ಅಮೆಜಾನ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ (ಈಗ ಕಾರ್ಯಾಧ್ಯಕ್ಷ) ಜೆಫ್ ಬೆಝೋಸ್ ತಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅದರಿಂದ ಉತ್ತಮ ಫಲಿತಾಂಶವನ್ನೂ ಪಡೆದಿದ್ದಾರೆ.
ಅವರೇ ಹೇಳಿದಂತೆ ಅವರು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುವ ಕೆಲವು ಆಲೋಚನಾ ಕ್ರಮ, ಚೌಕಟ್ಟುಗಳನ್ನು ರೂಪಿಸಿಕೊಂಡಿದ್ದಾರೆ. ಅವುಗಳಲ್ಲಿ ಎರಡು ಮುಖ್ಯವಾದ ಚೌಕಟ್ಟುಗಳನ್ನು ನೋಡೋಣ.
ಟೈಪ್ ೧ ಮತ್ತು ಟೈಪ್ ೨ ನಿರ್ಧಾರಗಳು:
ಬೆಝೋಸ್ ಅವರು ಪ್ರತಿ ವರ್ಷ ಅಮೆಜಾನ್ ಪಾಲುದಾರರಿಗೆ ಬರೆಯುವ, “ಬೆಝೋಸ್ ಲೆಟರ್ಸ್ “ ಎಂದೇ ಪ್ರಖ್ಯಾತವಾಗಿರುವ ಪತ್ರದಲ್ಲಿ ಈ ನಿರ್ಧಾರ ಪ್ರಕ್ರಿಯೆಯ ಬಗ್ಗೆ ತಮ್ಮ ಚಿಂತನೆಯನ್ನು ದಾಖಲಿಸಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳನ್ನು ಕೇಂದ್ರವಾಗಿಸಿ ಹೇಳಿರುವುದಾದರೂ, ನಮ್ಮ ವೈಯುಕ್ತಿಕ ಜೀವನದ ನಿರ್ಧಾರಗಳಿಗೂ ಅಷ್ಟೇ ಸೂಕ್ತ ರೀತಿಯಲ್ಲಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ.
“ದೊಡ್ಡ ಸಂಸ್ಥೆಗಳಿಗೆ ಒಂದು ಸಾಮಾನ್ಯ ಅಪಾಯವೆಂದರೆ – ವೇಗ ಮತ್ತು ಸೃಜನಶೀಲತೆಗೆ ನೋವುಂಟುಮಾಡುವ – “ಒಂದು-ಗಾತ್ರ ಎಲ್ಲರಿಗೂ ಸರಿಹೊಂದುವುದು” (One-size-fits-all)- ಎಂಬಂತೆ ನಿರ್ಧಾರ ತೆಗೆದುಕೊಳ್ಳುವುದು.
ಕೆಲವು ನಿರ್ಧಾರಗಳು ಹೆಚ್ಚಿನ ಪರಿಣಾಮ ಹೊಂದಿರುತ್ತವೆ ಮತ್ತು ಬದಲಾಯಿಸಲಾಗದ ಅಥವಾ ಬಹುತೇಕ ಬದಲಾಯಿಸಲಾಗದ – ಏಕಮುಖ ಬಾಗಿಲುಗಳಾಗಿರುತ್ತದೆ (One-way door). ಈ ನಿರ್ಧಾರಗಳನ್ನು ಕ್ರಮಬದ್ಧವಾಗಿ, ಎಚ್ಚರಿಕೆಯಿಂದ, ನಿಧಾನವಾಗಿ, ಹೆಚ್ಚಿನ ಚರ್ಚೆ ಮತ್ತು ಸಮಾಲೋಚನೆಯೊಂದಿಗೆ ತೆಗೆದುಕೊಳ್ಳಬೇಕು. ನೀವು ಈ ಬಾಗಿಲಿನ ಮೂಲಕ ಒಳ ಹೋಗಿ ಅಲ್ಲಿ ನೋಡುವುದನ್ನು ಇಷ್ಟಪಡದಿದ್ದರೆ, ನೀವು ಮೊದಲು ಇದ್ದ ಸ್ಥಳಕ್ಕೆ ಹಿಂತಿರುಗಲು ಸಾಧ್ಯವಿಲ್ಲ. ನಾವು ಇದನ್ನು ಟೈಪ್ 1 ನಿರ್ಧಾರಗಳು ಎಂದು ಕರೆಯಬಹುದು.
ಆದರೆ ಹೆಚ್ಚಿನ ನಿರ್ಧಾರಗಳು ಹಾಗಲ್ಲ – ಅವು ಬದಲಾಗಬಲ್ಲವು, ಹಿಂತಿರುಗಬಲ್ಲವು(Reversible) – ಅವು ಎರಡು-ಮಾರ್ಗದ ಬಾಗಿಲುಗಳಾಗಿವೆ. ನೀವು ಕೆಟ್ಟದಾದ ಟೈಪ್ 2 ನಿರ್ಧಾರವನ್ನು ಮಾಡಿದ್ದರೆ, ದೀರ್ಘಾವಧಿಯವರೆಗೆ ಅದರ ಪರಿಣಾಮಗಳೊಂದಿಗೆ ಬದುಕಬೇಕಾಗಿಲ್ಲ. ಮತ್ತೆ ಬಾಗಿಲು ತೆರೆಯಬಹುದು ಮತ್ತು ಅದರ ಮೂಲಕ ಹಿಂತಿರುಗಬಹುದು. ಟೈಪ್ 2 ನಿರ್ಧಾರಗಳನ್ನು ಉತ್ತಮ ವಿವೇಚನೆ ಇರುವ ವ್ಯಕ್ತಿಗಳು ಅಥವಾ ಸಣ್ಣ ಗುಂಪುಗಳು ತ್ವರಿತವಾಗಿ ಮಾಡಬಹುದು ಮತ್ತು ಮಾಡಬೇಕು.
ಸಂಸ್ಥೆಗಳು ದೊಡ್ಡದಾಗುತ್ತಿದ್ದಂತೆ, ಅನೇಕ ಟೈಪ್ 2 ಎಂದು ಕರೆಯಬಹುದಾದ ನಿರ್ಧಾರಗಳಲ್ಲಿ, ಗಂಭೀರವಾದ ಟೈಪ್ 1 ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬಳಸುವ ಪ್ರವೃತ್ತಿ ಕಂಡುಬರುತ್ತಿದೆ. ಇದರ ಅಂತಿಮ ಫಲಿತಾಂಶವೆಂದರೆ ನಿಧಾನತೆ, ಹೆಚ್ಚು ಯೋಚಿಸದೆ ಹೆದರಿ ರಿಸ್ಕ್ ತೆಗೆದುಕೊಳ್ಳದೇ ಇರುವುದು, ಸಾಕಷ್ಟು ಪ್ರಯೋಗ ನೆಡೆಸದೆ ಇರುವುದು ಮತ್ತು ಇದೆಲ್ಲದರ ಕಾರಣವಾಗಿ ಕಡಿಮೆಯಾದ ನಾವೀನ್ಯತೆ(Innovation).”
-Jeff Bezos
ಅಡ್ಡಲಾಗಿರುವ ಅಕ್ಷದಲ್ಲಿ ನಿರ್ಧಾರ ಮಾಡಿದ ನಂತರ ಅದರ ಪರಿಣಾಮದ ಗಂಭೀರತೆ ಎಷ್ಟು ಹೆಚ್ಚು ಅಥವಾ ಕಡಿಮೆ ಇದೆ ಎಂದು ಮತ್ತು ಲಂಬವಾದ ಅಕ್ಷದಲ್ಲಿ ನಿರ್ಧಾರದಿಂದ ಎಷ್ಟರ ಮಟ್ಟಿಗೆ ಹಿಂದಿರುಗಬಹದು ಎಂದು ಬಿಡಿಸಲಾಗಿದೆ. ಈ ರೀತಿ 2 ಬೈ 2 ಮ್ಯಾಟ್ರಿಕ್ಸ್ ನಲ್ಲಿ ನೋಡಿದಾಗ ನಾಲ್ಕು ತುದಿಯಲ್ಲಿರುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂದು ನೀಡಿದ್ದೇನೆ.
ಎರಡು ರೀತಿಯ ನಿರ್ಧಾರಗಳು:
ಟೈಪ್ ೧: ಒಮ್ಮೆ ನಿರ್ಧರಿಸಿದರೆ ಬದಲಾಯಿಸಲಾಗದ, ಹೆಚ್ಚು ಪರಿಣಾಮ ಹೊಂದಿರುವ – ಏಕಮುಖ ಬಾಗಿಲು. ಮದುವೆ, ಉನ್ನತ ಶಿಕ್ಷಣ, ಉದ್ಯೋಗಿಯಾ – ಉದ್ಯಮಿಯಾ? ಮುಂತಾದ ಜೀವನದ ದಿಕ್ಕನ್ನೇ ಬದಲಿಸಬಲ್ಲ ನಿರ್ಧಾರಗಳು.
ಟೈಪ್ ೨: ಬದಲಾಯಿಸಬಲ್ಲ, ನಿರ್ಧಾರದ ಮುಂಚಿನ ಸ್ಥಿತಿಗೆ ಹಿಂದಿರುಗಬಲ್ಲ, ಗಂಭೀರ ಪರಿಣಾಮ ಇಲ್ಲದ – ದ್ವಿಮುಖ ಬಾಗಿಲು. ಸಾಮಾನ್ಯವಾಗಿ ದೈನಂದಿನ ಜೀವನದಲ್ಲಿ ಎದುರಾಗವು ನಿರ್ಧಾರಗಳು.
ಯಾವುದೇ ನಿರ್ಧಾರಕ್ಕೂ ಮುನ್ನ ಒಮ್ಮೆ ಈ ರೀತಿ ಯೋಚಿಸಿ, ಈ ವಿಧಾನವನ್ನು ಬಳಸಿ ಮುನ್ನೆಡದರೆ ಕಡಿಮೆ ಸಮಯದಲ್ಲಿ ಅನುಕೂಲಕರ ಫಲಿತಾಂಶ ಸಿಗುವ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಕನಿಷ್ಠ ವಿಷಾದ ನಿರ್ಧಾರ ಚೌಕಟ್ಟು
1990ಲ್ಲಿ ಒಳ್ಳೆಯ ಸಂಬಳ ಬರುವ ಉದ್ಯೋಗದಲ್ಲಿದ್ದ ಜೆಫ್ ಬೆಝೋಸ್, ಉದ್ಯೋಗ ಬಿಟ್ಟು ತಮ್ಮ ಸ್ವಂತ ಕಲ್ಪನೆಯಾದ ಆನ್ಲೈನ್ ಪುಸ್ತಕ ಮಾರಾಟದ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕಾ, ಅಥವಾ ಉದ್ಯೋಗಿಯಾಗಿಯೇ ಮುಂದುವರೆಯಬೇಕಾ ಎಂಬ ದ್ವಂದ್ವದಲ್ಲಿ ಸಿಲುಕಿದರು.
ಆಗ ಅವರು ತಮ್ಮನ್ನು ಕೇಳಿಕೊಂಡ ಪ್ರಶ್ನೆ
“ನನ್ನ ಜೀವನದ ಕೊನೆಯಲ್ಲಿ , ಇದನ್ನು ನಾನು ಮಾಡಲಿಲ್ಲ ಎಂದು ವಿಷಾದವಾಗಬಹುದೇ?”
ಈ ಸ್ವಯಂ ಪ್ರಶ್ನೆಯನ್ನು “ಕನಿಷ್ಠ ವಿಷಾದದ ನಿರ್ಧಾರ ಚೌಕಟ್ಟು (Regret Minimization framework)” ಎಂದು ಬೆಝೋಸ್ ಕರೆಯುತ್ತಾರೆ. ಇದರಲ್ಲಿ ನಿಮಗೆ ಈಗ ಎಂಬತ್ತು ವರ್ಷ ವಯಸ್ಸಾಗಿದೆ ಎಂದು ಕಲ್ಪಿಸಿಕೊಳ್ಳಿ. ಆ ಭವಿಷ್ಯದ ವರ್ಷದಲ್ಲಿ ನಿಂತು ನಿಮ್ಮ ಕಳೆದ ಜೀವನವನ್ನೊಮ್ಮೆ ಹಿಂದುರುಗಿ ನೋಡಿ. ಆಗ ನಾನು ಇದನ್ನು ಅಥವಾ ಅದನ್ನು ಮಾಡಲಿಲ್ಲ ಎಂಬ ವಿಷಾದಗಳು ಕಡಿಮೆಯಿರಬೇಕು. ಹೀಗೆ ಈ ದೃಷ್ಟಿಕೋನದಲ್ಲಿ ನೋಡಿದಾಗ ಇಂದು ನಾವು ಏನು ಮಾಡಿದರೆ ಮುಂದೆ ಮರುಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಹೀಗೆ ನೋಡಿ ಬೆಝೋಸ್ ಅವರು ಕಂಡುಕೊಂಡ ಉತ್ತರ ಅವರಿಗೆ ಸ್ಪಷ್ಟವಾಗಿತ್ತು. ಅವರೇ ಹೇಳುವಂತೆ “ಇಂದು ನಾನು ನನ್ನ ಕಲ್ಪನೆಯನ್ನು (ಐಡಿಯಾ) ಕಾರ್ಯಗತಗೊಳಿಸಲು ಪ್ರಯತ್ನಿಸದಿದ್ದರೆ ಮುಂದೊಂದು ದಿನ ಖಂಡಿತ ಈ ಬಗ್ಗೆ ವಿಷಾದಿಸುತ್ತೇನೆ. ಇದರಲ್ಲಿ ವಿಫಲವಾದರೂ ಚಿಂತೆಯಿಲ್ಲ ಆದರೆ ಪ್ರಯತ್ನವೇ ಮಾಡದಿದ್ದರೆ ಮುಂದೆ ನನ್ನ ಜೀವನದ ಪ್ರತಿ ದಿನವೂ ವಿಷಾದಿಸುವುದು ಖಚಿತ ಎಂದು ನನಗೆ ಅನಿಸಿತು. ಈ ರೀತಿ ಯೋಚಿಸಿದಾಗ ಈ ನಿರ್ಧಾರ ಬಹಳ ಸುಲಭವಾಗಿ ಕಾಣುತ್ತದೆ.“
ಅವರು ಉದ್ಯೋಗ ಬಿಟ್ಟು ಆನ್ಲೈನ್ ಪುಸ್ತಕ ಮಳಿಗೆಯಾಗಿ ಅಮೆಜಾನ್ ಸಂಸ್ಥೆ ಸ್ಥಾಪಿಸಿದರು. ಇಂದು ಅಮೆಜಾನ್ ವಿಶ್ವದ ಅತ್ಯಂತ ಯಶಸ್ವೀ ಕಂಪೆನಿಗಳಲ್ಲಿ ಒಂದಾಗಿದೆ ಮತ್ತು ಬೆಝೋಸ್ ಅವರು ಜಗತ್ತಿನ ಟಾಪ್ ೫ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.
ಬೆಝೋಸ್ ಅವರ ನಿರ್ಧಾರ ಚೌಕಟ್ಟುಗಳನ್ನು ನಮ್ಮ ಜೀವನದಲ್ಲೂ ಅಳಡಿಸಿಕೊಂಡು ತ್ವರಿತವಾಗಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬಹುದು.