ಚಿಮಣಿ ಇಂಜಿನ್
ಹೋಂಡಾ ಅಭಿವೃದ್ಧಿಗೊಳಿಸಿದ ಮೊತ್ತ ಮೊದಲನೇ ಆಂತರಿಕ ದಹನ (Internal Combustion-IC) ಇಂಜಿನ್ ನ ಮೂಲ ಮಾದರಿ – ಚಿಮಣಿ ಇಂಜಿನ್.
ಅಧ್ಯಕ್ಷ ಹೋಂಡಾರವರು ವಿನೂತನ ಇಂಜಿನ್ ಗಾಗಿ ಒಂದು ವಿನ್ಯಾಸದ ಅನನ್ಯ ಪರಿಕಲ್ಪನೆ ಯೋಚಿಸಿದರು. ಅದನ್ನು ಕಾರ್ಖಾನೆಯ ನೆಲದ ಮೇಲೆ ಚಿತ್ರ ಬಿಡಿಸಿ ಕಾವಶಿಮಾ ಅವರಿಗೆ ವಿವರಿಸಿದರು. ಹೀಗೆ ಕಾರ್ಖಾನೆಯ ನೆಲದ ಮೇಲೆ ಬಾಗಿ ಕುಳಿತು ಪರಿಕಲ್ಪನೆಗಳ ರೇಖಾಚಿತ್ರಗಳನ್ನು ಬಿಡಿಸಿವುದು, ಅವರ ಜೀವನದುದ್ದಕ್ಕೂ ಬದಲಾವಣೆಗೊಳ್ಳದ ಅಭ್ಯಾಸವಾಗಿತ್ತು.
ಕಾವಶಿಮಾ ನುಡಿದರು “ಬರೇ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ, ಆ ವಯರ್ಲೆಸ್ ರೇಡಿಯೋ ಜನರೇಟರ್ ಇಂಜಿನ್ ಹಾಗೆಯೇ ಅನುಕರಿಸಿ ಹೊಸದನ್ನು ತಯಾರಿಸಿದರೆ ಸಾಕಿತ್ತು. ಅದು ನಮ್ಮ ಉದ್ದೇಶಗಳಿಗೆ ಸಾಕಾಗುವಷ್ಟು ಕಾರ್ಯ ಕ್ಷಮತೆ ಹೊಂದಿತ್ತು. ಆದರೆ ಆ ಹೊತ್ತಿಗಾಗಲೇ ಅವರು ನಮಗೆ ಗೊತ್ತಿರುವ ಓಲ್ಡ್ ಮ್ಯಾನ್ ಆಗಿದ್ದರು ಮತ್ತು ಆ ಇಂಜಿನ್ ನಂತೆಯೇ ಇನ್ನೊಂದನ್ನು ಸುಲಭವಾಗಿ ಮಾಡಲು ಅವರ ಮನಸ್ಸು ಒಪ್ಪಲಿಲ್ಲ. ಅವರಿಗೆ ಸುಮ್ಮನೆ ಅನುಕರಣೆ ಮಾಡಲು ಇಷ್ಟವಿರಲಿಲ್ಲ.”
ಕಾವಶಿಮಾ, ಅಧ್ಯಕ್ಷ ಹೊಂಡರವರು ಹೇಳಿದಂತೆ ಮತ್ತು ಸ್ಥೂಲ ರೇಖಾಚಿತ್ರಗಳನ್ನು ಇಂಜಿನಿಯರಿಂಗ್ ವಿನ್ಯಾಸವಾಗಿ ಬದಲಾಯಿಸಲು ಕ್ರಾರ್ಯ ಪ್ರವೃತ್ತರಾದರು.
ನಂತರ, ತಮ್ಮ ಇಂಜಿನಿಯರ್ ಗಳು ತೋರಿಸಿದ ವಿನ್ಯಾಸಗಳನ್ನು ನೋಡಿದಾಗ ಅಧ್ಯಕ್ಷ ಹೋಂಡಾ ಯಾವಾಗಲೂ ಕೇಳುತ್ತಿದ್ದರು:
“ಇದರಲ್ಲಿ ಯಾವ ಬಿಡಿ ಭಾಗ ಹೊಸತು? ಯಾವ ಬಿಡಿ ಭಾಗ ಇತರ ತಯಾರಾಕರಿಗಿಂತ ವಿಭಿನ್ನವಾಗಿದೆ?”
ಹೀಗೆ ಅವರು ಮಾಡಿದ ಮೊದಲನೇ ಇಂಜಿನ್ ಇತರ ಸಾಂಪ್ರದಾಯಿಕ ಇಂಜಿನ್ ಗಳಿಗಿಂತ ಭಿನ್ನವಾಗಿತ್ತು. ಅದಕ್ಕೆ ಇಟ್ಟ “ಚಿಮಿಣಿ” ಎಂಬ ಹೆಸರು ಇಂದಿಗೂ ಉಪಯೋಗದಲ್ಲಿದೆ. ಹೆಸರೇ ಸೂಚಿಸುವಂತೆ ಹೊಗೆ ನಳಿಗೆಯಂತೆ ಆ ಇಂಜಿನ್ ನ ಪಿಸ್ಟನ್ ನ ಮೇಲ್ಭಾಗ ಮತ್ತು ಸಿಲಿಂಡರ್ ನ ತಲೆಯನ್ನು ಉದ್ದವಾಗಿ ಹೊರಚಾಚುವಂತೆ ವಿನ್ಯಾಸಗೊಳಿಸಲಾಗಿತ್ತು. ಅಲ್ಲದೇ ಸಿಲಿಂಡರ್ ನೊಳಗಿಂದ ಸುಟ್ಟ ಅನಿಲವನ್ನು ಹೊರಹಾಕಿ ತಾಜಾ ಗಾಳಿಯನ್ನು ಎಳೆದು ಕೊಳ್ಳುವ ವ್ಯವಸ್ಥೆ ಸಂಪೂರ್ಣ ವಿಭಿನ್ನವಾಗಿತ್ತು. ಈ ರೀತಿಯ ಇಂಜಿನ್ ಅನ್ನು ಈ ಮೊದಲು ಮೋಟಾರ್ ಸೈಕಲ್ ನಲ್ಲಿ ಬಳಸಿಯೇ ಇರಲಿಲ್ಲ.
ಎರಡಾವರ್ತದ (2-Stroke Engine) ಇಂಜಿನ್ ನ ಕೊರತೆಗಳನ್ನು ನೀಗಿಸುವುದು ಮತ್ತು ಕಾರ್ಯ ಕ್ಷಮತೆಯನ್ನು ಹೆಚ್ಚು ಮಾಡುವುದು ಈ ಇಂಜಿನ್ ನ ಗುರಿಯಾಗಿತ್ತು ಅಂದರೆ ಇಂಧನ ಬಳಕೆಯನ್ನು ತಗ್ಗಿಸಿ, ಯಾಂತ್ರಿಕ ಶಕ್ತಿಯನ್ನು ಹೆಚ್ಚು ಮಾಡುವುದು. ಆದರೆ ಈ ಇಂಜಿನ್ ನ ಅಭಿವೃದ್ಧಿಯನ್ನು ಉತ್ಪಾದನೆಗೂ ಮುನ್ನವೇ ನಿಲ್ಲಿಸಬೇಕಾಯಿತು. ಆಗ ಲಭ್ಯವಿದ್ದ ಮೆಷಿನ್ ಗಳ ಮೂಲಕ ಲೋಹಗಳನ್ನು ಕೆತ್ತಲಾಗುವ ನಿಖರತೆ ಮತ್ತು ಆಗ ಸಿಗುತ್ತಿದ್ದ ಲೋಹ ವಸ್ತುಗಳು ಈ ವಿನ್ಯಾಸದ ಅವಶ್ಯಕತೆಗಳಿಗೆ ಏನೂ ಸಾಲದಾಗಿತ್ತು. ಒಂದಾದ ನಂತರ ಇನ್ನೊಂದು ಸಮಸ್ಯೆಗೆ ಈ ಇಂಜಿನ್ ಸಿಲುಕಿ ಕೊಂಡಿತು.
ಈ ಇಂಜಿನ್ ನ ಇಂಜಿನಿಯರಿಂಗ್ ವಿನ್ಯಾಸದ ರೇಖಾಚಿತ್ರಗಳು, ಮೂಲ ಮಾದರಿಗಳು ಎಲ್ಲವೂ ಇಂದು ಕಾಣೆಯಾಗಿವೆ. ಆದರೆ ೧೯೯೬ರಲ್ಲಿ ಹೋಂಡಾ ಉತ್ಪನ್ನಗಳ ಇತಿಹಾಸದ ವಸ್ತು ಸಂಗ್ರಹಾಲಯಕ್ಕಾಗಿ (Honda ಕಲೆಕ್ಷನ್ ಹಾಲ್ HCH) ಒಂದು ಪ್ರತಿಕೃತಿಯಾಗಿ ಚಿಮಣಿ ಇಂಜಿನ್ ಪುನರ್ಜೀವ ಪಡೆಯಿತು. ಇಂಜಿನ್ ಮರು ಸೃಷ್ಟಿಯ ಜವಾಬ್ದಾರಿ ಹೊತ್ತವರು ಹೋಂಡಾದಲ್ಲಿ ಆಗ ಇಂಜಿನಿಯರ್ ಆಗಿದ್ದ ತಕಾಮಾಸ ಒಂಡಾ. ಆತನ ಪ್ರಕಾರ, ಇವತ್ತಿನ ಮೆಷಿನ್ ಕಾರ್ಯದ ತಂತ್ರಜ್ಞಾನ ಉಪಯೋಗಿಸಿ ಈ ಇಂಜಿನ್ ಅನ್ನು ಕಾರ್ಯ ನಿರ್ವಹಿಸುವಂತೆ ಮಾಡಿದಾಗ ಅದರ ಕಾರ್ಯ ಕ್ಷಮತೆ ಆ ಕಾಲದ ಎರಡಾವರ್ತದ ಇಂಜಿನ್ ಗಳಿಗಿಂತಲೂ ಬಹು ಪಟ್ಟು ಅಧಿಕವಾಗಿತ್ತು, ಅದರಲ್ಲೂ ಒಂಡಾ ಹೇಳುವಂತೆ ಬಹಳ ಕಡಿಮೆ ಇಂಧನ ವ್ಯಯಿಸಿ ಈ ಕ್ಷಮತೆ ಗಳಿಸಿತ್ತು.
ಸೈದ್ಧಾಂತಿಕವಾಗಿ ಇದು ಸರಿಯಾದ ದಿಕ್ಕಾಗಿತ್ತು. ಆದರೆ ಆಗಿನ ಕಾಲಕ್ಕೆ ಇದು ತುಂಬಾ ಮುಂದುವರಿದದ್ದಾದರಿಂದ ವಿಫಲವಾಯಿತು. ಇದೇ ರೀತಿ ಹೋಂಡಾ ಮೋಟಾರ್ ಕಂಪನಿಯಲ್ಲಿ ಮುಂದೆ ಆಗಿಂದಾಗ ಆಗುತ್ತಿತ್ತು. ಇದು ವಿಫಲತೆಯ ಅನುಭವವನ್ನು ತೆಗೆದುಕೊಂಡು ಮುಂದೆ ಅದನ್ನೇ ಬಳಸಿ ಯಶಸ್ವಿಯಾಗುವ ಹೋಂಡಾದ ಮಾರ್ಗವಾಗಿತ್ತು.
ಹೋಂಡಾದ ಮೊದಲ ಉತ್ಪನ್ನ : ಹೋಂಡಾ ಎ-ಟೈಪ್
ಚಿಮಣಿ ಇಂಜಿನ್ ನ ಅಭಿವೃದ್ಧಿ ನಿಂತ ಮೇಲೆ, ಮುಂದೇನು ಎಂಬುದರ ಬಗ್ಗೆ ಹೋಂಡಾ ಕೂಡಲೇ ನಿರ್ಧಾರ ಮಾಡಬೇಕಿತ್ತು. ಮುಂದಿನ ಉತ್ಪನ್ನ ಹೋಂಡಾ ಎ-ಟೈಪ್ ಮಾರುಕಟ್ಟೆಯಲ್ಲಿ ಮಾರಲಾದ ಹೋಂಡಾ ಕಂಪನಿಯ ಮೊದಲನೇ ಅಸಲಿ ಉತ್ಪನ್ನವಾಯಿತು. ಆವಿಷ್ಕಾರಿ ಚಿಮಣಿ ಇಂಜಿನ್ ನ ವಿನ್ಯಾಸಕ್ಕೆ ಹೋಲಿಸಿದಲ್ಲಿ ಇದು ಕೇವಲ ಸಾಂಪ್ರದಾಯಿಕ ಎರಡಾವರ್ತದ ಇಂಜಿನ್ ಆಗಿತ್ತು. ಆದರೆ ಕಾವಶಿಮಾ ಇದರ ಬಗ್ಗೆ ಹೀಗೆ ವಿವರಿಸುತ್ತಾರೆ.
“ತಾಜಾ ಗಾಳಿಯನ್ನು ಒಳಗೆ ಎಳೆದುಕೊಳ್ಳುವ ವ್ಯವಸ್ಥೆ ಸಾಮಾನ್ಯವಾಗಿ ಕಂಡುಬರುವ ಪಿಸ್ಟನ್ ಕವಾಟ(valve) ವನ್ನು ಈ ಇಂಜಿನ್ ಹೊಂದಿರಲಿಲ್ಲ. ಬದಲಿಗೆ ಕ್ರ್ಯಾಂಕ್ ಕೇಸ್ ನ ಪಕ್ಕಕ್ಕೆ ಲಗತ್ತಿಸಲಾದ ತಿರುಗುವ ತಟ್ಟೆಯ ಕವಾಟ ಹೊಂದಿತ್ತು. ಹಾಗಾಗಿ ಕಾರ್ಬ್ಯುರೇಟರ್ ಕೂಡ ಸಿಲಿಂಡರ್ ನ ಹತ್ತಿರವಿರುವ ಬದಲಾಗಿ ಕ್ರ್ಯಾಂಕ್ ಕೇಸ್ ನ ಪಕ್ಕಕ್ಕೇ ಲಗತ್ತಿಸಲಾಗಿತ್ತು. ಆ ಕಾಲಕ್ಕೆ ಇದು ಕ್ರಾಂತಿಕಾರಿಯಾಗಿತ್ತು ಎಂದೇ ಹೇಳಬೇಕು. ಈ ರೀತಿಯ ಐಡಿಯಾವನ್ನು ಉಪಯೋಗಿಸಿದ ಓಲ್ಡ್ ಮ್ಯಾನ್ ಅಸಾಧಾರಣ ಮನುಷ್ಯ ಎಂದು ನಾನು ಯೋಚಿಸಿದೆ.”
ಅಷ್ಟೇ ಅಲ್ಲದೆ, ಕ್ಲಚ್ ಆಗಿ ಕೂಡ ಉಪಯೋಗವಾಗುತ್ತಿದ್ದ ಕೈ ಚಾಲಿತ ಬೆಲ್ಟ್ ಮೂಲಕ ಶಕ್ತಿ ಪ್ರಸಾರ ಮಾಡುವ ಯಾಂತ್ರಿಕ ವ್ಯವಸ್ಥೆಯನ್ನು (transmission mechanism) ಪೇಟೆಂಟ್ ಮಾಡಿಕೊಳ್ಳಲಾಗಿತ್ತು. ಈ ರೀತಿಯ ಸಣ್ಣ ವಿಭಿನ್ನತೆಯೊಂದಿಗೆ ನಿಜವಾದ ಹೋಂಡಾ ಕಂಪನಿಯನ್ನು ಈ ಉತ್ಪನ್ನ ತೋರಿಸುತ್ತಿತ್ತು. ಹೋಂಡಾದ ಮೊದಲ ಉತ್ಪನ್ನವೆನ್ನುವುದೊಂದನ್ನು ಬಿಟ್ಟು, ಎ-ಟೈಪ್ ಬೇರಾವುದೇ ವಿಷಯದಲ್ಲಿ ಗಮನ ಸೆಳೆಯಲಿಲ್ಲ. ಆದರೆ ಇನ್ನೊಂದು ದೃಷ್ಟಿಕೋನದಲ್ಲಿ ನೋಡಿದಾಗ ಎ-ಟೈಪ್ ಹೋಂಡಾ ಕಂಪನಿಯ ಅಸಾಧಾರಣ ಗುಣಗಳನ್ನು ಹೊರ ಹೊಮ್ಮಿಸಿತು.
ಕಾವಶಿಮಾ ಅವರ ಮಾತುಗಳಲ್ಲಿ ಹೇಳಬೇಕೆಂದರೆ “ನಮ್ಮ ಕಾರ್ಯಾಗಾರದಲ್ಲಿ ಆಗ ಎರಕ ಹೊಯ್ಯಲು ಲೋಹದಚ್ಚನ್ನು (die casting) ಬಳಸುತ್ತಿದ್ದೆವು. ಮರಳಿನ ಅಚ್ಚಿನ ಬದಲು ನಾವು ದುಬಾರಿಯಾದ ಲೋಹದಚ್ಚನ್ನು ಹೊಂದಿದ್ದೆವು. ನಾವು ಆಗ ಮಾರುತ್ತಿದ್ದ ಉತ್ಪನ್ನಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಇದು ಲಾಭದಾಯಕವಾಗಲು ಸಾಧ್ಯವೇ ಇರಲಿಲ್ಲ. ಬೇರೆಯವರಾದರೆ ಹೀಗೆ ಮಾಡುವ ಕನಸು ಕೂಡ ಕಾಣುತ್ತಿರಲಿಲ್ಲ. ಆದರೆ ಓಲ್ಡ್ ಮ್ಯಾನ್ “ಏನಾದರು ಆಗಲಿ, ನಾವು ಲೋಹದಚ್ಚನ್ನೇ ಬಳಸೋಣ” ಎಂದು ಒತ್ತಾಯಿಸಿದರು.”
ಹಾಗಾಗಿ ಎ-ಟೈಪ್ ನ ಗುಣಮಟ್ಟ ಅದರ ಯಾಂತ್ರಿಕ ವ್ಯವಸ್ಥೆಗಿಂತಲೂ ಹೆಚ್ಚಾಗಿ ಉತ್ಪಾದನಾ ವಿಧಾನದಿಂದ ಉತ್ಕ್ರಷ್ಟವಾಗಿತ್ತು.
ಉತ್ಪಾದನೆಯ ಕಷ್ಟದ ಅನುಭವಗಳು
ಲೋಹದಚ್ಚನ್ನು ಬಳಸುವುದೆಂದರೆ ಬಹು ಸಂಖ್ಯೆಯಲ್ಲಿ ಉತ್ಪಾದಿಸಬೇಕು. ಆಗ ನಮ್ಮ ಕಚ್ಚಾ ನೆರೆಹೊರೆಯ ಕಾರ್ಯಾಗಾರ ಹೇಗೆ ನೋಡಿದರೂ ರಾಶಿ ಉತ್ಪಾದಿಸುವ ಕಾರ್ಖಾನೆಯಂತೆ ಇರಲಿಲ್ಲ. ಈ ಉತ್ಪಾದನಾ ವಿಧಾನವನ್ನು ಅಳವಡಿಸಿಕೊಂಡದ್ದಕ್ಕಾಗಿ ಕಂಪನಿ ಭವ್ಯತೆಯ ಭ್ರಮೆಲ್ಲಿದೆ ಎಂಬ ಆರೋಪ ಕೇಳಿಬರಬಹುದೆಂದು ಗೊತ್ತಿದ್ದರೂ, ಹೋಂಡಾ ತನ್ನ ಸಾಹಸಮಯ ಪ್ರಯಾಣವನ್ನು ಪ್ರಾರಂಭಿಸಿತು.
ಹೋಂಡಾದ ಏಳನೇ ವರ್ಷದ ಚರಿತ್ರೆ ಈ ಕೆಳಗಿನ ಪ್ಯಾರವನ್ನು ಹೊಂದಿದೆ.
“ಲೋಹದ ಸಿಪ್ಪೆಗಳು ಜಾಸ್ತಿ ಬಾರದಂತೆ ಕಚ್ಚಾ ಸಾಮಗ್ರಿಗಳಿಂದ ನೇರವಾಗಿ ಉತ್ಪನ್ನಕ್ಕೆ ಹೋಗುವ ವಿಧಾನವಾಗಿದ್ದ ಅದು, ಕಡಿಮೆ ಸಾಮಗ್ರಿಗಳನ್ನು ಬಳಸುತ್ತಿತ್ತು ಮತ್ತು ಬೇರೆ ಬೇರೆ ಅವಶ್ಯಕ ಪ್ರಕ್ರಿಯೆಗಳನ್ನು ಕಡಿತಗೊಳಿಸಿ ಆಕರ್ಷಣೀಯ ಉತ್ಪನ್ನವನ್ನು ತಯಾರಿಸುವ ವಿಧಾನವಾಗಿತ್ತು. ಇದು ಅಧ್ಯಕ್ಷ ಹೋಂಡಾ ಅವರ ನಂಬಿಕೆಯಾಗಿತ್ತು.”
ಆ ಕಷ್ಟದ ದಿನಗಳ ಬಗ್ಗೆ ಇಸೊಬೆ ಹೇಳುತ್ತಾರೆ:
“ಆದರ್ಶಗಳು ಮಹತ್ವಾಕಾಂಕ್ಷಿಯಾಗಿದ್ದವು ಆದರೆ ನಮ್ಮ ಹತ್ತಿರ ಹಣವಿರಲಿಲ್ಲ. ನಾವು ಒಬ್ಬ ಲೋಹದಚ್ಚು ತಯಾರಿಕಾ ಸಲಹೆಗಾರನನ್ನು ಭೇಟಿಯಾಗಿ ಅವನಿಂದ ಒಂದು ಅಚ್ಚು ತಯಾರಿಸಲು ಸಾಮಾನ್ಯ ೫೦೦,೦೦೦ ಯೆನ್ ಬೇಕಾಗಬಹುದೆಂದು ಕಂಡುಕೊಂಡೆವು. ನಾವೇ ತಯಾರಿಸುವುದು ಬಿಟ್ಟರೆ ನಮ್ಮ ಮುಂದೆ ಯಾವುದೇ ಆಯ್ಕೆಗಳಿರಲಿಲ್ಲ. ಅಧ್ಯಕ್ಷರ ತಮ್ಮ ಬೆಂಜಿರೋ ಮತ್ತು ಇತರರು ಸೇರಿಕೊಂಡು ಹೇಗೋ ಕಳಪೆ ಉಪಕರಣಗಳಿಂದ ಲೋಹದಚ್ಚನ್ನು ಕೈಯಾರೆ ತಯಾರಿಸಿದೆವು. ಹಾಗಾಗಿ ನಮಗೆ ಅದನ್ನು ಮಾಡಲು ಆಯಿತು. ನಾವು ಯಾರೇ ದೊಡ್ಡ ಲೋಹದಚ್ಚಿನ ತಯಾರಕರನ್ನು ಕೇಳಿದರೂ ಅವರು ಅಜ್ಞಾತವಾದ ಹೋಂಡಾದಂತಹ ಕಂಪನಿಗೆ ಯಾವುದೇ ಗಮನ ಕೊಡುತ್ತಿರಲಿಲ್ಲ.”
ಮೊದ ಮೊದಲ ಮಾಡೆಲ್ ಗಳು ಕೇವಲ ಭಾಗಶಃ ಲೋಹದಚ್ಚಿನಿಂದ ತಯಾರಾಗಿದ್ದವು. ನಿಧಾನವಾಗಿ ಮುಂದಿನ ಮಾಡೆಲಗಳಲ್ಲಿ ಆದಷ್ಟು ಹೆಚ್ಚು ಲೋಹದಚ್ಚಿನ ಭಾಗಗಳು ಹೊಂದುವಂತೆ ಪರಿವರ್ತಿಸಿದೆವು. ಸಿಲಿಂಡರ್ ತಲೆಗಳು, ಸಿಲಿಂಡರ್ ಗಳು, ಕ್ರ್ಯಾಂಕ್ ಕೇಸ್ ಗಳು, ಮತ್ತು ಒಳಭಾಗಗಳಾದ ಕನೆಕ್ಟಿಂಗ್ ರಾಡ್, ತಿರುಗುವ ತಟ್ಟೆ ಕವಾಟಗಳು ಎಲ್ಲವನ್ನು ನಾವು ಲೋಹದಚ್ಚಿನ ಮೂಲಕ ತಯಾರಿಸಿದೆವು. ಓಲ್ಡ್ ಮ್ಯಾನ್ ಹೀಗೆ ಹೇಳುತ್ತಿದ್ದರು “ಕಷ್ಟವನ್ನು ಎದುರಿಸಲೇಬೇಕು ಅಂತಾದರೆ ಮೊದಲೇ ಅದನ್ನು ದಾಟಿ ಬಿಡೋಣ” ಮತ್ತು “ಸಂಪನ್ಮೂಲಗಳ ಕೊರತೆಯಿರುವ ದೇಶದಲ್ಲಿ ಸಿಪ್ಪೆ (Metal Chips) ಹುಟ್ಟುಹಾಕುವ ಕಾರ್ಯಗಳನ್ನು ಜನರು ಮಾಡಬಾರದು. ನಮಗೆ ಬೇಕಾದ ನಿಖರತೆ ನಾವು ಪ್ರಕ್ರಿಯೆಯಲ್ಲಿ ಮೊದಲು ಮಾಡುವ ಕೆಲಸದಲ್ಲೇ ಪಡೆದುಕೊಂಡುಬಿಟ್ಟರೆ ನಂತರದ ಚರಣಗಳಲ್ಲಿ ಕಾಲ, ಶ್ರಮ, ಯಂತ್ರ ಯಾವುದನ್ನೂ ವ್ಯಯಿಸುವುದು ಬೇಡ ಅಲ್ಲವೇ?” ಈಗ ಯೋಚಿಸಿದರೆ ಅವರು ಆ ಕಾಲದಲ್ಲೇ ಇವತ್ತಿನ ದಿನವನ್ನು ಎದುರು ನೋಡಿದ್ದರು.
ನವೆಂಬರ್ ೧೦೪೭ರಲ್ಲಿ ಹೋಂಡಾ ಎ-ಟೈಪ್ ನ ಉತ್ಪಾದನೆ ಪ್ರಾರಂಭವಾಯಿತು ಮತ್ತು ಮಾರಾಟವು ಶುರುವಾಯಿತು. ಮೊದಲಿನ ಮಾರ್ಪಡಿಸಿದ ಜನರೇಟರ್ ಇಂಜಿನ್ ಹೊಂದಿದ್ದ ಗಾಡಿಗಳು ಟೀ ಕ್ಯಾನಿಸ್ಟರ್ ಎಂದು ಕರೆಯಲಾಗುತ್ತಿದ್ದ ಕೊಳವೆಯಂತ ಇಂಧನ ಟ್ಯಾಂಕ್ ಹೊಂದಿತ್ತು. ಆದರೆ ಎ-ಟೈಪ್, ಕಣ್ಣೀರಿನ ಆಕೃತಿಯ ಅಲ್ಯೂಮಿನಿಯಂ ಲೋಹದಿಂದ ಮಾಡಿದ ಇಂಧನ ಟ್ಯಾಂಕ್ ಹೊಂದಿತ್ತು. ಈ ಸುಂದರ ಇಂಧನ ಟ್ಯಾಂಕ್ ನ ಐಡಿಯಾ ಎಂಷು ಕೆಗೊಕಿನ್ ಎಂಬ ಕಂಪನಿ ತಯಾರು ಮಾಡುತ್ತಿದ್ದ ಅಲ್ಯೂಮಿನಿಯಂ ಬಿಸಿ ನೀರಿನ ಬಾಟಲಿಯಿಂದ ಬಂದಿತ್ತು. ಹೋಂಡಾ ಆ ಕಂಪನಿಯಿಂದ ಎ-ಟೈಪ್ ನ ಇಂಧನ ಟ್ಯಾಂಕ್ ಅನ್ನು ಆರ್ಡರ್ ಮಾಡಿತ್ತು. ಟ್ಯಾಂಕ್ ಮುಚ್ಚಳದ ಬಾಯಿ, ಟ್ಯಾಂಕ್ ಮತ್ತು ಅದನ್ನು ಫ್ರೇಮ್ ನ ಮೇಲೆ ಭದ್ರ ಪಡಿಸುವ ಬ್ರಾಕೆಟ್ ಗಳನ್ನು ಒಂದೇ ಭಾಗವಾಗಿ ಮಾಡಿಬಿಡಬಹುದಾಗಿತ್ತು. ಹೀಗಿರುವುದರಿಂದ ಟೀ ಕ್ಯಾನಿಸ್ಟರ್ ಟ್ಯಾಂಕ್ ಗಳಿಗಿಂತ ಕಡಿಮೆ ಶ್ರಮದಲ್ಲಿ ಈ ಹೊಸ ಟ್ಯಾಂಕ್ ಅನ್ನು ಮಾಡಬಹುದಿತ್ತು. ಅಧ್ಯಕ್ಷ ಹೋಂಡಾರವರಿಗೆ ಟ್ಯಾಂಕ್ ನ ಆಕರ್ಷಣೀಯ ಹೊರ ವಿನ್ಯಾಸ, ಸ್ಟೈಲ್ ಕೂಡ ಬಹಳ ಮುಖ್ಯವಾಗಿತ್ತು.
ಅತ್ಯಲ್ಪ ಸಮಯದಲ್ಲೇ ಕಾರ್ಖಾನೆ ಮತ್ತು ಉತ್ಪಾದನಾ ವಿಧಾನದಲ್ಲೂ ಹೊಸ ಸ್ವಂತ ಐಡಿಯಾಗಳು ಬರಲು ಪ್ರಾರಂಭವಾದವು. ಫೆಬ್ರುವರಿ ೧೯೪೮ರಲ್ಲಿ ಇಂಜಿನ್ ಏಕೀಕರಣ ಕಾರ್ಖಾನೆಯೊಂದನ್ನು ನೊಗುಚಿ ಚೊ ನಲ್ಲಿ ನಿರ್ಮಿಸಲಾಯಿತು. ಇಲ್ಲಿ ಅಧ್ಯಕ್ಷ ಹೋಂಡಾರ ಪರಿಕಲ್ಪನೆಯಂತೆ ಕಂಪನಿಯ ಮೊದಲನೇ ಕನ್ವೇಯರ್ ಬೆಲ್ಟ್ ಇತ್ತು. ಕನ್ವೇಯರ್ ಬೆಲ್ಟ್ ಬೇಕಾಗುವಷ್ಟು ಪ್ರಮಾಣದಲ್ಲಿ ಕಾರ್ಮಿಕರೂ ಇರಲಿಲ್ಲ, ಉತ್ಪಾದನಾ ಸಂಖ್ಯೆಯೂ ಜಾಸ್ತಿ ಇರಲಿಲ್ಲ. ಹೇಗೆ ಈ ಮೊದಲು ಲೋಹದಚ್ಚಿನ ವಿಧಾನಕ್ಕೆ ಬದಲಾಗಿದ್ದರೋ ಅದೇ ರೀತಿ ಹೋಂಡಾದ ಭವಿಷ್ಯದ ಕನಸು ಈ ಸಮಯದಲ್ಲಿ ನಿಧಾನವಾಗಿ ಕುಡಿಯೊಡೆಯುತ್ತಿತ್ತು.
ಅದಲ್ಲದೇ ಈ ಕನ್ವೇಯರ್ ಬೆಲ್ಟ್ ಲೈನ್ ಅನ್ನು ಕೆಲಸದ ಶ್ರಮ ಕಡಿಮೆ ಮಾಡಲು, ಭಾಗಗಳನ್ನು ಸರಿಸುವ ದೂರವನ್ನು ಕಡಿಮೆಗೊಳಿಸಲು ಮತ್ತು ಕಡಿಮೆ ಜಾಗವನ್ನು ಆಕ್ರಮಿಸುವಂತೆ ರಚಿಸಲಾಗಿತ್ತು. ಈ ರೀತಿಯ ಅಚ್ಚುಕಟ್ಟಾದ ಏಕೀಕರಣ ಮಾಡುವ ಸಾಲು (Assembly Line) ಮೊದಲೆಂದೂ ಕಂಡಿರಲಿಲ್ಲ.
ಇದೆಲ್ಲ ಇದ್ದರೂ ಉದ್ಯೋಗಿಗಳಿಗೆ ಕೆಲಸ ತುಂಬಾ ಜಾಸ್ತಿ ಇತ್ತು. ಲೋಹದಚ್ಚ್ಚಿಗೆ ಎರಕ ಹೊಯ್ದು ತಯಾರಿಸಲಾದ ಇಂಧನ ಟ್ಯಾಂಕ್ ಮತ್ತು ಇತರ ಬಿಡಿ ಭಾಗಗಳು ಸೂಕ್ಷ್ಮ ರಂಧ್ರಗಳಿಂದ (Pin Hole) ಕೂಡಿ ದೋಷಪೂರಿತವಾಗಿದ್ದವು. ಪೆಟ್ರೋಲ್ ಮತ್ತು ಕೀಲೆಣ್ಣೆ ಅವುಗಳ ಮೂಲಕ ಸೋರದಂತೆ ತಡೆಯಲು ಉದ್ಯೋಗಿಗಳು ಜಪಾನೀ ಮೆರುಗೆಣ್ಣೆಯ (Japanese Lacquer) ಲೇಪನವನ್ನು ಕೊಡಬೇಕಾಯಿತು. ಈ ದ್ರವ್ಯ ಹೆಚ್ಚಿನವರಲ್ಲಿ ತೀವ್ರ ಅಲರ್ಜಿ ಉಂಟು ಮಾಡಿತು.
ಇಸೊಬೆ ನಗುತ್ತ ಆ ಅನುಭವವನ್ನು ಹೀಗೆ ಹೇಳಿದರು:
“ಆ ಕಾಲದಲ್ಲಿ ಜಪಾನೀ ಮೆರುಗೆಣ್ಣೆಯು ಬಹಳ ಅಗ್ಗದ ದರದಲ್ಲಿ ದೊರಕುತ್ತಿತ್ತು. ನಾವು ನಮ್ಮ ಕೈಯಾರೆ ಅದನ್ನು ಇಂಧನ ಟ್ಯಾಂಕ್ ನ ಹೊರ ಭಾಗಕ್ಕೂ , ಕ್ರ್ಯಾಂಕ್ ಕೇಸ್ ನ ಒಳಭಾಗಕ್ಕೂ ಹಚ್ಚುತ್ತಿದ್ದೆವು. ನಾವು ತಯಾರಿಕಾ ಹಂತಗಳನ್ನು ಕಡಿಮೆ ಮಾಡಲು ಹೋಗಿ ಜಾಸ್ತಿ ಕೆಲಸ ಮಾಡುವಂತಾಗಿತ್ತು. ಅದರ ಮೇಲೆ ಮೆರುಗೆಣ್ಣೆಯ ವಿಷ ಬೇರೆ.”
ಕನ್ವೇಯರ್ ಸಾಲು ಕೂಡ ಎಣಿಸಿದ ರೀತಿಯಲ್ಲಿ ಸರಾಗವಾಗಿ ಕೆಲಸ ಮಾಡಲಿಲ್ಲ. ತಯಾರಿಕಾ ಪ್ರಕ್ರಿಯೆಯಲ್ಲಿ ಹಂತಗಳನ್ನು ಕಡಿಮೆ ಮಾಡಲು ಇದನ್ನು ರಚಿಸಿದ್ದರೂ ಲೋಹದಚ್ಚಿನ ಮೂಲಕ ತಯಾರಾದ ಭಾಗಗಳು ಸರಿಯಾಗಿ ಜೋಡಣೆಯಾಗದ ಕಾರಣ ಕೈಯಿಂದ ಅವನ್ನು ಜೋಡಿಸಬೇಕಾಗಿ ಬಂತು. ಅಧ್ಯಕ್ಷ ಹೋಂಡಾ ಕಾರ್ಯಾಗಾರಕ್ಕೆ ಬಂದಾಗ ಯಾರಾದರೂ ಈ ರೀತಿಯ ಕೆಲಸ ಮಾಡುವುದನ್ನು ನೋಡಿದರೆ ಬಹಳ ಸಿಟ್ಟಾಗುತ್ತಿದ್ದರು.
“ಬಿಡಿ ಭಾಗಗಳನ್ನು ಉಜ್ಜಿ ನಯಮಾಡುವ ಅರ (File) ಗಳನ್ನೇನಾದರೂ ಅವರು ನೋಡಿದರೆ ಕೂಡಲೇ ಅವರ ಸಿಟ್ಟು ನೆತ್ತಿಗೇರಿಬಿಡುತ್ತಿತ್ತು. ‘ಏಕೆ ಏಕೀಕರಣ ಸಾಲು ನಿಂತಿದೆ! ಈ ಭಾಗ ಬರೀ ಕಳಪೆಯಾಗಿದೆ, ಬಿಸಾಡಿ ಇದನ್ನಿಲ್ಲಿಂದ’ ಎಂದು ರೇಗಾಡುತ್ತಿದ್ದರು” ಇಸೊಬೆ ನೆನಪು ಮಾಡಿಕೊಳ್ಳುತ್ತಾರೆ. “ ಆದರೆ ನಾವು ಅವರು ಹೇಳಿದಂತೆ ಭಾಗಗಳನ್ನು ಎಸೆದರೆ ಎಲ್ಲ ಭಾಗಗಳನ್ನೂ ಎಸೆಯಬೇಕಾಗಿತ್ತು. ಅವರ ಪ್ರಕಾರ ಮೊದಲೊಮ್ಮೆ ಎಲ್ಲವನ್ನೂ ಹೊಂದಿಸಿ ಬಿಟ್ಟರೆ, ಯಾರೇ ಒಬ್ಬ ಹೊಸ ಉದ್ಯೋಗಿ ಬಂದರೂ ಕೂಡ ತಕ್ಷಣ ಭಾಗಗಳನ್ನು ಜೋಡಿಸಿಬಿಡಬಹುದು. ಆದರೆ ಆ ಹಂತ ತಲುಪಲು ಇನ್ನೂ ಕೆಲವು ಸಮಯ ಬೇಕಾಗಿತ್ತು. ಅವರಿಗೆ ಇದು ಗೊತ್ತಿದ್ದರೂ ಕಣ್ಣೆದುರಿಗೇ ಹೀಗೆ ಆಗುವುದನ್ನು ನೋಡಿ ಸಹಿಸಲಾರದೆ ಸಿಟ್ಟಾಗುತ್ತಿದ್ದರು.
ಇಸೊಬೆ ಮುಂದುವರಿಸುತ್ತಾರೆ, “ ಬಿಡಿ ಭಾಗಗಳ ಏಕೀಕರಣ ಮಾಡುವ ಯಮಶೀತೋ ಕಾರ್ಖಾನೆಯಲ್ಲಿ ಕೂಡ ಹೀಗೆ ನೆಡೆಯುತ್ತಿತ್ತು. ‘ಓಲ್ಡ್ ಮ್ಯಾನ್ ಬರುತ್ತಿದ್ದಾರೆ!’ ಇದು ವಿಮಾನ ದಾಳಿಯ ಎಚ್ಚರಿಕೆಯ ಘಂಟೆಯಂತೆ. ಕೂಡಲೇ ನಾವು ಕೆಲಸ ಮಾಡುತ್ತಿದ್ದ ಅರ, ಸುತ್ತಿಗೆಗಳು ಮತ್ತು ಇತರ ಉಪಕರಣಗಳನ್ನು ಅಡಗಿಸಿಟ್ಟು, ಕನ್ವೇಯರ್ ಸಾಲನ್ನು ಚಲಿಸಲು ಓಡುತ್ತಿದ್ದೆವು.
ಅಧ್ಯಕ್ಷ ಹೋಂಡಾರವರು ಸಹ ಕೈ ಉಪಕರಣದ ಕೆಲಸದಲ್ಲಿ ನಿಸ್ಸೀಮರಾಗಿದ್ದರು. ಕುಶಲಕರ್ಮಿಯಾಗಿ ಅಸಾಧಾರಣ ಕೌಶಲ್ಯ ಹೊಂದಿದ್ದರು. ಆದರೆ ಅವರೇ ಈ ರೀತಿ ಗೊಣಗುತ್ತಿದ್ದರು:
“ಬಿಡಿಭಾಗಗಳನ್ನು ಜೋಡಿಸಿ ಉತ್ಪನ್ನ ತಯಾರು ಮಾಡಲು ನಮಗೆ ವಿಶೇಷ ಕೌಶಲ್ಯ ಮತ್ತು ತಂತ್ರಗಳು ಬೇಕಾದರೆ ಅದು ಒಳ್ಳೆಯದಲ್ಲ. ಕಾರ್ಖಾನೆಯ ಕಾರ್ಮಿಕರು ಮತ್ತು ವಿತರಕರಲ್ಲಿರುವ (Dealers) ದುರಸ್ತಿಗಾರರೆಲ್ಲರೂ ನನ್ನ ಹಾಗೆ ಇರುವುದಿಲ್ಲ. ಒಬ್ಬ ಪಳಗಿದ ಕೈಯ ಸ್ಪರ್ಶ ಬೇಕಾಗುವಂತೆ ಯಾವುದನ್ನೂ ಮಾಡಬೇಡಿ.”
“ಆ ದಿನಗಳಲ್ಲಿ ಓಲ್ಡ್ ಮ್ಯಾನ್ ಬಾಯಿಯಿಂದ ‘ಇದು ನನ್ನ ತತ್ವ’ ಎಂದು ದೊಡ್ಡ ಮಾತುಗಳು ಬರುತ್ತಿರಲಿಲ್ಲ.” ಕಾವಶಿಮಾ ನೆನೆಸಿಕೊಳ್ಳುತ್ತಾರೆ. “ಆಗ ನಾವು ಅವರ ಮಾತುಗಳನ್ನು ಇದು ತತ್ವ ಎಂದು ಯಾವಾಗಲೂ ಕೇಳಿದ್ದಿಲ್ಲ. ಆದರೆ ಈಗ ಆಲೋಚಿಸಿದರೆ ಅವರು ಅಂದು ಹೇಳಿದ್ದ ಮಾತುಗಳೇ ಹೋಂಡಾ ಕಂಪನಿಯ ವಿಚಾರಧಾರೆಯ ಮೂಲವಾಗಿತ್ತು”
ಕಾವಶಿಮಾ ನೆನಪಿಸಿಕೊಳ್ಳುತ್ತಾರೆ:
“ಕೂಗಾಟ ರೇಗಾಟ ಇವು ಓಲ್ಡ್ ಮ್ಯಾನ್ ರ ಅಪ್ಪ್ರೆಂಟೀಸ್ ಗಳನ್ನು ನಿಭಾಯಿಸುವ ಹಳೆಯ ಶೈಲಿಯಾಗಿತ್ತು. ಅವರು ಆಡಿದ ಮಾತುಗಳು ಮಾತ್ರ ಒಬ್ಬ ಸಾಂಪ್ರದಾಯಿಕ ಕುಶಲಕರ್ಮಿಯ ಮನಸ್ಥಿತಿಯ ವಿರುದ್ಧವಾಗಿತ್ತು. ಅದು ಒಬ್ಬ ಆಧುನಿಕ ಮ್ಯಾನೇಜರ್ ಆಡುವ ಮಾತಿನಂತಿತ್ತು. ಒಳ್ಳೆಯದೋ ಕೆಟ್ಟದ್ದೋ ಇಂತಹ ತದ್ವಿರುದ್ಧದ ವ್ಯಕ್ತಿತ್ವ ಸೊಇಚಿರೊ ಹೋಂಡಾ ಅವರದ್ದು. ನಾನು ಯಾವಾಗಲೂ ಅಂದುಕೊಳ್ಳುತ್ತಿದ್ದೆ ಮೂರ್ಖ ನಾನು! ಅವರನ್ನು ಒಪ್ಪದೇ ಇರಲು ಸಾಧ್ಯವೇ ಇಲ್ಲ. ಆ ರೀತಿಯ ಪ್ರಭಾವ ಅವರು ಹೊಂದಿದ್ದರು. ಅವರನ್ನು ಹಿಡಿಯಲು ಪ್ರಯತ್ನ ಮಾಡುತ್ತ ನಾನು ಅಲ್ಲಿಯೇ ಉಳಿದೆ.”