ಕೆ. ಎಫ್. ಸಿ ಎಂದೊಡನೆ ಮಾಂಸಾಹಾರಿಗಳ ಬಾಯಲ್ಲಿ ನೀರೂರಿಸುವ ರುಚಿಯಾದ ಕರಿದ ಚಿಕನ್ ನೆನಪಾಗಬಹುದು. ವಾರಾಂತ್ಯದಲ್ಲಿ ಕುಟುಂಬದೊಡನೆ ಈ ರೆಸ್ಟೋರೆಂಟ್ ಗೆ ಹೋಗಿ ಕರಿದ ಚಿಕನ್ ಸವಿದು ಸಂಭ್ರಮಿಸುವುದು ಸಾಮಾನ್ಯ. ನಗರ, ಪಟ್ಟಣಗಳಲ್ಲಿ ಕಾಣುವ ಈ ರೆಸ್ಟೋರೆಂಟ್ ಚೈನ್ ಮೊದಲು ಆರಂಭವಾದದ್ದು ಅಮೇರಿಕಾದಲ್ಲಿ.
ಕೆ. ಎಫ್. ಸಿ ಯನ್ನು ಕರ್ನಲ್ ಹಾರ್ಲ್ಯಾಂಡ್ ಸ್ಯಾಂಡರ್ಸ್ ಎಂಬ ಅಮೆರಿಕನ್ ವಾಣಿಜ್ಯೋದ್ಯಮಿ ಸ್ಥಾಪಿಸಿದರು. ಅವರು ಕೆ. ಎಫ್. ಸಿ ಯನ್ನು ಹುಟ್ಟು ಹಾಕಿ ಯಶಸ್ವೀಗೊಳಿಸಿದ ಕತೆ ಬಹಳ ಆಸಕ್ತಿದಾಯಕವಾಗಿದೆ ಮತ್ತು ಆಹಾರ ಉದ್ಯಮದಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳಲು ಇಚ್ಚಿಸುವವರಿಗೆ ಸ್ಪೂರ್ತಿದಾಯಕವಾಗಿಯೂ ಇದೆ.
ಹಾರ್ಲ್ಯಾಂಡ್ ಸ್ಯಾಂಡರ್ಸ್ ಅಮೆರಿಕಾದ ಇಂಡಿಯಾನಾ ರಾಜ್ಯದ ಹೆನ್ರಿವಿಲ್ ಎಂಬಲ್ಲಿ 09/09/1890ರಲ್ಲಿ ಜನಿಸಿದರು. ಅವರು 6 ವರ್ಷ ವಯಸ್ಸಿನವರಾಗಿದ್ದಾಗ, ಅವರ ತಂದೆ ನಿಧನರಾದರು. ಅವರ ಬಾಲ್ಯದ ದಿನಗಳು ಕಠಿಣವಾಗಿದ್ದವು. ಅವರ ಕಿರಿಯ ಸಹೋದರ ಮತ್ತು ಸಹೋದರಿಯನ್ನು ನೋಡಿಕೊಳ್ಳಲು ತಾಯಿಯ ಜೊತೆ ಕೆಲಸದಲ್ಲಿ ಕೈ ಜೋಡಿಸಬೇಕಾಯಿತು ಹಾಗೂ ತಮ್ಮ 7ನೇ ವಯಸ್ಸಿನಲ್ಲಿಯೆ ಅಡುಗೆ ಮಾಡಲೂ ಕಲಿತರು.
ಹಾರ್ಲ್ಯಾಂಡ್ ಸ್ಯಾಂಡರ್ಸ್ 12 ವರ್ಷದವರಾಗಿದ್ದಾಗ ಅವರ ತಾಯಿ ಬೇರೊಂದು ಮದುವೆಯಾದರು ಆದರೆ ಇವರ ಮಲತಂದೆಯು ಸ್ಯಾಂಡರ್ಸ್ ಹಾಗೂ ಅವರ ಸಹೋದರರನ್ನು ಇಷ್ಟಪಡದ ಕಾರಣ, ಸ್ಯಾಂಡರ್ಸ್ ಅವರ ಸಹೋದರನನ್ನು ಚಿಕ್ಕಮ್ಮನೊಂದಿಗೆ ವಾಸಿಸಲೂ ಮತ್ತು ಸ್ಯಾಂಡರ್ಸ್ರನ್ನು ಸುಮಾರು 80 ಮೈಲುಗಳಷ್ಟು ದೂರದಲ್ಲಿರುವ ಜಮೀನಿನಲ್ಲಿ ಕೆಲಸಕ್ಕೆ ಕಳುಹಿಸಲಾಯಿತು.
ಸ್ಯಾಂಡರ್ಸ್ ಅವರು ಶಾಲೆಗೆ ಹೋಗುವುದಕ್ಕಿಂತ ದಿನವಿಡೀ ಕೆಲಸ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದರು ಹೀಗಾಗಿ ಇವರ ವಿದ್ಯಾಭ್ಯಾಸವನ್ನು 7ನೇ ತರಗತಿಗೆ ಕೊನೆಗೊಳಿಸಬೇಕಾಯಿತು. ನಂತರ ಇವರು ಜೀವನೋಪಾಯಕ್ಕಾಗಿ ಜಮೀನಿನ ಕೆಲಸ,
ರೈಲುಗಳ ಸ್ಟೀಮ್ ಇಂಜಿನ್ಗಳನ್ನು ಸ್ಟೋಕಿಂಗ್ ಮಾಡುವುದು, ವಿಮೆ ಮಾರಾಟ, ಟೈರ್ ಗಳನ್ನು ಮಾರಾಟ ಮಾಡುವುದು, ಇಂತಹ ಕೆಲಸಗಳನ್ನು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಮಾಡಬೇಕಾಗಿ ಬಂತು. 1906ರಲ್ಲಿ, ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿ ಅಮೆರಿಕಾದ ಆರ್ಮಿ ಸೇರಿಕೊಂಡು ಸುಮಾರು ಮೂರು ವರ್ಷ ಸೇವೆ ಸಲ್ಲಿಸಿದರು.
ನಂತರ ಇಂಡಿಯಾನಾದ ನೆರೆ ರಾಜ್ಯವಾದ ಕೆಂಟುಕಿಯಲ್ಲಿ ಶೆಲ್ ಗ್ಯಾಸ್ ಬಂಕ್ನಲ್ಲಿಯೂ ಕೆಲಸ ನಿರ್ವಹಿಸಿದರು.
1930ರಲ್ಲಿ, ತಮ್ಮ 40ನೇ ವಯಸ್ಸಿನಲ್ಲಿ ಕೊನೆಗೂ ಕೆಂಟುಕಿಯ ಕಾರ್ಬಿನ್ ಎಂಬಲ್ಲಿ ತನ್ನದೇ ಆದ ರೆಸ್ಟೋರೆಂಟ್ ಪ್ರಾರಂಭಿಸಿದರು. ಪ್ರಯಾಣಿಕರಿಗೆ ಉತ್ತಮ ರೀತಿಯ ಖಾದ್ಯವನ್ನು ನೀಡುವ ಚಿಕ್ಕ ಸೇವಾ ಕೇಂದ್ರವಾಗಿ ಪ್ರಾರಂಭಗೊಂಡು ರುಚಿಯಾದ ಆಹಾರಕ್ಕಾಗಿ ಹೆಸರುವಾಸಿಯಾಯಿತು ಮತ್ತು ಸ್ಯಾಂಡರ್ಸ್ ಅಂತಿಮವಾಗಿ ಸೇವಾ ಕೇಂದ್ರದ ಗ್ಯಾಸ್ ಪಂಪ್ ಅನ್ನು ತೊಡೆದುಹಾಕಿ ಸ್ಥಳವನ್ನು ಪೂರ್ಣ ಪ್ರಮಾಣದ ರೆಸ್ಟೋರೆಂಟ್ ಆಗಿ ಪರಿವರ್ತಿಸಿದರು. ರೆಸ್ಟೋರೆಂಟ್ ಅನ್ನು ಸ್ಯಾಂಡರ್ಸ್ ಕೋರ್ಟ್ & ಕೆಫೆ ಎಂದು ಕರೆದರು.
ಸ್ಯಾಂಡರ್ಸ್ ರೆಸ್ಟೋರೆಂಟ್, ಅವರು ರಹಸ್ಯ ಗಿಡ ಮೂಲಿಕೆ ಮತ್ತು ಮಸಾಲೆಗಳ ಮಿಶ್ರಣವನ್ನು ಬಳಸಿ ಕರಿದು ತಯಾರಿಸುತ್ತಿದ್ದ ಚಿಕನ್ ಗೆ ಬಹಳ ಪ್ರಸಿದ್ಧವಾಯಿತು. ಚಿಕನ್ ಬೇಯಿಸಲು ಸ್ಯಾಂಡರ್ಸ್ ಮೊತ್ತ ಮೊದಲ ಬಾರಿಗೆ ಪ್ರೆಷರ್ ಕುಕ್ಕರ್ ಬಳಸಿದರು. ಹೀಗೆ ಪ್ರೆಷರ್ ಕುಕ್ಕರ್ ಬಳಸುವುದರಿಂದ ಚಿಕನ್ ನ ಹೊರಭಾಗ ಗರಿಗರಿಯಾಗಿಯೂ, ಒಳಭಾಗ ರಸಭರಿತವಾಗಿಯೂ ಸಿದ್ಧವಾಗುತ್ತದೆ. ಅವರ ಚಿಕನ್ ಎಷ್ಟು ಪ್ರಸಿದ್ಧವಾಯಿತೆಂದರೆ, ಬೇರೆ ರೆಸ್ಟೋರೆಂಟ್ ಗಳಿಂದಲೂ ಬೇಡಿಕೆ ಬರಲಾರಂಭವಾಯಿತು. ಹೀಗೆ ತಮ್ಮ ಅನನ್ಯ ಪಾಕವಿಧಾನ(Recipe)ದಿಂದ ತಯಾರಿಸಿದ ಚಿಕನ್ ಮಾರಾಟ ಮಾಡಿಯೇ ಲಾಭಗಳಿಸಿಸಿಕೊಂಡರು.
ಸ್ಯಾಂಡರ್ಸ್ ರೆಸ್ಟೋರೆಂಟ್ ಮುಂದಿನ ದಶಕದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತು.1950 ರಲ್ಲಿ ಕೆಂಟುಕಿಯ ಗವರ್ನರ್ ಅವರನ್ನು ಕರ್ನಲ್ ಎಂದು ಕರೆದರು. ಸ್ಯಾಂಡರ್ಸ್ ಕೆಂಟುಕಿಯ ಪ್ರಸಿದ್ಧ ವ್ಯಕ್ತಿಯಾದರು, ಬಿಳಿ ಸೂಟ್ ಮತ್ತು ಕೆಂಟುಕಿ ಕರ್ನಲ್ ಟೈ ಅನ್ನು ಧರಿಸಲು ಪ್ರಾರಂಭಿಸಿದರು. ಇದು ಅವರನ್ನು ಪಾಪ್-ಸಂಸ್ಕೃತಿಯ ಐಕಾನ್ ಆಗುವಂತೆ ಮಾಡಿತು.
1952 ರಲ್ಲಿ, ತಮ್ಮ ರೆಸ್ಟೋರೆಂಟ್ ಮತ್ತು ಕರಿದ ಚಿಕನ್ ನ ರಹಸ್ಯ ಪಾಕ ವಿಧಾನವನ್ನು ಫ್ರಾಂಚೈಸಿಗಳಿಗೆ ನೀಡಲು ನಿರ್ಧರಿಸಿದರು. ಅವರು ಸ್ನೇಹಿತ ಪೀಟ್ ಹರ್ಮನ್ ಅವರೊಂದಿಗೆ ತಮ್ಮ ಚಿಕನ್ ಖಾದ್ಯವನ್ನು “ಕೆಂಟುಕಿ ಫ್ರೈಡ್ ಚಿಕನ್” ಎಂದು ಮಾರಾಟ ಮಾಡಲು 4-ಸೆಂಟ್ ರಾಯಧನಕ್ಕೆ ಒಪ್ಪಂದ ಮಾಡಿಕೊಂಡರು. ನಂತರ, ಸ್ಯಾಂಡರ್ಸ್ ಹಲವಾರು ಇತರ ಸ್ಥಳೀಯ ರೆಸ್ಟೋರೆಂಟ್ಗಳೊಂದಿಗೆ ಅದೇ ಒಪ್ಪಂದವನ್ನು ಮಾಡಿದರು. ಈ ರೆಸ್ಟೋರಂಟ್ ಗಳು ಸ್ಯಾಂಡರ್ಸ್ ಅವರ ರಹಸ್ಯ ಪಾಕವಿಧಾನವನ್ನು ಮತ್ತು ಅವರ ಚಿತ್ರವನ್ನು ರೆಸ್ಟೋರೆಂಟ್ ಮುಂಭಾಗದ ಬೋರ್ಡ್ ನಲ್ಲಿ ಬಳಸಿಕೊಳ್ಳಲು ಅವರಿಗೆ ಸಣ್ಣ ಮೊತ್ತವನ್ನು ರಾಯಧನವಾಗಿ ನೀಡಲು ಒಪ್ಪಿದ್ದವು.
ಆದರೆ ಬೇರೆ ರಾಜ್ಯಗಳು ಸ್ಯಾಂಡರ್ಸ್ ರೆಸ್ಟೋರೆಂಟ್ ಅನ್ನು ಬೈಪಾಸ್ ಮಾಡಿ ಸ್ಯಾಂಡರ್ಸ್ ರೆಸ್ಟೋರೆಂಟ್ ಅನ್ನು “ಡೂಮ್”“. ಎಂದು ಘೋಷಿಸಿದವು
ಇದರಿಂದ ನಷ್ಟ ಅನುಭವಿಸಿದ ಅವರು 1956 ರಲ್ಲಿ ತಾವು ವ್ಯವಹಾರ ನಡೆಸುತ್ತಿದ್ದ ಸ್ಥಳವನ್ನು ಮಾರಾಟ ಮಾಡಿದರು, ಈ ಸಂದರ್ಭದಲ್ಲಿ ಅವರಿಗೆ $105 ಮಾಸಿಕ ಸಾಮಾಜಿಕ ಭದ್ರತೆ ಚೆಕ್ ಬಿಟ್ಟರೆ ಬೇರಾವ ಆದಾಯವೂ ಇರಲಿಲ್ಲ.
ಸ್ಯಾಂಡರ್ಸ್ ತಮ್ಮ ರೆಸ್ಟೋರೆಂಟ್ ಅನ್ನು ಮುಚ್ಚಿದ್ದರಿಂದ, ನಾಲ್ಕು ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಫ್ರ್ಯಾಂಚೈಸಿಂಗ್ ಸೈಡ್ ಪ್ರಾಜೆಕ್ಟ್ ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದರು.
ಸ್ಯಾಂಡರ್ಸ್ ತಮ್ಮ, ಪತ್ನಿಯ ಜೊತೆ ಕಾರಿನಲ್ಲಿ ಒಂದೆರಡು ಪ್ರೆಶರ್ ಕುಕ್ಕರ್ಗಳು, ಹಿಟ್ಟು ಮತ್ತು ಮಸಾಲೆ ಮಿಶ್ರಣದೊಂದಿಗೆ ರೆಸ್ಟೋರಂಟ್ಗಳನ್ನೂ ಪ್ರವೇಶಿಸಿ ಕೋಳಿಯನ್ನು ಬೇಯಿಸಲು ಆಫರ್ ಮಾಡುತಿದ್ದರು ನಂತರ ಮಾಲೀಕರು ಅವರ ರುಚಿಯನ್ನು ಇಷ್ಟಪಟ್ಟರೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದರು. ಹೀಗೆ ಮುಂದುವರಿಯುತ್ತಾ 1963ರ ಹೊತ್ತಿಗೆ, ಅಮರಿಕ ಮತ್ತು ಕೆನಡಾದಾದ್ಯಂತ 600ಕ್ಕೂ ಹೆಚ್ಚು ರೆಸ್ಟೋರೆಂಟ್ಗಳನ್ನು ತೆರೆದರು.
ಫ್ರ್ಯಾಂಚೈಸ್ ಹಕ್ಕುಗಳನ್ನು ಖರೀದಿಸಲು ಬಯಸಿದ ಜ್ಯಾಕ್ ಸಿ. ಮ್ಯಾಸ್ಸೆ ಎಂಬುವವರು ಸ್ಯಾಂಡರ್ಸ್ರನ್ನು ಸಂಪರ್ಕಿಸಿದರು. ಸ್ಯಾಂಡರ್ಸ್ ಗೆ ಈ ಒಪ್ಪಂದವು ಆರಂಭದಲ್ಲಿ ಇಷ್ಟವಿರಲಿಲ್ಲ, ಆದರೆ ವಾರಗಳ ಮನವೊಲಿಕೆಯ ನಂತರ, ಅವರು ಜನವರಿ 1965 ರಲ್ಲಿ ಜ್ಯಾಕ್ ಸಿ. ಮ್ಯಾಸ್ಸೆ ಮತ್ತು ಜಾನ್ ವೈ ಬ್ರೌನ್ ಎಂಬ ಹೂಡಿಕೆದಾರರಿಗೆ $2 ಮಿಲಿಯನ್ ಗೆ ಕೆ ಎಫ್ ಸಿ ಯನ್ನು ಮಾರಾಟ ಮಾಡಲು ಒಪ್ಪಿಕೊಂಡರು.
ಕೆಂಟುಕಿ ಫ್ರೈಡ್ ಚಿಕನ್ ಕಂಪನಿಯು ಸ್ಯಾಂಡರ್ಸ್ ಪಾಕವಿಧಾನವನ್ನು ರಾಜಿ ಮಾಡಿಕೊಳ್ಳದೇ ಪ್ರಪಂಚದಾದ್ಯಂತ ತನ್ನದೇ ಆದ ರೆಸ್ಟೋರೆಂಟ್ಗಳನ್ನು ಸ್ಥಾಪಿಸುವುದು ಮತ್ತು ಸ್ಯಾಂಡರ್ಸ್ ಗೆ ಅಜೀವ ಪರ್ಯಂತ $40,000 ಸಂಬಳ (ನಂತರ $75,000 ಕ್ಕೆ ಏರಿಸಲಾಯಿತು), ಮಂಡಳಿಯಲ್ಲಿ ಸ್ಥಾನ, KFC ಯ ಕೆನಡಾದ ಫ್ರಾಂಚೈಸಿಗಳ ಬಹುಪಾಲು ಮಾಲೀಕತ್ವವನ್ನು ನೀಡುವುದು ಎಂದು ಒಪ್ಪಂದ ಮಾಡಿಕೊಳ್ಳಲಾಯಿತು ಬದಲಿಗೆ ಸ್ಯಾಂಡರ್ಸ್ ಅವರು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳಬೇಕಿತ್ತು.
ಸ್ಯಾಂಡರ್ಸ್ರ ಅನ್ವೇಷಣೆ, ಶ್ರಮ ನಿಜವಾಗಿಯೂ ಶ್ರೀಮಂತರಾಗುವುದರ ಬಗ್ಗೆ ಅಲ್ಲ, ಬದಲಿಗೆ ಅವರ ರೆಸ್ಟೋರೆಂಟ್ ಖಾದ್ಯಗಳನ್ನು ಹೆಸರುವಾಸಿ ಮಾಡುವುದರ ಬಗ್ಗೆ ಇದ್ದ ಅವರ ಕಾಳಜಿಯನ್ನು ತೋರಿಸುತ್ತದೆ.
1971 ರಲ್ಲಿ ಕೆಎಫ್ಸಿಯಲ್ಲಿನ ತನ್ನ ಪಾಲನ್ನು $284 ಮಿಲಿಯನ್ಗೆ ಮಾರಾಟ ಮಾಡಿದ ಬ್ರೌನ್, 1979 ರಲ್ಲಿ ಕೆಂಟುಕಿಯ ಗವರ್ನರ್ ಆದರು. ಮುಂದಿನ ವರ್ಷ 1980 ಸ್ಯಾಂಡರ್ಸ್ ನಿಧನರಾದಾಗ, ಸ್ಯಾಂಡರ್ಸ್ ಒಬ್ಬರು “ನಿಜವಾದ ದಂತಕಥೆ” ಮತ್ತು “ಅಮೆರಿಕನ್ ಕನಸಿನ ಆತ್ಮ” ಎಂದು ಬ್ರೌನ್ ಹೇಳಿದರು.
ಇಂದು 145ದೇಶಗಳಲ್ಲಿ 25,000 ಕ್ಕೂ ಹೆಚ್ಚು ಕೆ. ಎಫ್. ಸಿ ರೆಸ್ಟೋರೆಂಟ್ ಗಳು ಇವೆ. ಸ್ಯಾಂಡರ್ಸ್ ಅವರು ಇತರರಿಗೆ “ಶ್ರೀಮಂತರಾಗಲು” ಪ್ರೇರಣೆ ಆಗಿರಬಹುದು ಆದರೆ ತಮ್ಮ ನೆಚ್ಚಿನ “ಫ್ರೈಡ್ ಚಿಕನ್” ರೆಸಿಪಿಗಾಗಿ ಹೆಸರುವಾಸಿಯಾಗಿದ್ದಾರೆ.