದಾಗಿರುವ ಅತ್ಯಂತ ಬಲಶಾಲಿ ರಾಕೆಟ್. ಇದರ ವಿಶೇಷವೇನೆಂದರೆ, ಇದನ್ನು ಸಂಪೂರ್ಣವಾಗಿ ಪುನರ್ ವಿನಿಯೋಗಿಸಲು ಆಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಸೂಪರ್ ಹೆವಿ ಎನ್ನುವ ಬೂಸ್ಟರ್ ಅನ್ನೂ ಸೇರಿಸಿದರೆ ಈ ರಾಕೆಟ್ ನ ಎತ್ತರ 397ಅಡಿ ಅಂದರೆ ಸುಮಾರು 37 ಮಹಡಿಗಳಿರುವ ಕಟ್ಟಡದಷ್ಟು! ಬರೀ ಸೂಪರ್ ಹೆವಿ ಬೂಸ್ಟರ್ 20 (232ಅಡಿ) ಮಹಡಿಗಳ ಕಟ್ಟಡದಷ್ಟು ಎತ್ತರವಿದೆ.
ಸ್ಟಾರ್ ಶಿಪ್ ಅನ್ನು ಕಕ್ಷೆಯ ಕಡೆಗೆ ನೂಕಿ ಭೂಮಿಗೆ ಹಿಂದಿರುಗುವ ಸೂಪರ್ ಹೆವಿ ಬೂಸ್ಟರ್ ಅನ್ನು ‘ಮೆಕಾಝಿಲ್ಲಾ’ ಎಂಬ ದೈತ್ಯ ಟವರ್ ಗೆ ಸಮತಲವಾಗಿ ಕೂಡಿಕೊಂಡ ‘ಚಾಪ್ ಸ್ಟಿಕ್’ ಎಂಬ ಎರಡು ಯಾಂತ್ರಿಕ ಬಾಹುಗಳು ಕ್ಯಾಚ್ ಹಿಡಿದದ್ದು ಮಹತ್ತರ ಸಾಧನೆ. ಮಾನವ ಇಲ್ಲಿಯವರೆಗೂ ಕ್ಯಾಚ್ ಹಿಡಿದ ಅತಿ ದೊಡ್ಡ ವಸ್ತು ಇದು.
ಮೇಲಿಂದ ಬೀಳುತ್ತಿರುವ ಬೂಸ್ಟರ್ ಅನ್ನು ನೆಲದ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ತಂತ್ರಜ್ಞಾನ ಸ್ಪೇಸ್ ಎಕ್ಸ್ ಬಳಿ ಆಗಲೇ ಇದೆ. ಇಂತಹ ಲ್ಯಾಂಡಿಂಗ್ ನಲ್ಲಿ ಇದು ನಿಷ್ಣಾತ ಕೂಡ, 2023 ರ ಒಂದೇ ವರ್ಷದಲ್ಲಿ 96 ಬಾರಿ ಕಕ್ಷೆಗೆ ಹಾರಿದ ಫಾಲ್ಕನ್ ಎಂಬ ಸ್ಪೇಸ್ ಎಕ್ಸ್ ನ ಮತ್ತೊಂದು ರಾಕೆಟ್ ನ ಬೂಸ್ಟರ್ ಅನ್ನು ಹೀಗೆ ಲ್ಯಾಂಡ್ ಮಾಡಿಸಿ ಮರು ಬಳಕೆ ಮಾಡುತ್ತಾರೆ. ಚಂದ್ರ , ಮಂಗಳ ಗ್ರಹ ಇವುಗಳಿಗೆ ಪ್ರಯಾಣಿಸಲಿರುವ ಸ್ಟಾರ್ ಶಿಪ್, ಅಲ್ಲಿ ವಿಮಾನದಂತೆ ಇಳಿಯಲು ಯಾವದೇ ಪೂರ್ವ ನಿರ್ಮಿತ ರನ್ವೇ ಗಳನ್ನು ನಿರೀಕ್ಷಿಸುವಂತಿಲ್ಲ. ಹಾಗಾಗಿಯೇ ಲಂಬವಾಗಿ ಲ್ಯಾಂಡ್ ಆಗುವ ಪರಿಹಾರವನ್ನು ಸ್ಪೇಸ್ ಎಕ್ಸ್ ಅಭಿವೃದ್ಧಿ ಪಡಿಸಿ, ಪಳಗಿಸಿದೆ.
ಹಾಗಾದರೆ ಹೀಗೆ ಲಂಬವಾಗಿ ಬೂಸ್ಟರ್ ಅನ್ನು ಲ್ಯಾಂಡ್ ಮಾಡುವ ಯಶಸ್ವೀ ವಿಧಾನದ ಬದಲು ಬೂಸ್ಟರ್ ಅನ್ನು ಆಗಸದಿಂದ ಕ್ಯಾಚ್ ಹಿಡಿಯುವ ಈ ಅಸಾಧ್ಯವೆನಿಸುವ ಪ್ರಯತ್ನವೇಕೆ? ಇದರಿಂದ ಆಗುವ ಪ್ರಯೋಜನಗಳೇನು?
ಇದನ್ನು ಅರ್ಥ ಮಾಡಿಕೊಳ್ಳಲು ಸ್ಪೇಸ್ ಎಕ್ಸ್ ಕಂಪನಿಯ ಮಿಷನ್ ಅನ್ನು ಅರ್ಥ ಮಾಡಿಕೊಳ್ಳಬೇಕು. ಮಾನವನನ್ನು ಬಹು ಗ್ರಹ ಜೀವಿಯನ್ನಾಗಿ ಮಾಡುವ ಗುರಿ ಹೊಂದಿರುವ ಸ್ಪೇಸ್ ಎಕ್ಸ್ ಅದನ್ನು ಸಾಕಾರಗೊಳಿಸಲೆಂದೇ ಸ್ಟಾರ್ ಶಿಪ್ ಅನ್ನು ಅಭಿವೃದ್ಧಿ ಗೊಳಿಸುತ್ತಿದೆ. ಭೂಮಿಯ ಕಕ್ಷೆ, ಚಂದ್ರ , ಮಂಗಳ ಗ್ರಹ ಮತ್ತು ಇನ್ನೂ ಆಚೆಗೆ ಮನುಷ್ಯ ಮತ್ತು ಸರಕುಗಳನ್ನು ಸಾಗಿಸಬಲ್ಲ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನ ಇದಾಗಲಿದೆ.. ಸುಮಾರು ಐವತ್ತು ವರ್ಷಗಳ ನಂತರ ಮಾನವನನ್ನು ಮತ್ತೆ ಚಂದ್ರ ಲೋಕಕ್ಕೆ ಹೊತ್ತೊಯ್ಯಲಿರುವ ಸ್ಟಾರ್ ಶಿಪ್ ವೈಜ್ಞಾನಿಕ ಪ್ರಯೋಗಾಲಯವನ್ನು ಚಂದ್ರನ ಅಂಗಳದಲ್ಲಿ ನಿರ್ಮಿಸುವ ಗುರಿ ಹೊಂದಿದೆ. ಇಂತಹ ಸಂಶೋಧನಾ ಪ್ರಯೋಗಾಲಯವನ್ನು ನಿರ್ಮಿಸಲು ಭೂಮಿಯಿಂದ ಅನೇಕ ಬಾರಿ ಸರಕುಗಳನ್ನು ಕೊಂಡೊಯ್ಯ ಬೇಕಾಗುತ್ತದೆ. ಉಡಾವಣಾ ವಾಹನದ ಮರು ಬಳಕೆಯಷ್ಟೇ ಅಲ್ಲದೆ , ತ್ವರಿತವಾಗಿ ಮುಂದಿನ ಉಡಾವಣೆಗೆ ಅಣಿಯಾಗುವುದು ಮುಖ್ಯವಾಗುತ್ತದೆ.
ಈ ಹಿನ್ನಲೆಯಲ್ಲಿ ಮೆಕಾಝಿಲ್ಲಾ ಟವರ್ ನಿಂದಲೇ ಉಡಾವಣೆಗೊಂಡ ಸ್ಟಾರ್ ಶಿಪ್ ನ ಬೂಸ್ಟರ್ ಅನ್ನು ಅಲ್ಲೇ ಹಿಡಿಯುವುದರಿಂದ ತ್ವರಿತವಾಗಿ ಮುಂದಿನ ಉಡಾವಣೆಗೆ ಸಿದ್ಧ ಮಾಡಬಹುದು. ಎಲ್ಲಿಯೋ ಲ್ಯಾಂಡ್ ಆಗುವ ಬೂಸ್ಟರ್ ಆದರೆ, ಅದನ್ನು ಮತ್ತೆ ಉಡಾವಣಾ ಸ್ಥಾನಕ್ಕೆ ಸಾಗಿಸಬೇಕು. ಅಷ್ಟೇ ಅಲ್ಲದೆ ಭೂಮಿಯ ಮೇಲೆ ಲಂಬವಾಗಿ ನಿಲ್ಲಲು ಅನುಕೂಲವಾಗುವಂತೆ ಲ್ಯಾಂಡಿಂಗ್ ಕಾಲುಗಳು ಬೇಕಾಗುತ್ತವೆ. ಅಂದರೆ ಈ ಕಾಲುಗಳನ್ನು ಮೊದಲೇ ಎತ್ತೊಯ್ಯಬೇಕಾಗುತ್ತದೆ. ರಾಕೆಟ್ ವಿಜ್ಞಾನದಲ್ಲಿ ಕೊಂಡೊಯ್ಯಬೇಕಾದ ದೃವ್ಯ ರಾಶಿ ವೈರಿಯಿದ್ದಂತೆ, ಕಡಿಮೆಯಾದಷ್ಟೂ ಒಳ್ಳೆಯದು. ಆಗಸದಿಂದ ಕ್ಯಾಚ್ ಮಾಡುವ ವಿಧಾನದಲ್ಲಿ ಕಾಲುಗಳ ಅವಶ್ಯವಿಲ್ಲ ಹಾಗಾಗಿ ಅಷ್ಟು ದೃವ್ಯ ರಾಶಿ ಉಳಿಸಬಹುದು. ತ್ವರಿತವಾಗಿ ಮುಂದಿನ ಉಡಾವಣೆ ಕೂಡ ಮಾಡಬಹುದು.
ಆಗಸದಿಂದ ಬೀಳುತ್ತಿರುವ ಬೃಹತ್ ಬೂಸ್ಟರ್ ಅನ್ನು ಕ್ಯಾಚ್ ಮಾಡುವ ದೃಶ್ಯವನ್ನು ನೋಡಿದರೆ ಆಶ್ಚರ್ಯವಾಗದೇ ಇರದು. ಇಲ್ಲಿ ಕ್ಯಾಚ್ ಹಿಡಿಯುವುದು ಅಂದರೆ ನಾವು ಚೆಂಡನ್ನು ಹಿಡಿದಂತೆ ಎಂಬ ಅರ್ಥದಲ್ಲಿ ತಿಳಿದುಕೊಂಡರೆ ದಾರಿ ತಪ್ಪಬಹುದು. ಬೂಸ್ಟರ್ ಅನ್ನು ಚಾಪ್ ಸ್ಟಿಕ್ ಎಂಬ ಎರಡು ಹೊರ ಚಾಚಿದ ಬಾಹುಗಳ ಮೇಲೆ ಇಂಜಿನ್ ನ ನೂಕು ಬಲ (ತೃಸ್ಟ್ ) ಮತ್ತು ಅದರ ದಿಕ್ಕನ್ನು ನಿಯಂತ್ರಿಸಿ ನಿಧಾನವಾಗಿ ಲ್ಯಾಂಡ್ ಮಾಡಲಾಗುತ್ತದೆ. ಅಂದರೆ ನಮ್ಮ ಕೈ ಇರುವಲ್ಲಿಯೇ ಬಾಲ್ ಬಂದು ಕೂತಂತೆ. ಹಾಗಂದ ಮಾತ್ರಕ್ಕೆ ಇದೇನೂ ಸುಲಭದ ಮಾತಲ್ಲ.
ಬೂಸ್ಟರ್ ಕ್ಯಾಚ್ ಹಿಡಿಯುವ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಸ್ಪೇಸ್ ಎಕ್ಸ್ ನ ಈ ಸಾಧನೆ ಗಣನೀಯವಾದದ್ದು. ಸ್ಥಾಪಕರಾದ ಎಲಾನ್ ಮಸ್ಕ್ ಅವರ ಮಾನವನನ್ನು ಬಹು ಗೃಹ ಜೀವಿಯನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಮತ್ತು ಅದನ್ನು ಸಾಧಿಸುವ ಛಲ ಮೆಚ್ಚಲೇ ಬೇಕಾದ ವಿಷಯ.