“I always wanted to be a writer. A writer of science, like Carl Sagan. At last, this is the only letter I am getting to write.”

ಇದು ಹೈದರಾಬಾದ್ ವಿಶ್ವವಿದ್ಯಾಲಯದ ಪಿ ಹೆಚ್ ಡಿ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಅವರ ಸೂಸೈಡ್ ನೋಟ್ ನಲ್ಲಿದ್ದ ಹೃದಯಸ್ಪರ್ಶಿ ಸಾಲುಗಳು. ಜಾತಿ ತಾರತಮ್ಯದ ವಿರುದ್ಧ ದನಿಯೆತ್ತಿ , ವಿದ್ಯಾರ್ಥಿಗಳ ಹಕ್ಕು , ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ವೇಮುಲ, ರಾಜಕೀಯ ಮತ್ತು ವ್ಯವಸ್ಥೆಯ ತೀವ್ರವಾದ ಒತ್ತಡವನ್ನು ಸಹಿಸಲಾರದೆ ೨೦೧೬ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. 

ರೋಹಿತ್ ವೇಮುಲನಂತ ಅಸಂಖ್ಯ ಜನರಿಗೆ ಪ್ರೇರಣೆಯಾದ ಮಹಾನ್ ವ್ಯಕ್ತಿ ಕಾರ್ಲ್ ಸೇಗನ್ ಅವರು. ಖಗೋಳ ಶಾಸ್ತ್ರಜ್ಞರಾಗಿದ್ದ ಸೇಗನ್, ಅನೇಕ ವೈಜ್ಞಾನಿಕ – ವೈಚಾರಿಕ ಪುಸ್ತಕಗಳು ಮತ್ತು ಡಾಕ್ಯುಮೆಂಟರಿಗಳ ಮೂಲಕ ಜಗತ್ಪ್ರಸಿದ್ಧರಾಗಿದ್ದರೆ. 

೧೯೯೬ರಲ್ಲಿ, ತಮ್ಮ ೬೨ನೇ ವಯಸ್ಸಿನಲ್ಲಿ ಸೇಗನ್ ಸಾವನ್ನಪಿದರು.  ಅವರ ಜೊತೆ ಸುಮಾರು ಇಪ್ಪತ್ತು ವರ್ಷ ಸಂಗಾತಿಯಾಗಿ ಬಾಳಿದ ಆನ್ ಡ್ರುಯಾನ್ ಅವರು ಸೇಗನ್ ಸಾವಿನ ಬಗ್ಗೆ, ಇಬ್ಬರ ನಡುವಿನ ಒಡನಾಟದ ಬಗ್ಗೆ ಭಾವನಾತ್ಮಕವಾದ ಒಂದು ಚಿಕ್ಕ ಬರಹ ಬರೆದಿದ್ದಾರೆ. ಆ ಬರಹದ ಕನ್ನಡ ಭಾಷಾಂತರ ಈ ಕೆಳಗಿದೆ.

“ದೇವರು ಧರ್ಮದಲ್ಲಿ  ನಂಬಿಕೆ ಇಲ್ಲದವರು ಎಂದು ಗುರುತಿಸಿಕೊಂಡಿದ್ದ ಮತ್ತು ಪ್ರಸಿದ್ಧವಾದ ನನ್ನ ಗಂಡ ತೀರಿಕೊಂಡಾಗ ತುಂಬಾ ಜನ ನನ್ನಲ್ಲಿ ಬಂದು – ಈಗಲೂ ಕೆಲವೊಮ್ಮೆ – ಹೀಗೆ ಕೇಳುವುದಿದೆ. ನಿಮ್ಮ ಗಂಡ ಕಾರ್ಲ್ ಜೀವಿತದ ಕೊನೆಯಲ್ಲೇನಾದರೂ ಬದಲಾಗಿದ್ದರಾ, ಮರಣೋತ್ತರ ಜೀವನ ಮತ್ತು ಪುನರ್ಜನ್ಮ ಇಂತಹದರಲ್ಲಿ ನಂಬಿಕೆ ಬೆಳೆಸಿಕೊಂಡಿದ್ದರಾ, ನೀವು ಮತ್ತೆ ಅವರನ್ನು ನೋಡುತ್ತೇನೆ ಎಂದು ತಿಳಿದಿದ್ದೀರಾ ಎಂದು ಆಗಾಗ ನನ್ನಲ್ಲಿ ಕೇಳುತ್ತಾರೆ. 

ಕಾರ್ಲ್ ಯಾವುದೇ ಶಕ್ತಿಗುಂದದೆ ಧೈರ್ಯದಿಂದ ತಮ್ಮ ಸಾವನ್ನು ಎದುರಿಸಿದರು ಮತ್ತು ಯಾವತ್ತೂ ಭ್ರಮೆಗಳ ಆಸರೆ ಪಡೆಯಲಿಲ್ಲ. ದುರಂತವೇನೆಂದರೆ ನಾವು ಒಬ್ಬರೊಬ್ಬರನ್ನು ಮತ್ತೆಂದೂ ನೋಡುವುದಿಲ್ಲ ಎಂದು ನಮ್ಮಿಬ್ಬರಿಗೂ ತಿಳಿದಿತ್ತು. ಕಾರ್ಲ್ ರೊಂದಿಗೆ ಮತ್ತೆ ಒಂದಾಗಬಹುದು ಎಂಬ ಯಾವ ನಿರೀಕ್ಷೆಯೂ ನನಗಿಲ್ಲ. ಆದರೆ ಬಹಳ ಒಳ್ಳೆಯ ವಿಷಯವೇನೆಂದರೆ ನಾವು ಇಪ್ಪತ್ತು ವರ್ಷ ಜೊತೆಯಲ್ಲಿದ್ದಾಗ ಪ್ರತಿಕ್ಷಣವೂ ನಮ್ಮ ಬದುಕು ಎಷ್ಟು ಕ್ಷಣಿಕ ಮತ್ತು ಅಮೂಲ್ಯವಾದುದು ಎಂಬ ಸ್ಪಷ್ಟ ಅರಿವಿನಿಂದ ಬಾಳಿದೆವು. ನಾವು ಎಂದಿಗೂ, ಸಾವು ಎಂದರೆ ಒಂದು ಅಂತಿಮ ವಿದಾಯವಷ್ಟೇ ಅಲ್ಲದೆ ಬೇರೇನೋ ಇದೆ ಎಂದು ನಟಿಸುತ್ತಾ ಸಾವಿನ ಅರ್ಥವನ್ನು ಕ್ಷುಲ್ಲಕಗೊಳಿಸಲಿಲ್ಲ. 

ನಾವು ಒಂದಾಗಿ ಜೀವಿಸಿದ ಪ್ರತಿ ಕ್ಷಣವೂ ಪವಾಡದಂತೆ – ಪವಾಡವೆಂದರೆ ಅಲೌಕಿಕ ಅಥವಾ ವಿವರಿಸಲಾಗದ ಎಂಬ ಅರ್ಥದಲ್ಲಿ ಅಲ್ಲ. ನಾವು ಅದೃಷ್ಟದ ಫಲಾನುಭವಿಗಳೆಂದು ನಮಗೆ ತಿಳಿದಿತ್ತು…. ಆ ಅದೃಷ್ಟ ಅಷ್ಟು ಉದಾರ ಮತ್ತು ದಯಾಮಯಿಯಾಗಿರಬೇಕೆಂದರೆ … ನಾವು ಒಬ್ಬರನ್ನೊಬ್ಬರು ಕಂಡುಕೊಳ್ಳಬೇಕೆಂದರೆ, ಅದೂ – ತಮ್ಮ ಕಾಸ್ಮೋಸ್ ಪುಸ್ತಕದಲ್ಲಿ  ಅಷ್ಟು ಸುಂದರವಾಗಿ ಕಾರ್ಲ್ ಬರೆದಂತೆ – ಈ  ವಿಶಾಲ ಜಗತ್ತಿನಲ್ಲಿ ಮತ್ತು  ಅಗಾಧ ಸಮಯದಲ್ಲಿ  (vastness of space and the immensity of time)… ನಾವು ಒಟ್ಟಿಗೆ ಇಪ್ಪತ್ತು ವರ್ಷ ಕಳೆಯಬೇಕೆಂದರೆ … ಅದು ನನ್ನಲ್ಲಿ ಉಳಿಯುವಂತಹದ್ದು ಮತ್ತು ಹೆಚ್ಚು ಅರ್ಥಪೂರ್ಣವಾದದ್ದು. 

ಅವರು ಬದುಕಿದ್ದಾಗ, ಅವರು ನನ್ನನ್ನ ನೆಡೆಸಿಕೊಂಡ ರೀತಿ ಮತ್ತು ನಾನು ಅವರನ್ನು ನೆಡೆಸಿಕೊಂಡ ರೀತಿ, ನಾವು ಒಬ್ಬರನ್ನೊಬ್ಬರು ಮತ್ತು ಕುಟುಂಬವನ್ನು ನೋಡಿಕೊಂಡ ರೀತಿ, ಅದು ನಾನು ಅವರನ್ನು ಮುಂದೊಂದು ದಿನ ಮತ್ತೆ  ನೋಡುತ್ತೇನೆ ಎಂಬ ಕಲ್ಪನೆಗಿಂತ ಬಹಳ ಮುಖ್ಯ ವಾದದ್ದು. ನಾನು ಕಾರ್ಲ್ ಅನ್ನು ಮತ್ತೆ ನೋಡುತ್ತೇನೆ ಎಂದು ಭಾವಿಸುವುದಿಲ್ಲ ಆದರೆ ನಾನು ಅವರನ್ನು ನೋಡಿದೆ. ಒಬ್ಬರನೊಬ್ಬರು ನೋಡಿದೆವು, ಒಬ್ಬರನೊಬ್ಬರು ಈ ಕಾಸ್ಮೋಸ್ ನಲ್ಲಿ ಕಂಡು ಕೊಂಡೆವು, ಮತ್ತು ಅದು ಅದ್ಭುತವಾಗಿತ್ತು. “

ಆನ್ ಡ್ರುಯಾನ್
ಕಾರ್ಲ್ ಸೇಗನ್ ಪತ್ನಿ  


ಈ ಬರಹದಲ್ಲಿ ನನಗೆ ಬಹಳ ಆಸಕ್ತಿದಾಯಕವಾಗಿ ಕಂಡದ್ದು – Beneficiaries of chance – ‘ಅದೃಷ್ಟದ ಫಲಾನುಭವಿಗಳು’ ಎಂಬ ಪದಗಳು.

ನಮ್ಮ ಜೀವನದ ಪಯಣದಲ್ಲಿ ಯಾವಾಗಲೂ ಅನಿಶ್ಚಿತವಾದ ಆಗು-ಹೋಗುಗಳಿಗೆ, ಸುಖ ದುಃಖಗಳಿಗೆ ದೇವರೇ ಕಾರಣ ಎಂಬ ವಿವರಣೆಗೆ ಪರ್ಯಾಯವಾಗಿರುವುದು ಅದೃಷ್ಟ. ಒಬ್ಬರ ಸುಖಮಯ ಜೀವನಕ್ಕೆ ಕಾರಣ ದೇವರ ಕೃಪೆ ಎಂದು ನಂಬಬಹುದು ಅಥವಾ ಅಲ್ಲ, ಆತ ಅದೃಷ್ಟದ ಫಲಾನುಭವಿ ಅಷ್ಟೆ ಎನ್ನಬಹುದು. ಕೃಪೆಯಿಂದಲೇ ಅದೃಷ್ಟ ಎಂದು ವಾದಿಸಿದರೆ ‘ಒಳ್ಳೆಯವರಿಗೇ ಕಷ್ಟವೇಕೆ ?” ಎಂಬ ಪ್ರಶ್ನೆ ಇರುತ್ತಿರಲಿಲ್ಲ. 

ಹಾವು ಏಣಿ ಆಟದಂತಿರುವ ನಮ್ಮ ಬಾಳಿನಲ್ಲಿ ಕೈ ಕಟ್ಟಿ ಕೂರದೇ ಪಗಡೆ ಉರುಳಿಸುವುದು ನಮ್ಮ ಕೈಯಲ್ಲಿದೆ.  ಏಣಿ ಸಿಗುವುದು ಅದೃಷ್ಟ. ಅಷ್ಟೇ. ಪ್ರಾರ್ಥನೆ – ಕೃಪೆ ಎಂಬ ಕೊಡು -ಕೊಳ್ಳುವಿಕೆಯ ವ್ಯವಹಾರವಿಲ್ಲ, ಕರ್ಮ-ಫಲದ ಹಂಗಿಲ್ಲ. 

“My birth is my fatal accident” ಎಂದು ಬರೆದುಕೊಂಡಿರುವ ರೋಹಿತ್ ವೇಮುಲ ಅವರ ಸಾವು ಅಥವಾ ಬದುಕು ದುರದೃಷ್ಟಕರವೇ?

ಇಷ್ಟವಾದರೆ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

10ಮುಖಗಳು, ನಿಮ್ಮ ಇಮೇಲ್ ನಲ್ಲಿ !

10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ

ಫಾಲೋ ಮಾಡಿ