ಬಾಲ್ಯದಲ್ಲಿ ಸೊಇಚಿರೊ ಹೋಂಡಾ 

ಹಮಾಮಾತ್ಸು ಜಪಾನಿನ ಶಿಝುಓಕಾ ಜಿಲ್ಲೆಯ ಒಂದು ಪಟ್ಟಣ. ಇದಕ್ಕೆ ಹೊಂದಿಕೊಂಡೇ ಇರುವ ಐವಾಟಾ ಕೌಂಟಿಯಲ್ಲಿರುವ ಕೋಂಯೋ ಎಂಬ ಪುಟ್ಟ ಹಳ್ಳಿಯಲ್ಲಿ  ೧೯೦೬, ನವೆಂಬರ್ ಹದಿನೇಳರಂದು  ಗಿಹೈ ಮತ್ತು ಮಿಕ ದಂಪತಿಗಳಿಗೆ ಮೊದಲನೇ ಮಗನಾಗಿ ಸೊಇಚಿರೊ ಹೋಂಡಾ ಹುಟ್ಟಿದರು. ತಂದೆ ಗಿಹೈ ಪ್ರಾಮಾಣಿಕ ಮತ್ತು ನಿಪುಣ ಕಮ್ಮಾರರಾಗಿದ್ದಾದರು ಮತ್ತು ತಾಯಿ ನುರಿತ ನೇಕಾರರಾಗಿದ್ದರು. ಕುಟುಂಬ ಬಡವಾಗಿದ್ದರೂ  ಸೊಇಚಿರೊ ಅವರ ಬಾಲ್ಯ ಸುಖಕರ ಮತ್ತು ಶಿಸ್ತಿನಿಂದ ಕೂಡಿತ್ತು. 

ಬಾಲ್ಯದಲ್ಲಿ ತುಂಟ ಮತ್ತು ಬೇಜವಾಬ್ದರನಾಗಿದ್ದ ಸೊಇಚಿರೊ, ಒಮ್ಮೆ ಶಾಲೆಯಲ್ಲಿ ಕೊಡುವ ಪ್ರಗತಿ ಪತ್ರಕ್ಕೆ ಪೋಷಕರ ಸೀಲ್  ಹಾಕಿಸಿ ಹಿಂದಿರಿಗಿಸಲು ಹಿಂಜರಿದು, ಹಳೆಯ ಸೈಕಲ್ ಪೆಡಲ್ ನ ರಬ್ಬರಿನಿಂದ ಹೋಂಡಾ ಎಂದು ಕೊರೆದು, ತಾವೇ ಸೀಲ್ ಹಾಕಿ ಶಿಕ್ಷಕರಿಗೆ ನೀಡಿದರು. ತಮ್ಮ ಸಹಪಾಠಿಗಳಿಗೂ ಹೀಗೆ ಮಾಡಿ ಕೊಡಲು ಹೋಗಿ ಸಿಕ್ಕಿಬಿದ್ದರು. ಏಕೆಂದರೆ ಸೀಲ್ನಲ್ಲಿ ಪ್ರತಿಬಿಂಬದ ಅಕ್ಷರಗಳನ್ನು ಮೂಡಿಸಿದರೆ ಮಾತ್ರ ಅಚ್ಚು ಸರಿಯಾಗಿ ಬೀಳುವುದು. ಜಪಾನೀ ಅಕ್ಷರದಲ್ಲಿ ಹೋಂಡಾ ಎಂದು ಬರೆದಾಗ ಬಿಂಬ-ಪ್ರತಿಬಿಂಬ ಎರಡೂ ಒಂದೇ ಆಗಿದ್ದರಿಂದ ಅವರ ಸೀಲ್ ನ ಅಚ್ಚು ಸರಿಯಾಗಿಯೇ ಇತ್ತು. 

ಆದರೂ ಅವರು ಬೇರೆಯವರಿಗೆ ತೊಂದರೆ ಕೊಡಲು ದ್ವೇಷಿಸುತ್ತಿದ್ದರು ಮತ್ತು ಸಮಯಪಾಲನೆಯಲ್ಲಿ ಶಿಸ್ತಿನ ಸಿಪಾಯಿಯಾಗಿದ್ದರು. ತಮ್ಮ ತಂದೆಯಿಂದ ಜನ್ಮಜಾತ ದಕ್ಷತೆ ಮತ್ತು ಯಂತ್ರಗಳ ಬಗ್ಗೆ ಅತೀವ ಕುತೂಹಲವನ್ನು ಮೈಗೂಡಿಸಿಕೊಂಡರು. ತುಂಬಾ ಚಿಕ್ಕಂದಿನಲ್ಲಿಯೇ  ಅವರ ಹಳ್ಳಿಯಲ್ಲಿ ನೋಡಿದ ಮೊದಲನೇ ಕಾರ್ ನಿಂದ ಎಷ್ಟು ಆಕರ್ಷಿತರಾಗಿದ್ದರೆಂದರೆ, ಆ ಕಾರ್ ನಿಂದ ಹೊಮ್ಮಿದ ಆಯಿಲ್ ನ ಪರಿಮಳ “ನಾನು ಎಂದು ಕೂಡ ಮರೆಯಲೇ ಸಾಧ್ಯವಿಲ್ಲ” ಎಂದು ಯಾವಾಗಲೂ ಹೇಳುತ್ತಿದ್ದರು. 

ಕೆಲ ಕಾಲದ ನಂತರ ತಂದೆ ಗಿಹೈ ಸೈಕಲ್ ಶಾಪ್ ಒಂದನ್ನು  ತೆರೆದರು. ಆಗ ಜಪಾನ್ ನಲ್ಲಿ ಸೈಕಲ್ಗಳು ಜನಪ್ರಿಯವಾಗುತ್ತಿದ್ದವು ಮತ್ತು ಅನೇಕರಿಗೆ ಇದರ ರಿಪೇರಿಯ ಅವಶ್ಯಕತೆ ಇರುವುದನ್ನು ನೋಡಿ ಅದನ್ನೇ ವ್ಯವಹಾರವನ್ನಾಗಿ ಮಾಡಿಕೊಳ್ಳಲು ಸರಿಯಾದ ಅವಕಾಶ ಎಂದು ತೆರೆದ ಶಾಪ್ ಇದಾಗಿತ್ತು. ತಮ್ಮ ಕಮ್ಮಾರಿಕೆಯ ಅನುಭವದಿಂದಲೂ, ಅವರಿಗೆ ಸ್ವಾಭಾವಿಕವಾದ ಕೌಶಲ್ಯದಿಂದಲೂ ಅವರ ಸೈಕಲ್ ಶಾಪ್  ಬಹು ಬೇಗನೆ  ನೆರೆಹೊರೆಯಲ್ಲಿ ಪ್ರಸಿದ್ಧವಾಯಿತು. ಕೇವಲ ರಿಪೇರಿ ಮಾಡುವುದಷ್ಟೇ ಅಲ್ಲದೆ ಬಳಸಿದ ಹಳೆಯ ಸೈಕಲ್ ಗಳನ್ನು ಕಡಿಮೆ ದರಕ್ಕೆ ಕೊಂಡು, ಅಗತ್ಯವಾದ ರಿಪೇರಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತ ವ್ಯವಹಾರವನ್ನೂ ಮಾಡುತ್ತಿದ್ದರು. 

ಸೊಇಚಿರೊ ಹೋಂಡಾ ತಮ್ಮ ಹೈಯರ್ ಎಲಿಮೆಂಟರಿ ಶಿಕ್ಷಣ ಮುಗಿಸುತ್ತಿದ್ದಂತೆ ಬೈಸಿಕಲ್ ವರ್ಲ್ಡ್ ಎಂಬ ಜಪಾನೀ  ಪತ್ರಿಕೆಯಲ್ಲಿ, “ಟೋಕಿಯೋ ಆರ್ಟ್ ಶೋಕಾಯ್‌” ಎಂಬ ಆಟೋಮೊಬೈಲ್ ಸರ್ವಿಸ್ ಕಂಪನಿಯೊಂದರ ಜಾಹೀರಾತನ್ನು  ನೋಡಿದರು. ಈ ಜಾಹೀರಾತು ಸೈಕಲ್ ರಿಪೇರಿಗೆ ಸಂಬಂಧವಿಲ್ಲದೆ ಆಟೋಮೊಬೈಲ್, ಮೋಟಾರ್ ಸೈಕಲ್ ಮತ್ತು ಪೆಟ್ರೋಲ್ ಎಂಜಿನ್ ನ ತಯಾರಿಕೆ ಮತ್ತು ರಿಪೇರಿಗೆ ಸಂಬಂಧಿಸಿತ್ತಾದರೂ, ಹೋಂಡಾ, ಕೂಡಲೇ ಆ ಜಾಹೀರಾತಿಗೆ ಅರ್ಜಿ ಸಲ್ಲಿಸಲು ಆಸಕ್ತರಾದರು. 

ಆರ್ಟ್ ಶೋಕಾಯಿ ಆಗಿನ ಕಾಲದಲ್ಲಿ ಟೋಕಿಯೋದ ಅಗ್ರಮಾನ್ಯ ಆಟೋಮೊಬೈಲ್ ರಿಪೇರ್ ವರ್ಕ್ ಶಾಪ್ ಆಗಿದ್ದರಿಂದ ಅನೇಕ ಯುವಕರು ಅಲ್ಲಿ ಆಪ್ರೆಂಟೀಸ್ ಆಗಲು ತುದಿಗಾಲಲ್ಲಿ ನಿಂತಿದ್ದರು. ಆ ಜಾಹೀರಾತು ಯಾವುದೇ ಉದ್ಯೋಗ ನೇಮಕಾತಿ ಬಗ್ಗೆ ಆಗಿಲ್ಲದಿದ್ದರೂ, ಹೋಂಡಾ ಧೈರ್ಯ ತಂದುಕೊಂಡು ಆ ಸಂಸ್ಥೆಯಲ್ಲಿ ಆಪ್ರೆಂಟೀಸ್ ಆಗುವ ಅವಕಾಶ ಕೋರಿ ಪತ್ರ ಬರೆದರು. 

“ಬೇಕಾದ್ದನ್ನು ಪಡೆಯಲು, ಮೊದಲು ಕೇಳಬೇಕು, ಕೇಳಿದರೆ ಸಿಗುತ್ತದೆ” ಎಂಬ ಸ್ಟೀವ್  ಜಾಬ್ಸ್ ಅವರ ಮಾತಿನಂತೆ ಆರ್ಟ್ ಶೋಕಾಯಿ ಕಡೆಯಿಂದ ಸಕಾರಾತ್ಮಕವಾದ ಉತ್ತರ ಬಂತು.

ಟೋಕಿಯೋ ಆರ್ಟ್ ಶೋಕಾಯಿನಲ್ಲಿ ಹೋಂಡಾ 

ಹೀಗೆ ಸೊಇಚಿರೊ ಹೋಂಡಾ ತಮ್ಮ ಹದಿನೈದನೇ ವಯಸಿನಲ್ಲಿ (೧೯೨೨) ಹಮಾಮಾತ್ಸು ವಿನಿಂದ ಸುಮಾರು ೨೫೦ ಕಿಮೀ ದೂರದ್ಲಲಿರುವ ಜಪಾನಿನ ರಾಜಧಾನಿ ಟೋಕಿಯೋಗೆ ತೆರಳಿದರು. ಟೋಕಿಯೋದ ಹೊಂಗೋ ಪ್ರಾಂತ್ಯದ ಯುಶಿಮಾ ಎಂಬಲ್ಲಿದ್ದ ಆರ್ಟ್ ಶೋಕಾಯಿ ಕಂಪನಿಯಲ್ಲಿ ಆಪ್ರೆಂಟೀಸ್ ಆಗಿ ಸೇರಿಕೊಂಡರು. ಊಟ, ತಿಂಡಿ ಮತ್ತು ಇರಲು ಸ್ಥಳ ಬಿಟ್ಟರೆ ಸಂಬಳ ಎಂದು ಎನೂ ಸಿಗುತ್ತಿರಲಿಲ್ಲ. ಆದರೆ ಅಲ್ಲಿ ಸಿಕ್ಕ ಕೆಲಸದ ಅನುಭವ ಅವರ ಜೀವನದುದ್ದಕೂ ಅಗಾಧ ಪ್ರಭಾವ ಬೀರಿತು. 

ಕೆಲಸದ ಮೇಲೆ ಇದ್ದ ಉತ್ಸಾಹ, ಯಾವಾಗಲೂ ಸುಧಾರಣೆಯ ಹಂಬಲ, ಹೊಸ ಹೊಸ ಐಡಿಯಾಗಳನ್ನು ಯೋಚಿಸುವ ಸಾಮರ್ಥ್ಯ, ಯಂತ್ರಗಳ ಬಗ್ಗೆ ಇದ್ದ ಒಳ್ಳೆಯ ಕೈ ಇತ್ಯಾದಿ ಅಸಾಧಾರಣ ಗುಣಗಳಿಂದ ಆರ್ಟ್ ಶೋಕಾಯಿನ ಮಾಲೀಕ ಯುಝೋ ಸಕಕಿಬಾರಾ ಅವರು ಯುವಕ ಹೋಂಡಾ ಅವರನ್ನು ಶೀಘ್ರದಲ್ಲೇ  ಗುರುತಿಸುವಂತಾಯ್ತು. ಸಕಕಿಬಾರಾ ರಿಪೇರಿ ಕೆಲಸ ಮತ್ತು ಪಿಸ್ಟನ್ ತಯಾರಿಕೆಯಲ್ಲಿ ಪಳಗಿದ್ದರು. ಅವರು  ಒಬ್ಬ ಎಂಜಿನಿಯರ್ ಆಗಿ ಅಷ್ಟೇ ಅಲ್ಲದೆ ವ್ಯವಹಾರದಲ್ಲಿ ಕೂಡ ಹೋಂಡಾ ಅವರಿಗೆ ಉತ್ತಮ ಶಿಕ್ಷಕರಾದರು.  ತಮ್ಮ ಬಾಸ್ ನಿಂದ ಕೇವಲ ರಿಪೇರಿ ಕೆಲಸವಷ್ಟೇ ಅಲ್ಲದೆ ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು, ತಮ್ಮ ತಾಂತ್ರಿಕ ಕೌಶಲ್ಯದ ಬಗ್ಗೆ ಹೇಗೆ ಹೆಮ್ಮೆ ಪಡಬೇಕು ಎಂಬುದನ್ನೂ ಕಲಿತರು. 

ಆಗ ಜಪಾನಿನಲ್ಲಿ ಕಾರ್ ಮತ್ತು ಬೈಕ್ ಗಳು ಮೇಲ್ವರ್ಗದವರಿಗಷ್ಟೇ ಸೀಮಿತವಾಗಿತ್ತು ಮತ್ತು ಹೆಚ್ಚಾಗಿ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾದ ವಾಹನಗಳಿರುತ್ತಿದ್ದವು. ಪ್ರಪಂಚದ ಎಲ್ಲ ಮೂಲೆಗಳಿಂದಲೂ ರಾಶಿ ಉತ್ಪಾದನೆಗೊಂಡ (Mass production) ವಾಹನಗಳಿಂದ ಹಿಡಿದು ಕೆಲವೇ ಸಂಖ್ಯೆಯಲ್ಲಿ ಉತ್ಪಾದನೆಗೊಳ್ಳುತ್ತಿದ್ದ  ಐಷಾರಾಮಿ ಮಾಡೆಲ್ ಗಳು, ಸ್ಪೋರ್ಟ್ಸ್ ಕಾರ್ ಗಳು, ಅಪರೂಪದ ಸಂಗ್ರಹ ಯೋಗ್ಯವಾದ ವಾಹನಗಳು ಹೀಗೆ ಎಲ್ಲವೂ ಜಪಾನ್ ಗೆ ಆಮದಾಗುತ್ತಿದ್ದವು. 

ಈ ರೀತಿಯ ಎಲ್ಲ ಕಾರ್ ಗಳನ್ನು ರಿಪೇರಿಗಾಗಿ ಆರ್ಟ್ ಶೋಕಾಯಿಗೆ ತರಲಾಗುತ್ತಿತ್ತು ಮತ್ತು ಹೀಗೆ ಜ್ಞಾನದಾಹಿ ಯುವಕ ಹೋಂಡಾರಿಗೆ ಕೆಲಸ ಮತ್ತು ಅಧ್ಯಯನಕ್ಕಾಗಿ ಆರ್ಟ್ ಶೋಕಾಯಿ ಒಂದು ಯೋಗ್ಯ ಸ್ಥಳವಾಯಿತು. 

ಸೊಇಚಿರೊ ತುಂಬಾ ಶ್ರದ್ಧೆಯಿಂದ ಕೆಲಸ ಮಾಡಿದರು ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ಬಗ್ಗೆ  ಆಳವಾಗಿ ಅರ್ಥ ಮಾಡಿಕೊಂಡರು. ಯಂತ್ರಗಳೊಂದಿಗೆ ಎಷ್ಟು ಕೆಲಸ ಮಾಡಿದರೆಂದರೆ ಬರಿ ಪುಸ್ತಕದ ಜ್ಞಾನವಷ್ಟೇ ಅಲ್ಲದೆ ಸ್ವತಃ ತಮ್ಮ ಕೈಗಳಿಂದ ಯಂತ್ರಗಳೊಂದಿಗೆ ನಿಜವಾದ ಕೆಲಸ  ಮಾಡಿ ವೆಲ್ಡಿಂಗ್, ಫೋರ್ಜಿಂಗ್ ನಂತಹ ಕಾರ್ಯಗಳಲ್ಲೂ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಂಡರು. ಬರಿ ಪರೀಕ್ಷೆಯಲ್ಲಿ ಪಾಸಾಗಲು ಪುಸ್ತಕ ಓದಿಕೊಂಡಿರುವವರು ಇವರ ಜ್ಞಾನದ ಎದುರು ನಿಲ್ಲಲೂ ಸಾಧ್ಯವಿರಲಿಲ್ಲ. 

ರೇಸಿಂಗ್ – ಮೋಟಾರ್ ಸ್ಪೋರ್ಟ್ಸ್ ಜಗತ್ತಿಗೆ ಪ್ರವೇಶ 

ಸಕಕಿಬಾರಾ, ಹೋಂಡಾ ಅವರು ಮೋಟಾರ್ ಸ್ಪೋರ್ಟ್ಸ್ ಜಗತ್ತಿನೆಡೆಗೂ ಆಕರ್ಷಿತರಾಗಲು ಕಾರಣರಾದರು. ಮೊದಲನೇ ವಿಶ್ವ ಯುದ್ಧದ ಸಮಯದಲ್ಲೇ ಜಪಾನಿನಲ್ಲಿ ಮೋಟಾರ್ ಸ್ಪೋರ್ಟ್ಸ್ – ಮೋಟಾರ್ ಸೈಕಲ್ ರೇಸಿಂಗ್ ನಿಂದ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಕಾರ್ ರೇಸಿಂಗ್ ನಿಂದ ಅದು ಇನ್ನಷ್ಟು  ಜನಪ್ರಿಯವಾಯಿತು.  ಅಷ್ಟೇ ಅಲ್ಲದೆ ಜಪಾನಿಗೆ ಬರುತ್ತಿದ್ದ ವಿದೇಶಿ ಆಟೋಮೊಬೈಲ್ ಪತ್ರಿಕೆಗಳು, ಅಲ್ಲಿನ ಮೋಟಾರ್ ಸ್ಪೋರ್ಟ್ಸ್ ಚಟುವಟಿಕೆಗಳ ಬಗ್ಗೆ ವಿವರವಾದ ಸುದ್ದಿಯನ್ನು ಹೊತ್ತು ತರುತ್ತಿದ್ದವು. 

ಆಗಲೇ ಜಪಾನೀ ಮೋಟಾರ್ ಸ್ಪೋರ್ಟ್ಸ್ ಅಭಿಮಾನಿಗಳಿಗೆ ಐಲ್ ಆಫ್ ಮ್ಯಾನ್ ಟೂರಿಸ್ಟ್ ಟ್ರೋಫಿ ರೇಸಿಂಗ್  (Isle of Man TT) ಎಂಬುದೊಂದು ಜಗತ್ತಿನಲ್ಲೇ ಮಹಾನ್ ಮತ್ತು ಅತ್ಯಂತ ಅಪಾಯಕಾರಿ ದ್ವಿ ಚಕ್ರ ವಾಹನಗಳ ರೇಸಿಂಗ್ ಆಗಿದೆ ಎಂದು ತಿಳಿದಿತ್ತು. ಅಷ್ಟೇ ಅಲ್ಲದೆ ಕಾರ್ ರೇಸಿಂಗ್ ನಲ್ಲಿ ಗ್ರಾಂಡ್ ಪ್ರಿ, ಯೂರೋಪ್ ನಲ್ಲಿ  ಲು ಮೌನ್ ೨೪ (Le Mans 24) ಗಂಟೆಗಳ ರೇಸ್ ಮತ್ತು ಅಮೇರಿಕಾದಲ್ಲಿ ಇಂಡಿಯಾನಾಪೊಲಿಸ್ ೫೦೦ ಇವು ಅತ್ಯಂತ ಜನಪ್ರಿಯವಾದವುಗಳು ಎಂದು ತಿಳಿದಿತ್ತು. ಹೋಂಡಾ ಅವರಿಗೂ ಇದು ತಿಳಿದಿತ್ತು. 

ಸಕಕಿಬಾರಾ ಅವರ ನೇತೃತ್ವದಲ್ಲಿ ಆರ್ಟ್ ಶೋಕಯಿ ಕಂಪನಿ, ೧೯೨೩ರಲ್ಲಿ ರೇಸಿಂಗ್ ಕಾರ್ ಗಳನ್ನು ನಿರ್ಮಿಸಲು ಪ್ರಾರಂಭಿಸಿತು. ಇದರಲ್ಲಿ ಸಕಕಿಬಾರಾ ಅವರಿಗೆ ಸಹಾಯವಾದವರು ಅವರ ತಮ್ಮ ಶಿನ್ ಇಚಿ, ಹೋಂಡಾ ಮತ್ತು ಇತರ ಕೆಲವು ವಿದ್ಯಾರ್ಥಿಗಳು. ಮೊದಲನೇ ಮಾಡೆಲ್ ಅನ್ನು ಆರ್ಟ್ ಡೈಮ್ಲರ್ ಎಂದು ಕರೆದರು ಮತ್ತು ಇದು ಹಳೆಯ ಬಳಸಿದ ಡೈಮ್ಲರ್ ಇಂಜಿನ್ ಹೊಂದಿತ್ತು. ಎರಡನೆಯದು ‘ಕರ್ಟಿಸ್’. ಇದು ಅಮೆರಿಕಾದ ಕರ್ಟಿಸ್ ಜೆನ್ನಿ ಎ ೧ ಎಂಬ ವಿಮಾನದ ಸೆಕೆಂಡ್ ಹ್ಯಾಂಡ್ ಎಂಜಿನ್ ಹೊಂದಿತ್ತು ಮತ್ತು ಅದನ್ನು ಅಮೆರಿಕಾದ ಮಿಶೆಲ್ ಎಂಬ ಕಾರಿನ ಚಾಸ್ಸಿ ಗೆ ಅಳವಡಿಸಲಾಗಿತ್ತು. ಈ ವಿಶೇಷ ಕಾರನ್ನು ಅಭಿವೃದ್ಧಿ ಪಡಿಸಲು ಹೋಂಡಾ ರವರು ತುಂಬಾ ಶ್ರಮಿಸಿದ್ದರು. ನವೆಂಬರ್ ೨೩, ೧೯೨೪ ರಲ್ಲಿ , ಕರ್ಟಿಸ್ ಮೊದಲ ಬಾರಿಗೆ ಜಪಾನ್ ಆಟೋಮೊಬೈಲ್ ರೇಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಜಯಶಾಲಿಯಾಯಿತು. ಶಿನ್ ಇಚಿ ಇದರ ಡ್ರೈವರ್ ಆಗಿದ್ದರು ಮತ್ತು ಹೋಂಡಾ ಸಹಾಯಕ ಇಂಜಿನಿಯರ್. ಆಗ ಹದಿನೇಳು ವರ್ಷದ ಹೋಂಡಾರಲ್ಲಿ ಅತೀವ ಪ್ರಭಾವ ಬೀರಿದ ಈ ಅನುಭವ, ಅವರ ಜೀವನ ಪರ್ಯಂತ ಮೋಟಾರ್ ಸ್ಪೋರ್ಟ್ಸ್ ನಲ್ಲಿ ಆಸಕ್ತಿ ಹೊಂದುವಂತಾಯ್ತು.

ಹಮಾಮಾತ್ಸುವಿನಲ್ಲಿ ಹೋಂಡಾ 

ಇಪ್ಪತ್ತನೇ ವಯಸ್ಸಿನಲ್ಲಿ ಹೋಂಡಾ ಅವರನ್ನು ಮಿಲಿಟರಿ ಸೇವೆಗೆ ಕರೆಯಿಸಲಾಯಿತು, ದೈಹಿಕ ಪರೀಕ್ಷೆ ವೇಳೆಯಲ್ಲಿ ಅವರಿಗೆ ದ್ರಷ್ಟಿ ದೋಷ (colour blindness) ಇರುವುದು ಪತ್ತೆಯಾಯಿತು. ಇದರಿಂದ ಅವರು ಮಿಲಿಟರಿಯಲ್ಲಿ ಯಾವುದೇ ಕಾಲ ಕಳೆದುಕೊಳ್ಳಲಿಲ್ಲ. 

೧೯೨೮ರಲ್ಲಿ ಹೋಂಡಾರವರ ಆಪ್ರೆಂಟೀಸ್ ಮುಗಿಸಿ, ಆರ್ಟ್ ಶೋಕಾಯಿ ನ ಒಂದು ಶಾಖೆಯನ್ನು ಹಮಾಮಾತ್ಸುವಿನಲ್ಲಿ ತೆರೆದರು. ಸಕಕಿಬಾರಾ ಅವರ ಶಿಷ್ಯರಲ್ಲೇ , ಹೋಂಡಾರಿಗೆ ಮಾತ್ರ ಈ ಅವಕಾಶ ಸಿಕ್ಕಿದ್ದು. ಆಗ ೨೧ ವಯಸ್ಸಿನವರಾಗಿದ್ದ ಹೋಂಡಾ ತಮ್ಮ ಯೌವನ ಮತ್ತು ಕೌಶಲ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕೆಂಬ ಸಂಕಲ್ಪ ಮಾಡಿದರು. ಕೇವಲ ವಾಹನ ರಿಪೇರಿ ಅಲ್ಲದೆ, ಒಬ್ಬ ಸಂಶೋಧಕರಾಗಿ ಕೂಡ “ಹಮಾಮಾತ್ಸುವಿನ ಎಡಿಸನ್ “ ಎಂಬ ಹೆಸರನ್ನೂ ಪಡೆದರು. ಹೋಂಡಾರವರು  “ ಒಬ್ಬ ಮನುಷ್ಯ ಕಾರಿನ ಕೆಳಗೆ ತೆವಳಿಕೊಂಡು ಕೆಲಸ ಮಾಡುವಂತಿರಬಾರದು” ಎಂದು ಹೇಳಿ ಲಿಫ್ಟ್ ಮಾದರಿಯಲ್ಲಿರುವ ವಾಹನ ರಿಪೇರಿ ಸ್ಟಾಂಡ್ ಅನ್ನು ಆವಿಷ್ಕರಿಸಿದ್ದರು.

ಕೇವಲ ಒಬ್ಬ ಉದ್ಯೋಗಿಯಿಂದ ಪ್ರಾರಂಭವಾದ ಆರ್ಟ್ ಶೋಕಾಯಿನ ಹಮಾಮಾತ್ಸು ಶಾಖೆ ೧೯೩೫ರ ವೇಳೆಗೆ  ಮೂವತ್ತಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿತ್ತು. ಅದೇ ವರ್ಷ ಅಕ್ಟೋಬರ್ ನಲ್ಲಿ ಹೋಂಡಾ ಅವರ ಮದುವೆ ಕೂಡ ಆಗಿತ್ತು ಮತ್ತು ಪತ್ನಿ ಸಾಚಿ ಈಗ ಶಾಖೆಯ ವ್ಯವಹಾರ ನೋಡಿಕೊಳ್ಳಲು ಹೋಂಡಾ ಅವರನ್ನು ಸೇರಿಕೊಂಡರು. 

ಜೂನ್ ೭, ೧೯೩೬ ರಲ್ಲಿ ಸೊಇಚಿರೊ ಹೋಂಡಾ ದೊಡ್ಡ ಅಪಘಾತಕ್ಕೀಡಾದರು. ಜಪಾನಿನ ಮೊದಲ ರೇಸ್ ಟ್ರ್ಯಾಕ್  ಆದ ತಮಗಾವಾ ಸ್ಪೀಡ್ ವೇ ನ ಉದ್ಘಾಟನಾ ರೇಸ್ನಲ್ಲಿ ಆರ್ಟ್ ಶೋಕಾಯಿನ “ಹಮಾಮಾತ್ಸು “ ರೇಸಿಂಗ್ ಕಾರ್ ಅನ್ನು ಹೋಂಡಾ ಚಲಾಯಿಸುತ್ತಿದ್ದರು. ಪಿಟ್ ಸ್ಟಾಪ್ ಮುಗಿಸಿ ಟ್ರ್ಯಾಕ್ ಗೆ ಸೇರಿಕೊಳ್ಳುತ್ತಿದ್ದ ಇನ್ನೊಂದು ಕಾರ್ ಗೆ ಡಿಕ್ಕಿ ಹೊಡೆದರು. ಹೊಂಡರವರ ಕಾರು ಪಲ್ಟಿಯಾಯಿತು ಮತ್ತು ಅವರು ಕಾರಿನಿಂದ ಹೊರಗೆ ಎಸೆಯಲ್ಪಟ್ಟರು. ಅವರಿಗೆ ಗಂಭೀರ ಗಾಯಗಳಾಗದಿದ್ದರೂ, ಅವರ ಜೊತೆಗೆ  ಮೆಕ್ಯಾನಿಕ್ ಆಗಿದ್ದ ಅವರ ತಮ್ಮ ಬೆಂಜಿರೋ ಗಂಭೀರವಾಗಿ ಗಾಯಗೊಂಡು ಬೆನ್ನು ಮೂಳೆ ಮುರಿದುಕೊಂಡರು. ಅದಾದ ನಂತರ ಹೋಂಡಾ ಅದೇ ವರ್ಷದಲ್ಲಿ ನೆಡೆದೆ ಕೇವಲ ಇನ್ನೊಂದು ರೇಸ್ ನಲ್ಲಿ ಪಾಲ್ಗೊಂಡರು. 

“ನನ್ನ ಹೆಂಡತಿ ಅತ್ತು ಕರೆದು ರೇಸಿಂಗ್ ನಿಲ್ಲಿಸುವಂತೆ ಕೇಳಿಕೊಂಡಾಗ, ನಾನು ರೇಸಿಂಗ್ ಬಿಡಬೇಕಾಯಿತು” ಎಂದು ಹೋಂಡಾ ಹೇಳಿದರೆ, ಅವರ ಪತ್ನಿ “ ನಾನು ಹೇಳಿದ್ದನ್ನು  ಕೇಳಿ ರೇಸಿಂಗ್ ನಿಲ್ಲಿಸಿದರೇ? ಅವರ ತಂದೆಯವರ ಲೆಕ್ಚರ್ ಕೇಳಿ ರೇಸಿಂಗ್ ಬಿಡಲು ನಿರ್ಧರಿಸಿದರು ಎನಿಸುತ್ತದೆ” ಎಂದು ಸ್ವಲ್ಪ ವಿಭಿನ್ನ ಕಥೆ ಹೇಳುತ್ತಾರೆ. 

ಜಪಾನ್ ತನ್ನ ಕರಾಳ ಮಿಲಿಟರಿ ಯುದ್ಧಗಳ ದಿನಗಳನ್ನು ಪ್ರವೇಶಿಸುತ್ತಿದ್ದಂತೆ, ಕಾಲ ಬದಲಾಗುತಿತ್ತು. ಚೀನಾ ಯುದ್ಧದ ಸಂದರ್ಭದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದರಿಂದ ರೇಸಿಂಗ್ ಮತ್ತಿತರ ಚಟುವಟಿಕೆಗಳನ್ನು ನಿಷೇಧಿಸಲಾಯಿತು. ಕೆಲವು ವರ್ಷ ಜಪಾನ್ ನಲ್ಲಿ ಮೋಟಾರ್ ಸ್ಪೋರ್ಟ್ಸ್ ನಿರ್ಜೀವವಾಯಿತು. 

ಪಿಸ್ಟನ್ ರಿಂಗ್ಸ್ ಉತ್ಪಾದನಾ ಕಂಪನಿ ಟೋಕೈ  ಸಾಕಿಯ  ಜನನ 

೧೯೩೬ರಲ್ಲಿ ಸೊಇಚಿರೊ ಹೋಂಡಾ ರಿಪೇರಿ ಕೆಲಸ ಸಾಕಾಗಿ ಉತ್ಪಾದನೆಯ ಕಡೆಗೆ ಮುಖ ಮಾಡಿದರು. ಆರ್ಟ್ ಶೋಕಾಯಿನ ಹಮಾಮಾತ್ಸು ಶಾಖೆಯನ್ನು, ಪಿಸ್ಟನ್  ರಿಂಗ್  ಉತ್ಪಾದಿಸುವ ಪ್ರತ್ಯೇಕ ಕಂಪನಿಯಾಗಿ ಪರಿವರ್ತಿಸಲು ನೋಡಿದರು ಆದರೆ ಷೇರುದಾರರ ಪ್ರತಿರೋಧದಿಂದ ಈ ಆಸೆ ಕೈಗೂಡಲಿಲ್ಲ. ಷೇರುದಾರರ ಪ್ರಕಾರ ರಿಪೇರಿ ಶಾಪ್ ಚೆನ್ನಾಗಿಯೇ ನೆಡೆಯುತ್ತಿರುವಾಗ ಅನಗತ್ಯವಾಗಿ ಹೊಸ ಉದ್ಯಮಕ್ಕೆ ಕೈ ಹಾಕುವ ಅವಶ್ಯವಿರಲಿಲ್ಲ. 

ಎದೆಗುಂದದೆ ಹೋಂಡಾ ತನ್ನ ಸ್ನೇಹಿತನಾದ ಶಿಚಿರೋ ಕಾಟೊ ಅವರ ನೆರವಿನಿಂದ ಟೋಕೈ  ಸಾಕಿ ಹೆವಿ ಇಂಡಸ್ಟ್ರೀಸ್ ಅಥವಾ ಚಿಕ್ಕದಾಗಿ ಟೋಕೈ  ಸಾಕಿ ಎಂಬ  ಕಂಪನಿ ಸ್ಥಾಪಿಸಿದರು. ಕಾಟೊ ಅದರ ನಿರ್ದೇಶಕರಾಗಿದ್ದರು. ಸೊಇಚಿರೊ ಅವರು ದಿನದ ಹೊತ್ತಿನಲ್ಲಿ ಆರ್ಟ್ ಶೋಕಾಯಿ ಕಂಪೆನಿಯಲ್ಲೂ ಮತ್ತು ರಾತ್ರಿ ಪಿಸ್ಟನ್ ರಿಂಗ್ಸ್ ಗಳ ಬಗ್ಗೆ ಸಂಶೋಧನೆಯ ಕೆಲಸವನ್ನೂ ಮಾಡುತ್ತಿದ್ದರು. 

ಸಂಶೋಧನೆ ಏನೂ ಫಲಕಾರಿಯಾಗದ ಕಾರಣ ಕೆಲ ಸಮಯದಲ್ಲಿ ಅವರು ತಮ್ಮ ಲೋಹಶಾಸ್ತ್ರದ ಜ್ಞಾನ ಹೆಚ್ಚಿಸಲು “ಹಮಾಮಾತ್ಸು ಇಂಡಸ್ಟ್ರಿಯಲ್ ಇನ್ಸ್ಟಿಟ್ಯೂಟ್ “ ನಲ್ಲಿ ಅರೆಕಾಲಿಕ ವಿದ್ಯಾರ್ಥಿಯಾಗಿ ಸೇರಿಕೊಂಡರು. ಕೆಲಸ, ಸಂಶೋಧನೆ, ವಿದ್ಯಾಭ್ಯಾಸ ಹೀಗೆ ವಿಪರೀತವಾಗಿ ಮುಂದಿನ ಎರಡು ವರ್ಷಗಳ ಕಾಲ ದುಡಿದರು. ಈ ಸಮಯದಲ್ಲಿ ಅವರ ಮುಖಚರ್ಯೆಯೇ ಸಂಪೂರ್ಣವಾಗಿ ಬದಲಾಗಿ ಹೋಯಿತು. ಕೊನೆಗೂ ಪಿಸ್ಟನ್ ರಿಂಗ್ ತಯಾರಿಕಾ ಪ್ರಯೋಗಗಳು ಫಲಕಾರಿಯಾದವು ಮತ್ತು ೧೯೩೯ರಲ್ಲಿ ಆರ್ಟ್ ಶೋಕಾಯಿಯ ಹಮಾಮಾತ್ಸು ಶಾಖೆಯನ್ನು ತನ್ನ ಶಿಷ್ಯರಿಗೆ ಒಪ್ಪಿಸಿ, ಟೋಕೈ  ಸಾಕಿ ಕಂಪನಿಯಲ್ಲಿ ಅಧ್ಯಕ್ಷರಾಗಿ ಸೇರಿಕೊಂಡರು. 

ಪಿಸ್ಟನ್ ರಿಂಗ್ ಗಳ ಉತ್ಪಾದನೆ ಆರಂಭವಾಗುತ್ತಿದಂತೆ ಹೋಂಡಾ ಅವರು ಇನ್ನೂ ಕಷ್ಟಗಳನ್ನು ಅನುಭವಿಸಿದರು. ಈ ಬಾರಿ ತಯಾರಿಕಾ ತಂತ್ರಜ್ಞಾನದಲ್ಲಿ ಕುಂದು ಕೊರತೆಗಳು ತೋರಿದವು. ಜಪಾನಿನ ಇನ್ನೊಂದು ಮಹಾನ್ ವಾಹನ ತಯಾರಿಕಾ ಸಂಸ್ಥೆಯಾದ ಟೊಯೋಟಾ ಮೋಟಾರ್ ಕಂಪನಿಗೆ  ಪಿಸ್ಟನ್ ರಿಂಗ್ಸ್ ಪೂರೈಸಲು ಹೋಂಡಾ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಗುಣಮಟ್ಟದ ಪರೀಕ್ಷೆಗಾಗಿ ಕಳುಹಿಸಿದ ೫೦ ಪಿಸ್ಟನ್ ರಿಂಗ್ಸ್ ನಲ್ಲಿ ಕೇವಲ ಮೂರು ಮಾತ್ರ ಅಗತ್ಯ ಸ್ಟ್ಯಾಂಡರ್ಡ್ ಹೊಂದಿ ತೇರ್ಗಡೆಯಾಗಿದ್ದವು. 

ಮತ್ತೂ ಎರಡು ವರ್ಷ ಜಪಾನಿನ ಅನೇಕ ವಿಶ್ವ ವಿದ್ಯಾಲಯಗಳು, ಸ್ಟೀಲ್ ತಯಾರಿಸುವ ಕಂಪನಿಗಳಿಗೆ ಭೇಟಿಯಿತ್ತು  ತಯಾರಿಕಾ ತಂತ್ರಜ್ಞಾನದ ಬಗ್ಗೆ ಅಪಾರ ಅಧ್ಯಯನ ನೆಡೆಸಿದರು. ಕೊನೆಗೂ ರಾಶಿ ತಯಾರಿಸಿದ ಪಿಸ್ಟನ್ ರಿಂಗ್ಸ್ ಗಳನ್ನು ಟೊಯೋಟಾ, ನಾಕಾಜಿಮಾ ಏರ್ ಕ್ರಾಫ್ಟ್ ನಂತಹ ಸಂಸ್ಥೆಗಳಿಗೆ ಪೂರೈಸುವ ಸಾಮರ್ಥ್ಯವನ್ನು ಹೋಂಡಾ ಗಳಿಸಿಕೊಂಡರು. ಕಂಪನಿಯ ಉತ್ತುಂಗದಲ್ಲಿ ಸುಮಾರು ೨೦೦೦ ಸಿಬ್ಬಂದಿಗಳನ್ನು ಹೊಂದಿತ್ತು. 

ಟೋಕೈ  ಸಾಕಿಯ ಅವಸಾನ

ಡಿಸೆಂಬರ್ ೭, ೧೯೪೧ ರಂದು ಜಪಾನ್ ಪೆಸಿಫಿಕ್ ಯುದ್ಧದಲ್ಲಿ ಅಧಿಕೃತವಾಗಿ ಪ್ರವೇಶಿಸಿತು ಮತ್ತು ಟೋಕೈ ಸಾಕಿ ಕಾರ್ಖಾನೆಯನ್ನು ಯುದ್ಧ ಸಾಮಗ್ರಿ ಸಚಿವಾಲಯದ ನಿಯಂತ್ರಣದಡಿಯಲ್ಲಿ ಇರಿಸಲಾಯಿತು. ೧೯೪೨ರಲ್ಲಿ ಕಂಪನಿಯ ೪೦% ಶೇರ್ ಗಳನ್ನು ಟೊಯೋಟಾ ವಶ ಪಡಿಸಿಕೊಂಡಿತು ಮತ್ತು ಹೋಂಡಾ ಅವರನ್ನು ಅಧ್ಯಕ್ಷರಿಂದ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಪದಚ್ಯುತಿ ಗೊಳಿಸಲಾಯಿತು. ಪುರಷರು ಮಿಲಿಟರಿ ಸೇವೆಗೆ ಅಗತ್ಯವಾಗಿ ಹೋಗಬೇಕಾಗಿ ಬಂದುದರಿಂದ ಕ್ರಮೇಣ ಅವರ ಸಂಖ್ಯೆ ಕಾರ್ಖಾನೆಯಲ್ಲಿ ಕಡಿಮೆ ಆಗುತ್ತಾ ಹೋಯಿತು. ಈಗ ವಯಸ್ಕ ಹೆಂಗಸರು ಮತ್ತು ಮಹಿಳಾ ವಿದ್ಯಾರ್ಥಿಗಳು ಕಾರ್ಖಾನೆಯಲ್ಲಿ ದುಡಿಯಲು ಆರಂಭಿಸಿದರು. 

ಹೋಂಡಾ ಅವರು ಇಂತಹ ಅನನುಭವಿ ಕಾರ್ಮಿಕರಿಗೆ ಕಾರ್ಖಾನೆ ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತ ಮತ್ತು ಸುಲಭವಾಗಿ ಮಾಡಲು ಹಗಲಿರುಳು ಶ್ರಮಿಸಿದರು. ಇದೆ ಸಂಧರ್ಭದಲ್ಲಿ ಪಿಸ್ಟನ್ ರಿಂಗ್ಸ್ ಉತ್ಪಾದನೆಯನ್ನು ಸ್ವಯಂಚಾಲಿತವಾಗಿಸಲು (automation) ಮಾರ್ಗಗಳನ್ನು ರೂಪಿಸಿದರು. 

ನಿಪ್ಪೋನ್ ಗಕ್ಕಿ (ಈಗ ಯಮಹಾ) ಸಂಸ್ಥೆಯ ಅಧ್ಯಕ್ಷರಾದ ಕೈಚಿ ಕಾವಕಾಮಿ ಅವರ ಕೋರಿಕೆಯ ಮೇರೆಗೆ, ಹೋಂಡಾ  ಮರದಿಂದ ತಯಾರಿಸಿದ ವಿಮಾನದ ಪ್ರೊಪೆಲ್ಲರ್ ಗಳ ತಯಾರಿಕೆಗಾಗಿ  ಒಂದು ಸ್ವಯಂಚಾಲಿತ ಮಿಲ್ಲಿಂಗ್ ಯಂತ್ರವನ್ನು ಅಭಿವೃದ್ಧಿ  ಪಡಿಸಿದರು. ಈ ಮೊದಲು ಒಂದು ಪ್ರೊಪೆಲ್ಲರ್ ಕೈಯಲ್ಲಿ ತಯಾರಿಸಲು ಒಂದು ವಾರ ಹಿಡಿಯುತಿತ್ತು. ಆದರೆ ಈಗ ೩೦ ನಿಮಿಷದಲ್ಲಿ ಎರಡು ಪ್ರೊಪೆಲ್ಲರ್ ತಯಾರಿಸಲು ಸಾಧ್ಯವಾಯಿತು. ಕಾವಕಾಮಿ ಅವರು ಹೋಂಡಾ ಅವರ ಜಾಣ್ಮೆ ಮೆಚ್ಚಿ ಸಂತೋಷಪಟ್ಟರು. 

ಜಪಾನಿನ ಮೇಲೆ ವಿಮಾನ ದಾಳಿ ಹೆಚ್ಚಿತು ಮತ್ತು ಆ ದೇಶ ಯುದ್ಧದಲ್ಲಿ ಸೋಲಿನ ದವಡೆಯಲ್ಲಿತ್ತು. ವಿಮಾನ ದಾಳಿ ಹೆಚ್ಚಿದಂತೆ ಹಮಾಮಾತ್ಸು ಪಟ್ಟಣ ಒಡೆದು ನುಚ್ಚು ನೂರಾಯಿತು. ಟೋಕೈ ಸಾಕಿಯ ಯಾಮಾಸೀತ ಕಾರ್ಖಾನೆ ಕೂಡ ವಿನಾಶವಾಯಿತು. ೧೯೪೫ರಲ್ಲಿ ನಾನ್ಕಾಯಿ ಭೂಕಂಪದಿಂದ ಕಂಪನಿ ಇನ್ನೂ ನಷ್ಟ ಅನುಭವಿಸಿತು. 

ಜಪಾನ್ ೧೯೪೫, ಆಗಸ್ಟ್ ೧೫ರಂದು ಎರಡನೇ ವಿಶ್ವ ಯುದ್ಧದಲ್ಲಿ ಸೋತಿತು ಮತ್ತು ದೇಶ ಈಗ ಸಂಪೂರ್ಣ ಬದಲಾಗಿ ಬಿಟ್ಟಿತ್ತು. ಜಪಾನ್ ನಂತೆಯೇ ಹೋಂಡಾ ರವರ ಜೀವನ ಕೂಡ ಸಂಪೂರ್ಣ ಬದಲಾವಣೆಯಾಗುವುದರಲ್ಲಿತ್ತು.

—-

10ಮುಖಗಳು, ನಿಮ್ಮ ಇಮೇಲ್ ನಲ್ಲಿ !

10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ

ಫಾಲೋ ಮಾಡಿ