ಐಸಾಕ್ ಅಸಿಮೋವ್ ನ ಫೌಂಡೇಶನ್ ಪುಸ್ತಕ ವಿಮರ್ಶೆ. Foundation Book Kannada Review

ಟಾಪ್ ೧೦ ಸೈನ್ಸ್ ಫಿಕ್ಷನ್  ಕಾದಂಬರಿಗಳ ಪಟ್ಟಿಯಲ್ಲಿ ಸದಾ ಒಂದು ಸ್ಥಾನ ಪಡೆಯುವ ಬಹಳ ಜನಪ್ರಿಯ ಐಸಾಕ್ ಅಸಿಮೋವ್ ನ ಫೌಂಡೇಶನ್ ಕಾದಂಬರಿಯನ್ನು  ತುಂಬಾ ವರ್ಷದಿಂದ ಓದಲು ಬಯಸಿದ್ದೆ. ಕೆಲವು ವರ್ಷಗಳ ಹಿಂದೆ ಕಿಂಡಲ್ ಸ್ಯಾಂಪಲ್ ಡೌನ್ಲೋಡ್ ಮಾಡಿಕೊಂಡು ಸಲ್ಪ ಓದಿಯೂ ಇದ್ದೆ. ಆದರೆ ಈಗ ಕೊನೆಗೂ ಸಂಪೂರ್ಣ ಓದುವ ಅವಕಾಶ ದೊರೆಯಿತು. 

ಓದಲು ಶುರು ಮಾಡಿದೊಡನೆ ಮೊದಲ ಕೆಲವು ಪುಟಗಳು ಸ್ಟಾರ್ ವಾರ್ಸ್ ಸರಣಿಯ ಚಲನ ಚಿತ್ರಗಳ  ನೆನಪನ್ನು ತಂದುಕೊಟ್ಟಿತು. ವಿಶೇಷವಾಗಿ ಗಲ್ಯಾಕ್ಟಿಕ್ ಸಾಮ್ರಾಜ್ಯ , ಅದು ಹೇಗೆ ಗ್ಯಾಲಕ್ಸಿಯ ಇತರ ಪ್ರಪಂಚಗಳನ್ನು  ತನ್ನ ಅಧೀನದಲ್ಲಿ ಇಟ್ಟು ಕೊಂಡಿದೆ, ಸಾಮ್ರಾಜ್ಯದ ಕೇಂದ್ರವಾಗಿದ್ದ ಟ್ರ್ಯಾಂಟೋರ್ ಎಂಬ ಅತ್ಯಂತ ಮುಂದುವರಿದ ನಗರ, ಅಲ್ಲಿ ನೆಡೆಯುವ  ಗಲ್ಯಾಕ್ಟಿಕ್ ಕೌನ್ಸಿಲ್ ಸಭೆಗಳು ಮತ್ತು ಇನ್ನಿತರ ಕತೆಗೆ ಬೇಕಾದ ಚೌಕಟ್ಟು  ಮತ್ತು ವಾತಾವರಣ ಸ್ಟಾರ್ ವಾರ್ಸ ನಂತೆಯೇ ಇತ್ತು. ಅಥವಾ ಫೌಂಡೇಶನ್ ನಂತೆ ಸ್ಟಾರ್ ವಾರ್ಸ್ ಇತ್ತು ಎಂದರೆ ಸರಿಯಾದೀತು ಯಾಕೆಂದರೆ ಫೌಂಡೇಶನ್ ೧೯೫೧ ರಲ್ಲೇ ಅಂದರೆ ಸ್ಟಾರ್ ವಾರ್ಸ್ ಗೂ ಸುಮಾರು ೨೫ ವರ್ಷಗಳ ಮುಂಚೆಯೇ ಮೊದಲು ಪ್ರಕಟವಾಗಿತ್ತು ಮತ್ತು ಸ್ಟಾರ್ ವಾರ್ಸ್ ನ ಸೃಷ್ಟಿಕರ್ತ ಜಾರ್ಜ್ ಲುಕಾಸ್ ಫೌಂಡೇಶನ್ ಕಥೆ ಯಿಂದ ಯಥೇಚ್ಚವಾಗಿ ಪ್ರೇರಿತನಾಗಿದ್ದ ಎಂದು ಗೂಗಲ್ ನಿಂದ ತಿಳಿದುಕೊಂಡೆ. 

ಅಣು ವಿಜ್ಞಾನ, ತಂತ್ರಜ್ಞಾನದಲ್ಲಿ ಅತ್ಯಂತ ಉನ್ನತಿ ಪಡೆದಿದ್ದ ಗಲ್ಯಾಕ್ಟಿಕ್ ಸಾಮ್ರಾಜ್ಯ,  ಭವಿಷ್ಯದಲ್ಲಿ ಆಂತರಿಕ ಯುದ್ಧದಿಂದ ಸಂಪೂರ್ಣ ನಾಶವಾಗಿ, ಮುಂದುವರಿದ ತಂತ್ರಜ್ಞಾನ ಕೂಡ ನಶಿಸಿ ಹೋಗುತ್ತದೆಂದು ಹ್ಯಾರಿ ಸೆಲ್ಡನ್ ಎಂಬ ವಿಜ್ಞಾನಿ ತನ್ನ ‘ಸೈಕೋ ಹಿಸ್ಟರಿ’ ವಿದ್ಯೆಯ ಮೂಲಕ ಕಂಡುಕೊಳ್ಳುತ್ತಾನೆ. ಸಾಮ್ರಾಜ್ಯದ ಜ್ಞಾನವನ್ನು ಕಾಪಾಡಿ ತನ್ನ ಮುಂದಿನ ಪೀಳಿಗೆಯವರಿಗೆ ಸುಲಭವಾಗಿ ದೊರೆಯುವಂತೆ ಮಾಡಿ ಮುಂದೆ ನಾಶವಾಗಲಿರುವ ಸಾಮ್ರಾಜ್ಯವನ್ನು , ನಾಶವಾದ ಕೇವಲ ಒಂದು ಸಾವಿರ ವರ್ಷದಲ್ಲಿ ಯಥಾ ಸ್ಥಿತಿ ಗೆ ಮರಳುವಂತೆ ಮಾಡಲು ಈತ  ಒಂದು ದೊಡ್ಡ ವಿಶ್ವಕೋಶ ರಚಿಸುವ ಕಾರ್ಯದಲ್ಲಿ ತೊಡಗಿರುತ್ತಾನೆ. ಈತ ಹೀಗೆ ಮಾಡದಿದ್ದರೆ ಸಾಮ್ರಾಜ್ಯ ಈಗಿನ ಉನ್ನತ ಸ್ಥಿತಿಗೆ ತಲುಪಲು ಕೆಲವು ಮಿಲಿಯನ್ ವರ್ಷಗಳೇ ಬೇಕಾಗಬಹುದು. ಅನೇಕ ಮೇಧಾವಿ ವಿಜ್ಞಾನಿಗಳನ್ನು ಒಂದೆಡೆ ಕೂಡಿಸಿ ಈ ಕಾರ್ಯಕ್ಕೆ ಗಲ್ಯಾಕ್ಟಿಕ್ ಕೇಂದ್ರದಿಂದ ದೂರದ ತುದಿಯಲ್ಲಿರುವ ಟರ್ಮಿನಸ್ ಎಂಬ ಗ್ರಹದಲ್ಲಿ ಫೌಂಡೇಶನ್ ಎಂಬ ಸಂಸ್ಥೆ ಕಟ್ಟುತ್ತಾನೆ. 

ಹ್ಯಾರಿ ಸೆಲ್ಡನ್, ಸಲ್ವೊರ್ ಹಾರ್ಡಿನ್ ಮತ್ತು ಹೋಬರ್ ಮ್ಯಾಲ್ಲೋ ಎಂಬ ಮೂರು ವಿವಿಧ ಕಾಲಘಟ್ಟದ ಧುರೀಣರ ಮೂಲಕ ಕತೆ ಅನಾವರಣಗೊಳ್ಳುತ್ತದೆ. ಭವಿಷ್ಯದ ವರ್ಷಗಳಲ್ಲಿ  ಫೌಂಡೇಷನ್, ಸಾಮ್ರಾಜ್ಯದ ಪರಿಧಿಯಲ್ಲಿರುವ ಇತರ ಅಧಿಪತ್ಯಗಳ ಆಕ್ರಮಣದಿಂದ ನಿರ್ನಾಮವಾಗುವಂತಹ ಪರಿಸ್ಥಿತಿ ಎದುರಾದಾಗ ಹೇಗೆ ಅದನ್ನು ರಕ್ಷಣೆ ಮಾಡಿಕೊಳ್ಳಬೇಕೆಂದು ಹ್ಯಾರಿ ಸೆಲ್ಡನ್ ‘ಸೈಕೋ ಹಿಸ್ಟರಿ’ ಭವಿಷ್ಯದಿಂದ ತಿಳಿದು,  ಅಂತಹ ಬಿಕ್ಕಟ್ಟು ಎದುರಾದಾಗ ಆಯಾ ಸಂಧರ್ಭದಲ್ಲೇ ಅದರ ಪರಿಹಾರದ ದಾರಿ ಕಾಣುವಂತೆ ವ್ಯವಸ್ಥೆ ರೂಪಿಸಿ ಹೋಗಿರುತ್ತಾನೆ. 

“Violence is the last refuge of the incompetent”

Salvor Hardin

ಟರ್ಮಿನಸ್ ಗೆ ಮೊದ ಮೊದಲು ಆಗಮಿಸಿದ ವಿಜ್ಞಾನಿಗಳಲ್ಲೇ ಕೆಲವರು ಆಡಳಿತಗಾರರು ಮತ್ತು ಮೇಯರ್ ಆಗಿದ್ದರು. ಇವರುಗಳು ವಿಜ್ಞಾನ ಮತ್ತು ವಿಶ್ವ ಕೋಶ ರಚನೆಗೆ ಅತ್ಯಂತ ಬದ್ಧರಾಗಿದ್ದರು. ಗಲ್ಯಾಕ್ಟಿಕ್ ಪರಿಧಿಯಲ್ಲಿರುವ  ನಾಲ್ಕು ಅಧಿಪತ್ಯ ದಲ್ಲಿ ಒಂದಾಗಿದ್ದ  ಅನಾಕ್ರಿಯಾನ್ ನಿಂದ ಟರ್ಮಿನಸ್ ಗೆ ಆಪತ್ತು ಎದುರಾಯಿತು. ಅನಾಕ್ರಿಯಾನ್ ನ ಸೈನ್ಯ ಟರ್ಮಿನಸ್ ಅನ್ನು ತನ್ನ ನೆಲೆಯಾಗಿಸಿಕೊಳ್ಳಲು ಹವಣಿಸಿತು. ಈ ಸಂಧರ್ಭದಲ್ಲಿ ಸಲ್ವೊರ್ ಹಾರ್ಡಿನ್,  ಅನಾಕ್ರಿಯಾನ್ ಸೇರಿದಂತೆ ಪರಿಧಿಯಲ್ಲಿರುವ ಯಾವ ಅಧಿಪತ್ಯಗಳೂ ಅಣು ಶಕ್ತಿಯ ತಂತ್ರಜ್ಞಾನ ಹೊಂದಿಲ್ಲವೆಂದು ತಿಳಿದುಕೊಳ್ಳುತ್ತಾನೆ ಮತ್ತು ಫೌಂಡೇಶನ್ ಹೊಂದಿದ್ದ ಅಣು ಶಕ್ತಿಯ ಬಲದಿಂದಲೇ ಪರಿಧಿಯಲ್ಲಿರುವ ಅಧಿಪತ್ಯಗಳನ್ನು ನಿಯಂತ್ರಣದಲ್ಲಿರಿಸಬಹುದೆಂದು ಮೇಯರ್ ಮತ್ತು ಆಡಳಿತಾಧಿಕಾರಿಗಳಿಗೆ ತಿಳಿಸುತ್ತಾನೆ. ಮೊದಲು ಒಪ್ಪದಿದ್ದರೂ, ಈ ಬಿಕ್ಕಟ್ಟಿನ ಸಮಯದಲ್ಲಿ ಹ್ಯಾರಿ ಸೆಲ್ಡನ್ ಪರಿಹಾರ ಮಾರ್ಗವೂ ಇದೇ ಆಗಿದೆ ಎಂದು ಪ್ರಕಟವಾದಾಗ ಒಪ್ಪಿದರು. ಸಲ್ವೊರ್ ಹಾರ್ಡಿನ್ ಅವರನ್ನು ಜೈಲಿಗಟ್ಟಿ ತಾನೇ ಮೇಯರ್ ಆದನು. ನಂತರ ಅಣು ಶಕ್ತಿಯ ತಂತ್ರಜ್ಞಾನವನ್ನು ಒಂದು ಮಾಯೆಯಂತೆ ಉಪಯೋಗಿಸಿ ಅದನ್ನು ಒಂದು  ಧಾರ್ಮಿಕ ಮತವನ್ನಾಗಿ ಬಿಂಬಿಸಿ, ಟರ್ಮಿನಸ್ ಅನ್ನು ಧಾರ್ಮಿಕ ಕೇಂದ್ರವಾಗಿ ಪರಿವರ್ತಿಸಿದನು. ಈ ಧರ್ಮವನ್ನು ಪರಿಧಿಯೆಲ್ಲೆಡೆ ಪಸರಿಸಿ ಎಲ್ಲ ಅಧಿಪತ್ಯಗಳನ್ನೂ ತನ್ನ ನಿಯಂತ್ರಣದಲ್ಲಿರಿಸಿಕೊಂಡನು. 

ನಂತರ ಕೆಲವು ವರ್ಷಗಳ ಮೇಲೆ ಹೋಬರ್ ಮ್ಯಾಲ್ಲೋ ಎಂಬ ವ್ಯಾಪಾರಿ ಹೇಗೆ ಟರ್ಮಿನಸ್ಸ್ ನ ಮೇಯರ್ ಆದನು ಎಂಬ ಕಥೆ. ಈ ಸಮಯದಲ್ಲಿ ಧಾರ್ಮಿಕ ಶಕ್ತಿಯ ಮೂಲಕ ನಿಯಂತ್ರಣ ಕಾಯ್ದುಕೊಳ್ಳಲು ಕಷ್ಟವಾಗತೊಡಗಿತು. ಕೋರೆಲ್ ನಂತಹ ಕೆಲವು ಅಧಿಪತ್ಯಗಳು ಫೌಂಡೇಶನ್ ನ ಧರ್ಮ ಗುರುಗಳಿಗೆ ಪ್ರವೇಶ ನೀಡದೆ ತಮ್ಮದೇ ಯಾವುದೇ ಧರ್ಮವಿಲ್ಲದ ಪ್ರಪಂಚ ಸೃಷ್ಟಿಸಿಕೊಳ್ಳುತ್ತಿದ್ದವು. ಇಂತಹ ಅಧಿಪತ್ಯಗಳಿಗೆ ಇನ್ನೂ ಅಲ್ಪ ಸಲ್ಪ ಜೀವಂತವಾಗಿದ್ದ ಸಾಮ್ರಾಜ್ಯದಿಂದ ಅಣು ಶಕ್ತಿಯ ಅಂತರಿಕ್ಷ ಯುದ್ಧ ನೌಕೆಗಳನ್ನೂ ಒದಗಿಸಿ ಕೊಡುತ್ತಿತ್ತು . ಈ ವಿಷಯಗಳನ್ನೆಲ್ಲ ತಿಳಿದುಕೊಳ್ಳಲು ಹೋಬಾರ್ ಮ್ಯಾಲ್ಲೋ ಕೋರೆಲ್ ಗೆ ತೆರಳುತ್ತಾನೆ.

ಅಲ್ಲಿ ತನ್ನ ಚಾಣಾಕ್ಷತೆಯಿಂದ ಫೌಂಡೇಶನ್ ತಂತ್ರಜ್ಞಾನದ ಕಿರಿದಾದ ಅಣು ಶಕ್ತಿ ಚಾಲಿತ ಯಂತ್ರಗಳ ನೆರವಿನಿಂದ  ಕೋರೆಲ್ ನ ಕಾರ್ಖಾನೆಗಳ ಉತ್ಪಾದಕತೆ ಹೆಚ್ಚಿಸಿ ಲಾಭ ಪಡೆಯಬಹುದೆಂದು ತೋರಿಸಿಕೊಡುತ್ತಾನೆ ಮತ್ತು ಕೆಲವೇ ವರ್ಷಗಳಲ್ಲಿ ಕೋರೆಲ್ ನ್ ಜನರು ಸಂಪೂರ್ಣವಾಗಿ ಫೌಂಡೇಶನ್ ನ ಅಣು ಶಕ್ತಿ ಚಾಲಿತ ಪುಟ್ಟ ಯಂತ್ರಗಳ ಮೇಲೆ ಅವಲಂಬಿಸುವಂತೆ ಮಾಡುತ್ತಾನೆ. ನಂತರ ಕೋರೆಲ್, ಫೌಂಡೇಶನ್ ಮೇಲೆ ಯುದ್ಧ ಸಾರಿದಾಗ ಯಾವುದೇ ಪ್ರತಿರೋಧ ತೋರದೆ ಕೇವಲ ಅಣು ಶಕ್ತಿ ಯಂತ್ರಗಳ ಪೂರೈಕೆಯನ್ನು ನಿಲ್ಲಿಸಿಬಿಡುತ್ತಾನೆ. ಇದರಿಂದ ಮೂರು ವರ್ಷಗಳಲ್ಲಿ  ಕೋರೆಲ್ ತಾನಾಗಿಯೇ ಯುದ್ಧ ವಿರಾಮ ಘೋಷಿಸಿ  ಆತನ ದಾರಿಗೆ ಬರುತ್ತದೆ. ವಾಣಿಜ್ಯ ವ್ಯಾಪಾರವೇ ಬಲದ ಮೂಲವೆಂದು ತಿಳಿಸಿಕೊಡುತ್ತಾನೆ. ಇಲ್ಲಿಗೆ ಕಾದಂಬರಿ ಕೊನೆಯಾಗುತ್ತದೆ. 

ಇದು ಕಾದಂಬರಿಯ ಸಂಕ್ಷಿಪ್ತ ಸಾರಾಂಶ. 

೧೭-೧೮ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಹೇಗೆ ವಾಣಿಜ್ಯ ವ್ಯಾಪಾರ ಕೇಂದ್ರಿತ ಬಂಡವಾಳಶಾಹಿಯು ಆವರೆಗೂ ಧರ್ಮದ ಕಪಿ ಮುಷ್ಟಿಯಲ್ಲಿ ಬಿಗಿಯಾಗಿದ್ದ ಜನತೆಯನ್ನು ವಶಪಡಿಸಿಕೊಂಡಿತು  ಎಂದು ಐಸಾಕ್ ಅಸಿಮೋವ್ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಿಜ್ಞಾನ, ಕೈಗಾರಿಕಾ ಕ್ರಾಂತಿಯ ವರೆಗೂ ಚರ್ಚ್ ಗಳೇ ಶಕ್ತಿಯ ಕೇಂದ್ರವಾಗಿದ್ದವು. ಚರ್ಚ್ ನ ವಿರುದ್ಧವಾಗಿದ್ದ ವೈಜ್ಞಾನಿಕ ಸತ್ಯಗಳನ್ನು ಹೇಳಿದ್ದಕ್ಕೆ ಗೇಲಿಲಿಯೋ ಶಿಕ್ಷೆ ಅನುಭವಿಸಲಿಲ್ಲವೇ? ಅಸಿಮೋವ್ ಮಾನವ ನಾಗರಿಕತೆ ಮುಂದುವರಿದಂತೆ ಆದ ಈ ಪಲ್ಲಟವನ್ನು ಚೆನ್ನಾಗಿಯೇ ಗುರುತಿಸಿದ್ದಾರೆ.  

ಧರ್ಮದ ಭದ್ರವಾದ ನೆಲೆಯಿಂದ ಜಗತ್ತನ್ನು ವಾಣಿಜ್ಯ ವ್ಯಾಪಾರ ವಶಪಡಿಸಿಕೊಂಡಿತೆಂದು ಅಸಿಮೋವ್ ನೇರವಾಗಿ ಕಥೆಯ ಮೂಲಕ ತಿಳಿಸಿದ್ದರೂ ಈಗ ಹಿಂದಿರುಗಿ ಯೋಚಿಸುವಾಗ ಇದು ಹೌದಾ ಎಂಬ ಅನುಮಾನ ಹುಟ್ಟುತ್ತದೆ. ಇದನ್ನು ಒಂದು ಕೇವಲ ಕತೆಯಾಗಿ ನೋಡಿದರೆ ಯಾವುದೇ ಸಮಸ್ಯೆಯಿಲ್ಲ ಆದರೆ ಈ ವಿಚಾರವನ್ನು ಐತಿಹಾಸಿಕವಾಗಿ ಮಾನವ ನಾಗರೀಕತೆ ವಿಕಸನವಾದ ಬಗೆಗೆ ಅನ್ವಯಿಸಿ ನೋಡಿದಾಗ ಧರ್ಮದ ಬಿಗಿ ಹಿಡಿತದಿಂದ ನಾಗರೀಕತೆಯನ್ನು ವಾಣಿಜ್ಯ ಬಿಡಿಸಿತೋ ಅಥವಾ ವಿಜ್ಞಾನ ತಂತ್ರಜ್ಞಾನ ಬಿಡಿಸಿತೋ ಎಂಬ ಅನುಮಾನ ಸಹಜವಾಗಿಯೇ ಬರುವುದು. ನನ್ನ ಪ್ರಕಾರ ವೈಜ್ಞಾನಿಕ ಕ್ರಾಂತಿಯಿಂದಲೇ, ತಂತ್ರಜ್ಞಾನದ ಮುಂದುವರಿಕೆಯಿಂದಲೇ ಧರ್ಮದ ಹಿಡಿತ ಸಡಿಲವಾದ್ದದ್ದು. ಹೋಬಾರ್ ಮ್ಯಾಲ್ಲೋ ನ ಹತ್ತಿರ ಅಣು ಶಕ್ತಿಯ ಪ್ರಬಲವಾದ ಯಂತ್ರಗಳು ಇಲ್ಲದೇ ಇರುತ್ತಿದ್ದರೆ ಆತ ಯಾವ ರೀತಿಯ ವ್ಯಾಪಾರ ಮಾಡಲು ಸಾಧ್ಯವಿತ್ತು? ವ್ಯಾಪಾರದಲ್ಲಿ ಆತನಿಗೆ ಮೇಲುಗೈ ಸಾಧಿಸಲು ಮುಂದುವರಿದ ತಂತ್ರಜ್ಞಾನವೇ ಮೂಲ ಕಾರಣ ತಾನೇ? 

ಇನ್ನೊಂದು ಕಡೆ ಪದ್ಧತಿ ಮತ್ತು ಕಾನೂನು ಇವೆರಡನ್ನು ಮುಖಾಮುಖಿಯಾಗಿಸಿ ಬರೆದ ಸಂಭಾಷಣೆ ಆಲೋಚಿಸುವಂತೆ ಮಾಡುತ್ತದೆ. ಹೀಗಿದೆ:

“It is the general custom of all traders to advance the religion with their trade”

“I adhere to law and not to custom”

“There are times when custom can be the higher law”

ಹೀಗೆ ಭವಿಷ್ಯದ ಒಂದು ವೈಜ್ಞಾನಿಕವಾಗಿ ಮುಂದುವರಿದ ಕಾಲ್ಪನಿಕ ಲೋಕದ ತಳಹದಿಯ ಮೇಲೆ, ವಿಜ್ಞಾನ, ತಂತ್ರಜ್ಞಾನವನ್ನು ಬಳಸಿಕೊಂಡು ಮಾನವನ ಬದುಕಿನ, ಆತನ ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹವಣಿಸುವ ರೋಚಕವಾದ ಒಂದು ಯಾನ ಐಸಾಕ್ ಅಸಿಮೋವ್ ನ ಫೌಂಡೇಷನ್ ಕಾದಂಬರಿ.    

ಇದು ಐಸಾಕ್ ಅಸಿಮೋವ್ ನ ಫೌಂಡೇಶನ್ ಸರಣಿಯಲ್ಲಿ ಬಂದ ಮೊತ್ತ ಮೊದಲ ಕಾದಂಬರಿ. ಇನ್ನೂ ಎರಡು ಸೀಕ್ವೆಲ್ ಮತ್ತು ಎರಡು ಪ್ರಿಕ್ವೆಲ್ಗಳೂ ಇವೆ.  

ಇಷ್ಟವಾದರೆ ಶೇರ್ ಮಾಡಿ

10ಮುಖಗಳು, ನಿಮ್ಮ ಇಮೇಲ್ ನಲ್ಲಿ !

10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ

ಫಾಲೋ ಮಾಡಿ