ಪರಿಚಯ
ಇಮ್ಯಾನುಯೆಲ್ ಕಾಂಟ್ ಮಹಾನ್ ಪಾಶ್ಚಿಮಾತ್ಯ ತತ್ವಜ್ಞಾನಿ. ಜರ್ಮನಿಯ ತತ್ವಜ್ಞಾನಿ ಎಂದು ಗುರುತಿಸಲ್ಪಟ್ಟರೂ ಆತ ಹುಟ್ಟಿ ಬೆಳೆದದ್ದು , ಪ್ರಶ್ಯ ದ ಕೋನಿಗ್ಸ್‌ಬರ್ಗ್ (ಈಗ ರಷ್ಯಾದಲ್ಲಿದೆ) ಎಂಬಲ್ಲಿ. ಜ್ಜ್ಞಾನ ಶಾಸ್ತ್ರ, ನೀತಿ ಶಾಸ್ತ್ರ, ತತ್ವ ಮೀಮಾಂಸೆ ಮತ್ತು ಸೌಂದರ್ಯದ ಬಗ್ಗೆ ಇವನ ಚಿಂತನೆಗಳು ತದನಂತರದ ತತ್ವಜ್ಞಾನದ ಮೇಲೆ ಅತ್ಯಂತ ಪ್ರಭಾವ ಬೀರಿದವು. ಪಾಶ್ಚಿಮಾತ್ಯ ಜ್ಞಾನೋದಯದ ಅಗ್ರಗಣ್ಯ ಚಿಂತಕ ಮತ್ತು ಸಾರ್ವಕಾಲಿಕ ಶ್ರೇಷ್ಠ ತತ್ವಜ್ಞಾನಿಯಾದ ಕಾಂಟ್, ತನ್ನ ಜೀವಮಾನವಿಡೀ ಹುಟ್ಟಿದಲ್ಲಿಂದ 30-40 ಕಿಲೋಮೀಟರ್ ಸುತ್ತಳತೆ ಬಿಟ್ಟು ಜಾಸ್ತಿ ದೂರ ಹೋಗಲಿಲ್ಲ ಎನ್ನುವುದು ವಿಶೇಷ. ತತ್ವಜ್ಞಾನದ ಪ್ರಾಧ್ಯಾಪಕನಾಗಿ ಬಹಳ ಶಿಸ್ತಿನ ಜೀವನ ಕ್ರಮಕ್ಕೆ ಹೆಸರುವಾಸಿಯಾದವನು. ಅವನ ಊರಿನ ಜನ ಅವನ ದಿನಚರಿಯನ್ನು ನೋಡಿ ತಮ್ಮ ಗಡಿಯಾರದ ಗಂಟೆಯನ್ನು ಹೊಂದಿಸಿಕೊಳ್ಳುತ್ತಿದ್ದರು ಎಂಬ ಪ್ರತೀತಿಯಿದೆ.
17-18 ನೇ ಶತಮಾನದ ಯೂರೋಪ್ ನಲ್ಲಾದ ಬೌದ್ಧಿಕ ಮತ್ತು ತಾತ್ವಿಕ ಚಳುವಳಿಯನ್ನು “Age of Enlightenment” ಎಂದು ಗುರುತಿಸುತ್ತಾರೆ. ವೈಜ್ಞಾನಿಕ ಕ್ರಾಂತಿಯ ಬೆನ್ನ ಹಿಂದೆಯೇ ಸಂಭವಿಸಿದ ಈ ಚಳುವಳಿಯಲ್ಲಿ ದೇವರು, ಧರ್ಮ, ಆಲೋಚನೆ, ಪ್ರಕೃತಿ ಮತ್ತು ಮಾನವೀಯತೆಗೆ ಸಂಬಂಧಿಸಿದ ವಿಚಾರಗಳನ್ನು ವಿಶ್ವ ದೃಷ್ಟಿಕೋನವಾಗಿ ಸಂಯೋಜಿಸಲಾಯಿತು, ಅದು ಪಶ್ಚಿಮದಲ್ಲಿ ವ್ಯಾಪಕವಾದ ಒಪ್ಪಿಗೆಯನ್ನು ಪಡೆದುಕೊಂಡಿತು ಮತ್ತು ಕಲೆ, ತತ್ವಶಾಸ್ತ್ರ ಮತ್ತು ರಾಜಕೀಯದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳನ್ನು ಪ್ರೇರೇಪಿಸಿತು.
1784 ರಲ್ಲಿ ಪ್ರಕಟಗೊಂಡ ‘ಜ್ಞಾನೋದಯ ಎಂದರೇನು ಎಂಬ ಪ್ರಶ್ನೆಗೆ ಉತ್ತರ’ ಎಂಬ ಕಾಂಟ್ ನ ಪ್ರಬಂಧ ಯುರೋಪಿಯನ್ ಜ್ಞಾನೋದಯದ ವ್ಯಾಖ್ಯಾನಕ್ಕೆ ಪ್ರಸಿದ್ಧವಾಗಿದೆ. ನನ್ನ ಪ್ರಕಾರ ಈ ಪ್ರಬಂಧ ಇಂದಿನ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಕಾಂಟ್ ಕ್ರೈಸ್ತ ಧರ್ಮ ಮತ್ತು ಆಗಿನ ರಾಜಕೀಯವನ್ನು ಗುರಿಯಾಗಿಸಿ ಕೆಲವು ವಿಷಯಗಳನ್ನು ವಿವೇಚಿಸಿದರೂ, ಇದು ಎಲ್ಲ ಧರ್ಮಗಳಿಗೂ, ನಮ್ಮ ಕಾಲದ ರಾಜಕೀಯಕ್ಕೂ ಸುಲಭವಾಗಿ ಅನ್ವಯಮಾಡಿಕೊಳ್ಳಬಹುದು.
ಮಾನಸಿಕ ಊರುಗೋಲನ್ನು ಉಪಯೋಗಿಸದೆ ಅಂದರೆ ಬೇರೆಯವರ ನಿರ್ದೇಶನವಿಲ್ಲದೆ, ಯಾವುದೇ ವಿಷಯದಲ್ಲಾದರೂ ತಮ್ಮದೇ ಸ್ವತಂತ್ರ ಮತ್ತು ತರ್ಕಬದ್ಧ ಯೋಚನೆಗಳನ್ನು ರೂಪಿಸಿಕೊಂಡು ನೆಡೆಯಬೇಕೆಂಬ ಸಂದೇಶ ನೀಡುವ ಪ್ರಬಂಧದ ಆಶಯ ಈ ನನ್ನ ಅನುವಾದಕ್ಕೆ ಸ್ಪೂರ್ತಿ. ಮೂಲತಃ ಜರ್ಮನ್ ಭಾಷೆಯಲ್ಲಿ ಬರೆದ ಈ ಪ್ರಭಂದದ ಕೆಲವು ಆಂಗ್ಲ ಅನುವಾದಗಳನ್ನು ಬಳಸಿಕೊಂಡು ಅದರ ಅರ್ಥ ಮತ್ತು ಆಶಯವನ್ನು ವಸ್ತುನಿಷ್ಠವಾಗಿ ಕನ್ನಡದಲ್ಲಿ ಪ್ರಸ್ತುತಪಡಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ.
ಹಿನ್ನೆಲೆ
“ಮದುವೆಗಳನ್ನು ನಡೆಸುವಾಗ ಇನ್ನು ಮುಂದೆ ಪುರೋಹಿತರನ್ನು (ಪಾದ್ರಿಗಳನ್ನು) ತೊಡಗಿಸದಿರುವ ಪ್ರಸ್ತಾಪ.” ಇದು 1783 ರಲ್ಲಿ ಜೋಹಾನ್ ಬೈಸ್ಟರ್ ತಾನು ಸಂಪಾದಿಸುತ್ತಿದ್ದ ಬರ್ಲಿನಿಸ್ಚೆ ಮೊನಾಟ್ಸ್‌ಸ್ಕ್ರಿಫ್ಟ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ ಅನಾಮಧೇಯ ಪ್ರಬಂಧದ ಶೀರ್ಷಿಕೆ. ಹೇಳಿಕೇಳಿ ಇದು ಯುರೋಪಿನ ಜ್ಞಾನೋದಯ ವೆಂದೇ ಗುರುತಿಸಲ್ಪಡುವ ಕಾಲದ ಮಧ್ಯ. ಜ್ಞಾನೋದಯ ಚಿಂತನೆಯ ತುತ್ತ ತುದಿ. ಎಲ್ಲದನ್ನೂ , ಸ್ಥಾಪಿತ ಧಾರ್ಮಿಕ ಸಂಪ್ರದಾಯಗಳನ್ನೂ ಸೇರಿ ತರ್ಕಬದ್ಧ ವಾಗಿ ಪರಿಕಿಸಿ ವಿವೇಚಿಸಿ ಹೊಸ ದೃಷ್ಟಿಕೋನಗಳನ್ನು ಪಡೆದುಕೊಳ್ಳುತ್ತಿದ್ದ ದಿನಗಳವು. ಸಹಜವಾಗಿಯೇ ಎರಡು ವ್ಯಕ್ತಿಗಳು ಬಾಳಿನಲ್ಲಿ ಒಂದಾಗಿ ಜೀವಿಸುವ ನಿರ್ಧಾರದ ಒಪ್ಪಂದ ಒಂದು ಧಾರ್ಮಿಕ ಸಮಾರಂಭ ಏಕೆ ಆಗಬೇಕು?, ಸರ್ಕಾರವೊ ಅಥವಾ ನ್ಯಾಯಾಲಯದ ಅಡಿಯಲ್ಲಿ ಇದೇಕೆ ಆಗಬಾರದು ಎಂಬ ಚಿಂತನೆ ಮೂಡಿ ಬಂದರೆ ಆಶ್ಚರ್ಯವೇನಿಲ್ಲ .
ಆದರೆ ಆಗಿನ ಕಾಲದ ಒಬ್ಬ ಪಾದ್ರಿಗೆ ಇದು ಸರಿಯಾಗಿ ತೋರಲಿಲ್ಲ. ಸ್ವತಃ ಜ್ಞಾನೋದಯದ ಚಿಂತಕನಾಗಿದ್ದರೂ ಈ ರೀತಿ ಚರ್ಚ್ ನ ಅಧಿಕಾರದ ಮೇಲೂ ಜ್ಞಾನೋದಯದ ಹೆಸರಿನಲ್ಲಿ ಹೀಗೆ ಸಂದೇಹ ಪಡುವುದು ಯಾಕೋ ಮಿತಿ ಮೀರಿದ ಬೆಳವಣಿಗೆ ಅಂತ ಅವನಿಗೆ ಅನ್ನಿಸಿತು. ಅವನ ಹೆಸರು ರೆವೆರೆಂಡ್ ಫ್ರೆಡೆರಿಕ್ ಜೋಲ್ನೆರ್. ಆತ ಅದೇ ಪತ್ರಿಕೆಯಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ. “ಜ್ಞಾನೋದಯ ಎಂದರೇನು?” ಅಲ್ಲ, ನಿಜವಾಗಿಯೂ ಈ ರೀತಿ ಎಲ್ಲ ಕಡೆಗೂ ತಮ್ಮ ಚಿಂತನೆಗಳನ್ನು ಹರಿಸಿ ಎಲ್ಲ ವ್ಯವಸ್ಥೆಗಳಲ್ಲಿ ಹುಳುಕು ಹುಡುಕುತ್ತಿರುವ ಜ್ಞಾನೋದಯದ ಚಿಂತಕರು ಮಾಡಲು ಹೊರಟಿರುವುದೇನು ಎಂದು ಅವನಿಗೆ ಅನ್ನಿಸಿ ಹಾಗಾದರೆ ಜ್ಞಾನೋದಯ ಎಂದರೇನು? ಎಂಬ ಪ್ರಶ್ನೆ ಕೇಳಿದ. ತಮ್ಮ ಮುಂದಿರುವ ಪ್ರಶ್ನೆಗೆ ಉತ್ತರಿಸಲಾಗದೆ ಇದ್ದಾಗ ಪ್ರಶ್ನೆಯನ್ನೇ ಬೇರೆ ಮಾಡಿ ಅದರತ್ತ ಗಮನ ಹರಿಸುವಂತೆ ಮಾಡುವ ಉಪಾಯದಂತೆ ಇದು ತೋರುತ್ತದೆ.
ಈ ಪ್ರಶ್ನೆ ತುಂಬ ಜನಪ್ರಿಯವಾಯಿತು, ಅಂದರೆ ವೈರಲ್ ಆಯಿತು. ಎಲ್ಲೆಡೆಯಿಂದ ಇದಕ್ಕೆ ಉತ್ತರಗಳು ಬರಲಾರಂಭಿಸಿದವು. ಸಮಾಜದ ಗಣ್ಯರು, ಬುದ್ಧಿಜೀವಿಗಳೂ ಈ ಪ್ರಶ್ನೆಗೆ ಉತ್ತರ ಬರೆದರು ಆದರೆ ಯಾವ ಉತ್ತರವೂ ಕಾಂಟ್ ಬರೆದ ಉತ್ತರಕ್ಕಿಂತ ಜನಪ್ರಿಯವೂ, ಪ್ರಭಾವಶಾಲಿಯೂ ಆಗಿರಲಿಲ್ಲ.
What is enlightenment? ಎಂಬ ಇಮ್ಯಾನುಯೆಲ್ ಕಾಂಟ್ ನ ಪ್ರಬಂಧದ ಅನುವಾದ
ಜ್ಞಾನೋದಯವೆಂದರೆ ಸ್ವಯಂ ವಿಧಿತ ಅಪ್ರಭುದ್ಧತೆಯಿಂದ ಮನುಷ್ಯನ ಬಿಡುಗಡೆ. ಅಪ್ರಭುದ್ದತೆ ಎಂದರೆ ಬೇರೆಯವರ ನಿರ್ದೇಶನವಿಲ್ಲದೆ ಮನುಷ್ಯ ತನ್ನದೇ ತಿಳುವಳಿಕೆಯನ್ನು ಉಪಯೋಗಿಸಲು ಅಸಮರ್ಥನಾಗಿರುವುದು. ಈ ಅಪ್ರಭುದ್ಧತೆ ಸ್ವಯಂವಿಧಿತ ಯಾವಾಗ ಆಗುತ್ತದೆಂದರೆ ಈ ಅಪ್ರಭುದ್ಧತೆಗೆ ಕಾರಣ ಬೇರೆಯವರ ನಿರ್ದೇಶನವಿಲ್ಲದೆ ಸ್ವಂತ ತಿಳುವಳಿಕೆ ಉಪಯೋಗಿಸಲು ತೋರುವ ಆಲಸ್ಯ ಮತ್ತು ಅಧೈರ್ಯವೇ ಹೊರತು ಅದರ ಕೊರತೆಯಿಂದಲ್ಲ. ಸಾಪೇರೆ ಆದೆ! (ಲ್ಯಾಟಿನ್ ನಲ್ಲಿ – ತಿಳಿಯಲು ಧೈರ್ಯ ತೋರಿಸಿ) ನಿಮ್ಮದೇ ಸ್ವಂತ ತಿಳುವಳಿಕೆ ಉಪಯೋಗಿಸಲು ಧೈರ್ಯ ತೋರಿ. ಇದು ಜ್ಞಾನೋದಯದ ಗುರಿ.
ಪ್ರಕೃತಿಯು ಬೇರೆಯವರ ನಿರ್ದೇಶನದಿಂದ ಮುಕ್ತಿಗೊಳಿಸಿದ ಮೇಲೆಯೂ (ಅಪ್ರಾಪ್ತತೆಯಿಂದ) ಮಾನವಕುಲದ ಹೆಚ್ಚಿನ ಭಾಗ ಸಂತೋಷದಿಂದ ಜೀವನವಿಡೀ ಅಪ್ರಭುದ್ಧರಾಗಿಯೇ(ಅಪ್ರಾಪ್ತ ವಯಸ್ಕರಾಗಿ ) ಉಳಿಯಲು ಕಾರಣವೇನೆಂದರೆ ಅವರ ಆಲಸ್ಯ ಮತ್ತು ಹೇಡಿತನ. ಇದರಿಂದ ಬೇರೆಯವರು ಸುಲಭವಾಗಿ ಅವರ ಶಿಕ್ಷಕ-ರಕ್ಷಕರಾಗಲು(guardian) ಸಾಧ್ಯವಾಗುತ್ತದೆ. ಮಕ್ಕಳಾಗಿಯೇ ಇರಲು ಎಷ್ಟು ಸುಲಭ. ನನಗೆ ತಿಳುವಳಿಕೆ ನೀಡಲು ಒಂದು ಪುಸ್ತಕವಿದ್ದರೆ, ನನ್ನ ಆತ್ಮ ಸಾಕ್ಷಿಯನ್ನು ರೂಪಗೊಳಿಸುವ ಆಧ್ಯಾತ್ಮಿಕ ಗುರು ಇದ್ದರೆ, ನನಗಾಗಿ ಪಥ್ಯವನ್ನು ನಿರ್ಧರಿಸುವ ವೈದ್ಯರೊಬ್ಬರಿದ್ದರೆ ಹೀಗೆ ಇನ್ನೂ ಇತ್ಯಾದಿ., ಆಗ ನಾನು ಕಷ್ಟಪಡುವ ಅಗತ್ಯವೇ ಇಲ್ಲ. ಯಾವುದೇ ಯೋಚನೆ ಮಾಡುವುದೂ ಬೇಡ, ಹಣ ಪಾವತಿಸಿದರೆ ಬೇರೆಯವರು ಕೂಡಲೇ ನನ್ನ ಕಿರಿ ಕಿರಿ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.
ಅಷ್ಟೊಂದು ಜನ (ಎಲ್ಲ ಮಹಿಳೆಯರನ್ನು ಒಳಗೊಂಡಂತೆ) ಪ್ರಭುದ್ಧತೆಯತ್ತ ಹೆಜ್ಜೆಯಿಡಲು ಕಷ್ಟವಷ್ಟೇ ಅಲ್ಲ ಅದು ಅತ್ಯಂತ ಅಪಾಯಕಾರಿ ಕೂಡ ಎಂದು ತಿಳಿಯುವಂತೆ ಅವರ ಮೇಲ್ವಿಚಾರಣೆಯನ್ನು ದಯಾಳುವಂತೆ ಒಪ್ಪಿಕೊಂಡ ಶಿಕ್ಷಕ-ರಕ್ಷಕರು ನೋಡಿಕೊಳ್ಳುತ್ತಾರೆ. ಈ ಶಿಕ್ಷಕ-ರಕ್ಷಕರು ಮೊದಲು ತಮ್ಮ ದನ ಕರು ಪಶುಗಳನ್ನು ಮೂರ್ಖರನ್ನಾಗಿಸುತ್ತಾರೆ ಮತ್ತು ಜಾಗರೂಕತೆಯಿಂದ ಆ ಪಾಪದ ಪಶುಗಳು, ಅವುಗಳಿಗೆ ಕಟ್ಟಿದ ಗಾಡಿಯ ಹಗ್ಗವಿಲ್ಲದೆ ಒಂದು ಹೆಜ್ಜೆಯೂ ಇಡುವುದಿಲ್ಲ ಎಂದು ಖಚಿತ ಪಡಿಸಿಕೊಂಡ ಮೇಲೆ ಒಂಟಿಯಾಗಿ ನೆಡೆಯಲು ಹೋದರೆ ಬಿದ್ದು ಎದುರಿಸಬೇಕಾದ ಅಪಾಯಗಳನ್ನು ತೋರಿಸಿ ಹೆದರಿಸುತ್ತಾರೆ. ಅವೇನೂ ಅಂತಹ ಮಹಾ ಅಪಾಯಗಳೇನೂ ಅಲ್ಲ. ಈ ಪಶುಗಳು ಕೆಲವು ಸಲ ಬಿದ್ದು ಕೊನೆಗೂ ಒಂಟಿಯಾಗಿ ನೆಡೆಯಲು ಕಲಿಯುತ್ತವೆ. ಆದರೆ ಇಂತಹ ವೈಫಲ್ಯಗಳ ಉದಾಹರಣೆಗಳು ಅವುಗಳಲ್ಲಿ ಅಂಜಿಕೆ ಹುಟ್ಟಿಸಿ ಮುಂದೆಂದೂ ಪ್ರಯತ್ನ ಮಾಡದಿರುವಂತೆ ಹೆದರಿಸಿ ಬಿಡುತ್ತದೆ.
ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿಗೆ ಒಂದು ರೀತಿಯಲ್ಲಿ ತನ್ನ ಸ್ವಭಾವವೇ ಆಗಿ ಬಿಟ್ಟಿರುವ ಅಪ್ರಭುದ್ಧತೆಯಿಂದ ಹೊರಬರಲು ಕಷ್ಟ. ಆತ ಇದನ್ನೇ ಇಷ್ಟ ಪಡುವಷ್ಟರ ಮಟ್ಟಿಗೆ ಬೆಳೆದಿದ್ದಾನೆ ಮತ್ತು ಸಧ್ಯಕ್ಕೆ ತನ್ನ ತಿಳುವಳಿಕೆಯನ್ನು ಉಪಯೋಗಿಸಲು ಅಸಮರ್ಥನಾಗಿದ್ದಾನೆ ಏಕೆಂದರೆ ಪ್ರಯತ್ನ ಮಾಡಲು ಕೂಡ ಆತನಿಗೆ ಯಾರೂ ಅವಕಾಶ ನೀಡಿಲ್ಲ. ಆತನ ನೈಸರ್ಗಿಕ ಪ್ರತಿಭೆಯ ತರ್ಕಬದ್ಧ ಉಪಯೋಗಕ್ಕೆ ಅಥವಾ ದುರುಪಯೋಗಕ್ಕೆ ಯಾಂತ್ರಿಕ ಉಪಕರಣಗಳಾಗಿರುವ ಸಿದ್ಧಾಂತ ಮತ್ತು ಸೂತ್ರಗಳು, ಶಾಶ್ವತ ಅಪ್ರಭುದ್ದತೆಯ ಸಂಕೋಲೆಗಳು. ಸಂಕೋಲೆಗಳನ್ನು ಕಿತ್ತೊಗೆಯುವವರು ಕೂಡ ಹೆಚ್ಚೆಂದರೆ ಒಂದು ಚಿಕ್ಕ ಕಂದಕವನ್ನು ಅನಿಶ್ಚಿತೆಯಿಂದ ದಾಟಬಹುದು ಏಕೆಂದರೆ ಅವರು ಈ ರೀತಿಯ ಸ್ವತಂತ್ರ ಚಲನೆಗಳಿಗೆ ಒಗ್ಗಿಕೊಂಡಿರುವುದಿಲ್ಲ. ಆದ್ದರಿಂದ ಕೇವಲ ಕೆಲವರು ಮಾತ್ರ ತಮ್ಮ ಸ್ವಂತ ಬುದ್ಧಿಯನ್ನು ಬೆಳಸಿ, ಅಪ್ರಬುದ್ಧತೆಯಿಂದ ಬಿಡುಗಡೆ ಹೊಂದಿ ಆತ್ಮ ವಿಶ್ವಾಸದಿಂದ ನೆಡೆಯುವಲ್ಲಿ ಜಯಶಾಲಿಗಳಾಗಿದ್ದರೆ.
ಆದರೆ ಸಾರ್ವಜನಿಕರು ಸ್ವತಃ ಪ್ರಬುದ್ಧರಾಗುವ ಸಾಧ್ಯತೆ ಹೆಚ್ಚು, ಅವರಿಗೆ ಅವರ ಸ್ವಾತಂತ್ರ್ಯ ವನ್ನು ನೀಡಿದರೆ ಇದು ತಪ್ಪಿಸಲಾಗದ ಸಾಧ್ಯತೆ. ಈ ಜನಸಮೂಹದ ನಡುವೆ – ಸ್ಥಾಪಿತ ಶಿಕ್ಷಕ -ರಕ್ಷಕರನ್ನೂ ಒಳಗೊಂಡಂತೆ – ಕೆಲವು ಸ್ವತಂತ್ರ ಚಿಂತಕರು, ಅಪ್ರಭುದ್ದತೆಯ ನೊಗವನ್ನು ಹೆಗಲಿನಿಂದ ಇಳಿಸಿ, ತರ್ಕಬದ್ಧ ಚಿಂತನೆಯ ಮೌಲ್ಯದ ಸ್ಪೂರ್ತಿಯು ತಮ್ಮ ಮತ್ತು ಇತರರ ಸ್ವಂತ ಯೋಚನೆಯ ಪ್ರೇರಣೆಯ ಮೌಲ್ಯವಾಗಿದೆ ಎಂದು ಸಾರುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಈ ಮೊದಲು ಶಿಕ್ಷಕ-ರಕ್ಷಕರಿಂದ ನೊಗದ ಕೆಳಗೆ ತಳ್ಳಲ್ಪಟ್ಟ ಜನತೆ, ಮುಂದೆ ತಾವೇ ಒತ್ತಾಯವಾಗಿ ಅದರಡಿಯಲ್ಲೇ ಉಳಿಯುತ್ತಾರೆ, ಅಲ್ಲೇ ಉಳಿಯುವಂತೆ ತಾವೇ ಪ್ರಭುದ್ಧರಾಗಲು ಅಸಮರ್ಥರಾಗಿರುವ ಶಿಕ್ಷಕ-ರಕ್ಷಕರು ಜನತೆಯನ್ನು ಸೂಕ್ತವಾಗಿ ಪ್ರಚೋದಿಸಿದರೆ ಇದು ಸಾಧ್ಯ. ಈ ಪೂರ್ವಾಗ್ರಹಗಳನ್ನು ಬಿತ್ತುವುದು ಎಷ್ಟು ಹಾನಿಕಾರಕವೆಂದರೆ ಅವು ಮುಂದೆ ತಮ್ಮ ಜನಕರ ಅಥವಾ ಅವರ ವಂಶಸ್ಥರ ವಿರುದ್ಧವೇ ಸೇಡು ತೀರಿಸಿಕೊಳ್ಳುತ್ತವೆ. ಆದ್ದರಿಂದ ಜನತೆ ನಿಧಾನವಾಗಿ ಮಾತ್ರ ಜ್ಞಾನೋದಯ ಹೊಂದಲು ಸಾಧ್ಯ. ದಂಗೆಯಿಂದ ಕೂಡ ವೈಯಕ್ತಿಕ ನಿರಂಕುಶಾಧಿಕಾರ ಮತ್ತು ದೌರ್ಜನ್ಯದ ದಬ್ಬಾಳಿಕೆ ಕೊನೆಗೊಳ್ಳಬಹುದೇ ಹೊರತು ಒಬ್ಬನ ಆಲೋಚನಾ ಕ್ರಮದಲ್ಲಿ ನಿಜ ಸುಧಾರಣೆ ತರಲಾರವು. ಇದರ ಬದಲು ಹೊಸ ಪೂರ್ವಗ್ರಹಗಳು, ಹಳೆಯದರಂತೆ ಆಲೋಚನಾರಹಿತ ಜನತೆಯ ದಾರಿಯಾಗುತ್ತವೆ.
ಈ ಜ್ಞಾನೋದಯಕ್ಕೆ ಸ್ವಾತಂತ್ರ್ಯದ ವಿನಃ ಬೇರೇನೂ ಬೇಡ; ಸ್ವಾತಂತ್ರ್ಯ ಎಂದು ಕರೆಸಿಕೊಳ್ಳುವುದೆಲ್ಲದರಲ್ಲಿಯೂ ಅತ್ಯಂತ ಕಡಿಮೆ ಹಾನಿಕಾರಕವಾಗಿರುವ, ಎಲ್ಲ ವಿಷಯದಲ್ಲೂ ಸಾರ್ವಜನಿಕಕವಾಗಿ ಸ್ವಂತ ಯೋಚನೆ ಮಾಡುವ ಸ್ವಾತಂತ್ರ್ಯ. ಆದರೆ ನಾನು ಎಲ್ಲಾ ಕಡೆಯಿಂದ ಒಂದೇ ಕೂಗನ್ನು ಕೇಳುತ್ತಿದ್ದೇನೆ: “ವಾದ ಮಾಡಬೇಡಿ! ಅಧಿಕಾರಿಯೊಬ್ಬ ಹೇಳುತ್ತಾನೆ: ವಾದ ಮಾಡಬೇಡ , ಸುಮ್ಮನೆ ತೂತು ಕೊರೆ, ತೆರಿಗೆ ಅಧಿಕಾರಿಯೊಬ್ಬ ವಾದ ಮಾಡಬೇಡ, ಪಾವತಿಸು, ಪುರೋಹಿತ ಹೇಳುತ್ತಾನೆ: “ವಾದ ಮಾಡಬೇಡ, ನಂಬು” (ಆದರೆ ಒಬ್ಬ ಆಡಳಿತಾಧಿಕಾರಿ ಹೀಗೆ ಹೇಳುತ್ತಾನೆ: “ಎಷ್ಟಾದರೂ ವಾದಮಾಡು, ಆದರೆ ಪಾಲಿಸು!” ). ಎಲ್ಲೆಡೆ ಈ ಸ್ವಾತಂತ್ರ್ಯಕ್ಕೆ ನಿರ್ಬಂಧವಿದೆ. ಆದರೆ ಯಾವ ರೀತಿಯ ನಿರ್ಬಂಧ ಜ್ಞಾನೋದಯ ಗಳಿಸಲು ತಡೆಯೊಡ್ಡುತ್ತದೆ ಮತ್ತು ಯಾವುವು ವಾಸ್ತವವಾಗಿ ಅನುಕೂಲಕರವಾಗಿವೆ ?
ನನ್ನ ಉತ್ತರ : ಸಾರ್ವಜನಿಕವಾಗಿ ಬಳಸುವ ಒಬ್ಬನ ಆಲೋಚನೆ ಮುಕ್ತವಾಗಿರಬೇಕು ಮತ್ತು ಇದೊಂದು ಮಾತ್ರ ಮನುಷ್ಯರಲ್ಲಿ ಜ್ಞಾನೋದಯ ತರಬಹುದು; ಸ್ವಂತ ಯೋಚನೆಯ ಖಾಸಗಿ ಬಳಕೆ ಹೆಚ್ಚಾಗಿ ಸಂಕುಚಿತ ನಿರ್ಬಂಧ ಹೊಂದಿರುವುದರಿಂದ ಜ್ಞಾನೋದಯದ ಪ್ರಗತಿಗೆ ಮಾರಕವಾಗಿದೆ. ಸ್ವಂತ ಯೋಚನೆಯ ಸಾರ್ವಜನಿಕ ಬಳಕೆ ಎಂದರೆ ಒಬ್ಬ ವಿದ್ವಾಂಸನ ಸ್ತರದಲ್ಲಿ, ಎಲ್ಲ ವಿದ್ವದ್ ಜನರ ಸಮ್ಮುಖದಲ್ಲಿ ತಮ್ಮ ಯೋಚನಾ ಶಕ್ತಿಯನ್ನು ಬಳಸುವುದು ಮತ್ತು ಸ್ವಂತ ಯೋಚನೆಯ ಖಾಸಗಿ ಬಳಕೆ ಎಂದರೆ ಅವನಿಗೆ ವಹಿಸಿರುವ ಸಿವಿಲ್ ಉದ್ಯೋಗ ಅಥವಾ ಒಂದು ಸಂಸ್ಥೆಯ ಸ್ತರದಲ್ಲಿ ಯೋಚನೆಯನ್ನು ಉಪಯೋಗಿಸುವುದು. ಈಗ ತುಂಬಾ ವಿಷಯಗಳಲ್ಲಿ ಸಾರ್ವಜನಿಕ(commonwealth) ಹಿತಾಸಕ್ತಿಯ ದೃಷ್ಟಿಯಿಂದ ಕೆಲವು ಯಾಂತ್ರಿಕತೆ ಅನಿವಾರ್ಯವಾಗಿರುತ್ತದೆ. ಸರ್ವಾನುಮತದಿಂದ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ದೇಶಿಸಿದಂತೆ ಅಂತಹ ಯಾಂತ್ರಿಕತೆಯ ನೆರವಿನಿಂದ ಒಕ್ಕೂಟದ ಕೆಲವು ಸದಸ್ಯರು ನಿಷ್ಕ್ರಿಯವಾಗಿ ನೆಡೆದುಕೊಳ್ಳಬೇಕಾಗುತ್ತದೆ. (ಇದರಿಂದ ಹಿತವಾಗದಿದ್ದರೂ ನಾಶವಾಗುವುದನ್ನಾದರೂ ತಡೆಯುವಂತೆ). ಇಂತಹ ಸಂಧರ್ಭದಲ್ಲಿ ಕೇವಲ ಪಾಲಿಸಬೇಕೇ ಹೊರತು ವಾದಮಾಡಲು ಖಂಡಿತವಾಗಿಯೂ ಅನುಮತಿಯಿಲ್ಲ. ಈ ಯಾಂತ್ರಿಕ ವ್ಯವಸ್ಥೆ ಅದೇ ಸಮಯದಲ್ಲಿ ಹೇಗೆ ಈ ಸದಸ್ಯನು ಒಬ್ಬ ಸಮೂಹದ ಸದಸ್ಯನಾಗಿಯೂ ಅಥವಾ ಸಮಾಜದ ವಿಶ್ವ ಪ್ರಜೆಯಾಗಿಯೂ ಅಥವಾ ಒಬ್ಬ ವಿದ್ವಾಂಸನ ಸಾಮರ್ಥ್ಯದಲ್ಲಿ ಜನತೆಯ ಕುರಿತು ಬರೆದ ಅವನ ಬರಹಗಳನ್ನು ಒಪ್ಪಿಕೊಳ್ಳುತ್ತದೆಯೋ ಅದೇ ರೀತಿಯಲ್ಲಿ ಆತ ಒಬ್ಬ ನಿಷ್ಕ್ರಿಯ ಸದಸ್ಯನಾಗಿ ಆತನ ಜವಾಬ್ದಾರಿಯ ವಿಷಯಗಳಿಗೆ ತೊಂದರೆಯಾಗದಂತೆ ಆತ ಖಂಡಿತವಾಗಿಯೂ ವಾದ ಮಾಡಬಹುದು. ಹಾಗಾಗಿ ಉನ್ನತಾಧಿಕಾರಿಯ ಆದೇಶದ ಸೂಕ್ತತೆ ಮತ್ತು ಉಪಯುಕ್ತತೆತೆಯ ಕುರಿತು ಚರ್ಚೆ ಮಾಡುವುದು, ಅಧಿಕಾರಿಯೊಬ್ಬನ ಅಧೋಗತಿಗೆ ಕಾರಣವಾಗಬುದು; ಆತ ಪಾಲಿಸಬೇಕು ಅಷ್ಟೆ. ಆದರೆ ಒಬ್ಬ ವಿದ್ವಾಂಸನಾಗಿ ಮಿಲಿಟರಿ ಸೇವೆಯಲ್ಲಿ ಕೂಡ ತಪ್ಪುಗಳನ್ನು ಹುಡುಕಿ ಸಾರ್ವಜನಿಕರ ವಿವೇಚನೆಗಾಗಿ ಮುಂದಿಡುವುದನ್ನು ನಿರ್ಬಂದಿಸಲಾಗುವುದಿಲ್ಲ. ಒಬ್ಬ ನಾಗರಿಕ ತೆರಿಗೆ ತೆರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ತೆರಿಗೆ ಪಾವತಿಸದೆ, ತೆರಿಗೆಯ ಬಗ್ಗೆ ಅಪ್ರಸ್ತುತ ಟೀಕೆ ಮಾಡಿದರೆ ಆತನನ್ನು ಹಗರಣವೆಂದು ದಂಡಿಸಲೂ ಸಾಧ್ಯ. ಆದರೆ ಅದೇ ವ್ಯಕ್ತಿ ಇಂತಹ ತೆರಿಗೆಯ ಅನುಚಿತತೆ ಅಥವಾ ಅನ್ಯಾಯದ ಬಗ್ಗೆ ವಿದ್ವಾಂಸನ ಸ್ತರದಲ್ಲಿ ಸಾರ್ವಜನಿಕರೊಂದಿಗೆ ತನ್ನ ಆಲೋಚನೆಗಳನ್ನು ಹಂಚಿಕೊಂಡರೆ ಆತ ತನ್ನ ನಾಗರಿಕ ಕರ್ತವ್ಯದ ವಿರುದ್ಧ ವಾಗಿ ನೆಡೆದುಕೊಂಡಂತೆಯೇನೂ ಆಗುವುದಿಲ್ಲ.
ಅದೇ ರೀತಿಯಲ್ಲಿ ಕ್ರೈಸ್ತ ಸಮಾಜಕ್ಕೆ ಸೇರಿದ ಪಾದ್ರಿಯೊಬ್ಬ ಆತನ ಚರ್ಚ್ ನ ಅನುಯಾಯಿಗಳ ಸಮೂಹಕ್ಕೆ ಚರ್ಚ್ ನ ನಂಬಿಕೆಗಳ ಅನುಗುಣವಾಗಿಯೇ ಪ್ರವಚನ ನೀಡಬೇಕು ಯಾಕೆಂದರೆ ಆತನನ್ನು ಅದೇ ಷರತ್ತಿನೊಂದಿಗೆ ನೇಮಕ ಮಾಡಿರುತ್ತಾರೆ. ಆದರೆ ಒಬ್ಬ ವಿದ್ವಾಂಸನ ಸ್ತರದಲ್ಲಿ ಚರ್ಚ್ ನ ನಂಬಿಕೆಗಳಲ್ಲಿ ತಪ್ಪೇನಿದೆ ಎಂದು ಜಾಗರೂಕತೆಯಿಂದ ಪರೀಕ್ಷಿಸಿದ ಮತ್ತು ಒಳ್ಳೆಯ ಉದ್ದೇಶ ಹೊಂದಿದ ಆತನ ಯೋಚನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಆತನಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇದರಿಂದ ಅವನ ಆತ್ಮಸಾಕ್ಷಿಯ ಮೇಲೇನೂ ಹೊರೆಯಿಲ್ಲ ಯಾಕೆಂದರೆ ಆತ ಏನು ಕಲಿಸುತ್ತಾನೋ ಅದು ಒಬ್ಬ ಉದ್ಯೋಗಿಯಾಗಿ ಚರ್ಚ್ ನ ವ್ಯವಹಾರವನ್ನು ನೆಡೆಸುವ ಕ್ರಿಯೆಯ ಪ್ರತಿಫಲವಾಗಿದೆ ಮತ್ತು ಆತ ತಾನು ಯಾವುದನ್ನು ಉತ್ತಮ ಎಂದು ತಿಳಿದಿದ್ದಾನೋ ಅದನ್ನು ಕಲಿಸಲು ಯಾವುದೇ ಸ್ವಾತಂತ್ರ್ಯವಿಲ್ಲದ್ದನ್ನು ಪ್ರತಿನಿಧಿಸುತ್ತಾನೆ. ಬೇರೆಯವರ ಹೆಸರಿನಲ್ಲಿ, ಅವರು ಸೂಚಿಸಿದಂತೆ ಪ್ರವಚನ ನೀಡಲು ಮಾತ್ರ ಆತ ನೇಮಕ ಗೊಂಡಿರುತ್ತಾನೆ. ಅವನು ಹೀಗೆ ಹೇಳುತ್ತಾನೆ: ಅದು ಅಥವಾ ಇದು ಎಂದು ನಮ್ಮ ಚರ್ಚ್ ಹೇಳುತ್ತದೆ; ಅದಕ್ಕೆ ಪೂರಕವಾಗಿ ಇಂತಹ ವಾದಗಳನ್ನು ನೀಡುತ್ತದೆ; ನಂತರ ತಾನು ಸಂಪೂರ್ಣ ಬದ್ಧತೆಯಿಂದ ಕಟ್ಟಳೆಗಳನ್ನು ಒಪ್ಪದಿದ್ದರೂ ಅನುಯಾಯಿಗಳ ದೈನಂದಿನ ಜೀವನಕ್ಕೆ ಸಹಾಯವಾಗುವ ವಿಷಯಗಳನ್ನು ಆ ಕಟ್ಟಳೆಗಳಿಂದ ಹೊರ ತೆಗೆಯುತ್ತಾನೆ. ಕಟ್ಟಳೆಗಳನ್ನು ತಾನೇ ಒಪ್ಪದಿದ್ದರೂ ಪ್ರವಚನ ನೀಡಬಹುದು ಏಕೆಂದರೆ ಇವುಗಳ ಒಳಗೇ ಸತ್ಯವಡಗಿದೆ ಎಂದು ಹೇಳಲು ಅಸಾಧ್ಯವೇನೂ ಅಲ್ಲ ಮತ್ತು ಹೇಗೂ ಅವರ ಒಳ ಧರ್ಮಕ್ಕೆ ವಿರುದ್ಧವಾದದ್ದೇನೂ ಹೇಳುತ್ತಿಲ್ಲವಲ್ಲ. ಆ ರೀತಿ ಧರ್ಮದ ವಿರುದ್ಧವೇನಾದರೂ ನಾನು ಹೇಳುತ್ತಿದ್ದೇನೆಂದು ಆತ ನಂಬಿದರೆ, ಖಂಡಿತವಾಗಿಯೂ ಅವನ ಆತ್ಮಸಾಕ್ಷಿ ಆ ಸ್ಥಾನದಲ್ಲಿ ಮುಂದುವರೆಯಲು ಒಪ್ಪದೇ ಕೂಡಲೇ ರಾಜೀನಾಮೆ ನೀಡಬೇಕಾಗುತ್ತದೆ. ಹಾಗಾಗಿ ನೇಮಕಗೊಂಡ ಪಾದ್ರಿಯೊಬ್ಬ ಅನುಯಾಯಿಗಳ ಸಭೆಯ ಸಮ್ಮುಖದಲ್ಲಿ ಉಪಯೋಗಿಸುವ ಯೋಚನೆ ಕೇವಲ ಖಾಸಗಿ ಬಳಕೆಯಾಗಿರುತ್ತದೆ. ಸಭೆ ಎಷ್ಟೇ ದೊಡ್ಡದ್ದಾಗಿರಲಿ ಯೋಚನೆಯ ಬಳಕೆ ದೇಸಿಯವಾಗಿ ಇರುವುದರಿಂದ ಪೂಜಾರಿಯಾದವನು ಸ್ವತಂತ್ರ ನಲ್ಲ ಮತ್ತು ಬೇರೆಯವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುವವನು, ಆಗಲೂ ಸಾಧ್ಯವಿಲ್ಲ. ಅವನಿಗೆ ಹೋಲಿಸಿದರೆ ಒಬ್ಬ ವಿದ್ವಾಂಸನಾಗಿ ತನ್ನ ಬರಹಗಳ ಮೂಲಕ ಸಾರ್ವಜನಿಕರೊಂದಿಗೆ – ಅಂದರೆ ವಿಶ್ವದೊಂದಿಗೆ – ಮಾತನಾಡುವ ಪಾದ್ರಿ ತನ್ನ ಸ್ವಂತ ಯೋಚನೆಗಳನ್ನು ಮತ್ತು ತರ್ಕ ಸಾಮರ್ಥ್ಯವನ್ನು ಉಪೋಯೋಗಿಸುವ ಸಂಪೂರ್ಣ ಸ್ವಾತಂತ್ರ್ಯ ದಿಂದ ಸಾರ್ವಜನಿಕ ಬಳಕೆಯ ಸ್ವಂತ ಯೋಚನೆಯನ್ನು ಆನಂದಿಸುತ್ತಾನೆ. ಆದ್ದರಿಂದ ಜನತೆಯ ಶಿಕ್ಷಕ-ರಕ್ಷಕರು (ಆಧ್ಯಾತ್ಮಿಕ) ಅಪ್ರಭುದ್ಧರಾಗಿಯೇ ಇರಬೇಕೆನ್ನುವುದು ಅಸಂಬದ್ಧವಾಗಿದೆ ಮತ್ತು ಅಸಂಬದ್ಧತೆ ಶಾಶ್ವತವಾಗಿ ಮುಂದುವರಿಯಲು ಕಾರಣವಾಗಿದೆ.
ಆದರೆ ಚರ್ಚ್ ಸಭೆಯೊ ಅಥವಾ ಇನ್ನೊಂದಾವುದೋ ಪುರೋಹಿತರ ಸಮಾಜವೊಂದು ಪ್ರತಿಜ್ಞೆಯ ಮೂಲಕ ತಮ್ಮನ್ನು ತಾವೇ ಒಂದು ಬದಲಾಯಿಸಲಾಗದ ಸಂಕೇತಕ್ಕೆ ಬಂಧಿತರಾಗಿಸಿಕೊಂಡು ಅದರ ಸದಸ್ಯರ ಮತ್ತು ಅವರ ಮೂಲಕ ಜನತೆಯ ಶಿಕ್ಷಕ-ರಕ್ಷಕತ್ವವನ್ನು ಶಾಶ್ವತವಾಗಿ ಪಡೆದುಕೊಳ್ಳಲು ಬಯಸಿದರೆ ಅದನ್ನು ಸಮರ್ಥಿಸಬಹುದೇ? ನನ್ನ ಪ್ರಕಾರ ಇದು ಅಸಾಧ್ಯವಾದುದು. ಸರ್ವೋಚ್ಚ ಶಕ್ತಿಯಿಂದ, ಸಂಸತ್ತುಗಳಿಂದ ಮತ್ತು ಅತ್ಯಂತ ಗಂಭೀರವಾದ ಶಾಂತಿ ಒಪ್ಪಂದಗಳಿಂದ ಅನುಮೋದನೆ ಪಡೆದಿದ್ದರೂ ಕೂಡ, ಮಾನವತೆಯ ಜ್ಞಾನೋದಯವನ್ನು ತಡೆಗಟ್ಟುವ ಉದ್ದೇಶವಿರುವ ಅಂತಹ ಒಪ್ಪಂದಗಳು ಸಂಪೂರ್ಣವಾಗಿ ನಿರರ್ಥಕವಾಗಿವೆ. ಒಂದು ಕಾಲದ ಜನ ಹಾಗೆ ತಮ್ಮ ಮುಂದಿನವರು ಅವರ ಜ್ಞಾನವನ್ನು ಹಿಗ್ಗಿಸಿಕೊಳ್ಳುವ, ದೋಷಗಳನ್ನು ನಿವಾರಿಸಿಕೊಳ್ಳುವ, ಮತ್ತು ಸಾಮಾನ್ಯವಾಗಿ ಜ್ಞಾನೋದಯದ ಪ್ರಗತಿ ಹೊಂದುವ ಅವಕಾಶವನ್ನೇ ಅಸಾಧ್ಯವಾಗಿಸುವಂತಹ ಷರತ್ತುಗಳನ್ನು ವಿಧಿಸಿ ಬಂಧಿ ಮಾಡಲು ಸಾಧ್ಯವಿಲ್ಲ. ಅಂತಹ ಪ್ರಗತಿಯಲ್ಲಿಯೇ ಮಾನವ ಸ್ವಭಾವದ ವಿಧಿ ಇರುವಾಗ ಇದು ಅದರ ವಿರುದ್ಧವಾಗಿ ನೆಡೆಸುವ ಅಪರಾಧವಾಗುತ್ತದೆ. ಮುಂದಿನ ಪೀಳಿಗೆ ಅಂತಹ ಒಪ್ಪಂದಗಳನ್ನು ಅನಧಿಕೃತ ಮತ್ತು ಅನರ್ಹ ಎಂದು ತಳ್ಳಿ ಹಾಕಿದರೆ ಅದು ಸಂಪೂರ್ಣ ನ್ಯಾಯ ಸಮ್ಮತವಾಗಿರುತ್ತದೆ. ಜನತೆ ಎಲ್ಲವನ್ನೂ ಶಾಸನ ಎಂದು ಒಪ್ಪಬಹುದಾದ ಮಾನದಂಡ ಈ ಪ್ರಶ್ನೆಯಲ್ಲಿ ಅಡಗಿದೆ. “ಅಂತಹ ಶಾಸನವನ್ನು ಜನತೆ ತಮ್ಮ ಮೇಲೇ ವಿದಿಸಿಕೊಳ್ಳಲು ಸಾಧ್ಯವೇ?”
ಈಗ ಒಂದು ಒಳ್ಳೆಯ ಪರಿಸ್ಥಿತಿ ಮುಂದೆ ಬರಲೆಂಬ ನೀರಿಕ್ಷೆಯಲ್ಲಿ ತಾತ್ಕಾಲಿಕವಾಗಿ, ಕಡಿಮೆ ಅವಧಿಗೆ ಮಾತ್ರ ಜನರಿಗೆ ಅದರಲ್ಲೂ ಪಾದ್ರಿಯಂತವರಿಗೆ ವಿದ್ವಾಂಸನಾಗಿ ಬರಹಗಳ ಮೂಲಕ ಪ್ರಸ್ತುತ ವ್ಯವಸ್ಥೆಯ ಕುಂದು ಕೊರತೆಗಳನ್ನು ಸಾರ್ವಜನಿಕವಾಗಿ ಹೇಳುವ ಸ್ವಾತಂತ್ರ್ಯ ನೀಡುವ ಆದೇಶವನ್ನು ಪರಿಚಯಿಸುವ ಎಲ್ಲ ಸಾಧ್ಯತೆ ಇದೆ. ಇಂತಹ ವಿಷಯಗಳ ಸ್ವಭಾವದ ಹೊಸ ಒಳನೋಟಗಳು ಜನತೆಯಲ್ಲಿ ಎಷ್ಟು ಹಾಸುಹೊಕ್ಕಾಗಿ ಸ್ಪಷ್ಟ ವಾಗಿರಬೇಕೆಂದರೆ ಅವರೆಲ್ಲರೂ (ಸರ್ವಾನುಮತಿ ಇಲ್ಲದ್ದಿದ್ದರೂ) ಒಕ್ಕೊರಲಿನಿಂದ ತಮಗೆ ಹೊಸದಾಗಿ ಲಭಿಸಿದ ಒಳನೋಟಗಳ ಪ್ರಕಾರ ಒಂದು ಬದಲಾದ ಧಾರ್ಮಿಕ ಸಂಸ್ಥೆಯಾಗಿ ಸಂಘಟಿತಗೊಂಡ ಸಭೆಗಳನ್ನು ರಾಜ್ಯದ ಅಡಿಯಲ್ಲಿ ಮಾನ್ಯ ಮಾಡಿ ರಕ್ಷಿಸಬೇಕೆಂದು ರಾಜನಲ್ಲಿ ಪ್ರಸ್ತಾಪಿಸುವವರೆಗೂ ಈ ತಾತ್ಕಾಲಿಕ ಆದೇಶ ಮುಂದುವರಿಯಬಹುದು. ಆದರೆ ಯಾರು ವಿಷಯಗಳು ಮೊದಲಿನಂತೆಯೇ ಇರಲು ಬಯಸುವರೋ ಅಂತವರನ್ನು ವಿರೋಧಿಸದೇ ಇಂತಹ ಪ್ರಸ್ತಾಪವಾಗಬೇಕು. ಹಾಗಂತ ಇಂತಹ ಧಾರ್ಮಿಕ ಸಂಸ್ಥೆಗಳು ಒಗ್ಗಟ್ಟಿನಿಂದ ಮನುಷ್ಯನ ಜೀವಮಾನವಿಡೀ ಸಾರ್ವಜನಿಕವಾಗಿ ಪ್ರಶ್ನೆ ಯೇ ಎತ್ತಬಾರದೆಂಬುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಯಾಕೆಂದರೆ ಹೀಗೆ ಮಾಡಿದರೆ ಒಂದು ಯುಗದ ಮನುಷ್ಯನ ಸುಧಾರಣೆಗಳ ಪ್ರಗತಿಯನ್ನು ಕಸಿದುಕೊಂಡಂತೆ, ನಿಷ್ಫಲ ವಾಗಿಸಿದಂತೆ ಮತ್ತು ಇದರಿಂದ ಮುಂಬರುವ ಪೀಳಿಗೆಗೆ ಕೇಡು ಬಯಸಿದಂತೆ. ಒಬ್ಬ ಮನುಷ್ಯ ಅವನ ಇಚ್ಛೆಯಿಂದಲೇ ಅದು ಕೂಡ ಸ್ವಲ್ಪ ಅವಧಿಗೆ ಜ್ಞಾನೋದಯ ಹೊಂದುವುದನ್ನು ಮುಂದೂಡಬಹುದು. ಆದರೆ ಆತ, ಅಷ್ಟೇ ಅಲ್ಲದೇ ಮುಂದಿನ ಪೀಳಿಗೆಗಳು ಜ್ಞಾನೋದಯವನ್ನೇ ತ್ಯಜಿಸುವಂತಾದರೆ ಅದು ಆತನ ದೈವಿಕ ಹಕ್ಕನ್ನು ಉಲ್ಲಂಘಿಸಿ ಕಾಲಡಿಯಲ್ಲಿ ಹೊಸೆದು ಹಾಕಿದಂತೆ. ಮತ್ತು ಜನತೆ ಯಾವುದನ್ನು ತಮ್ಮ ಮೇಲೆ ಹೇರಿಕೊಳ್ಳಲು ಬಯಸುವುದಿಲ್ಲವೋ ಅಂತಹದ್ದನ್ನು ಒಬ್ಬ ರಾಜ ವಿಧಿಸುವ ಸಾಧ್ಯತೆ ಇನ್ನೂ ಕಡಿಮೆ ಏಕೆಂದರೆ ಶಾಸನ ವಿಧಿಸುವ ಅಧಿಕಾರ ಜನತೆಯ ಸಾಮೂಹಿಕ ಆಶಯ ಮತ್ತು ತನ್ನ ಸ್ವಂತ ಆಶಯದ ಕೂಡುವಿಕೆಯ ಮೇಲೆ ನಿಂತಿದೆ. ಎಲ್ಲ ನಿಜ ಅಥವಾ ಉದ್ದೇಶಿತ ಸುಧಾರಣೆಗಳು ನಾಗರಿಕ ಆದೇಶಗಳಿಗೆ ಬದ್ಧವಾಗಿದೆ ಎಂದು ಆತ ನೋಡಿದರೆ ತನ್ನ ಪ್ರಜೆಗಳು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಅವಶ್ಯವೆಂದು ತೋರುವುದನ್ನೆಲ್ಲ ಮಾಡಲು ಅನುಮತಿಸಬಹುದು. ಇದು ಅವನಿಗೆ ಸಂಭಂದ ಪಡದ ವಿಷಯ. ಆದರೆ ಬೇರೆಯವರು ತಮ್ಮ ಶಕ್ತಿಗನುಸಾರ, ತಮಗೆ ತಿಳಿದಂತೆ ಯೋಗಕ್ಷೇಮದಿಂದಿರಲು ದುಡಿಯುತ್ತಿದ್ದರೆ ಯಾರಾದರೂ ಬಲವಂತವಾಗಿ ಅಡ್ಡಿಮಾಡಿದರೆ ಯಾರೇ ಆಗಲಿ ಅವರನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಷ್ಟನ್ನು ಮಾಡುವದು ಬಿಟ್ಟು ಜನತೆ ತಮ್ಮ ಒಳನೋಟದ ಸ್ಪಷ್ಟತೆಗಾಗಿ ಬರೆದ ಬರಹಗಳನ್ನು ಸರ್ಕಾರವೇ ಪರೀಕ್ಷಿಸುವಂತೆ ಮಾಡಿ ಇಂತಹ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ರಾಜನ ಘನತೆಗೆ ಕುಂದು, ಅಷ್ಟೇ ಅಲ್ಲದೆ ತನ್ನದೇ ಅತ್ಯುನ್ನತ ಒಳನೋಟದಿಂದ ಹಾಗೆ ಮಾಡಿದರೆ “ceaser est supra grammaticos” – ಸೀಸರ್ ವ್ಯಾಕರಣಕಾರರಿಗಿಂತ ಮೇಲಲ್ಲ ಎಂಬ ನಿಂದನೆಗೆ ಗುರಿಯಾಗಬೇಕಾದೀತು. ಆದರೆ ತನ್ನ ಸರ್ವೋಚ್ಚ ಅಧಿಕಾರಕ್ಕೆ ಇನ್ನೂ ಹೆಚ್ಚಿನ ಅವಮಾನವನ್ನು ಯಾವಾಗ ತಂದುಕೊಳ್ಳುತ್ತಾನೆಂದರೆ ಆತ ಯಾವಾಗ ತನ್ನ ರಾಜ್ಯದಲ್ಲಿ ಕೆಲವು ದಬ್ಬಾಳಿಕೆಕಾರರ ಆಧ್ಯಾತ್ಮಿಕ ದೌರ್ಜನ್ಯವನ್ನು ತನ್ನ ಉಳಿದ ಪ್ರಜೆಗಳ ವಿರುದ್ಧ ಬೆಂಬಲಿಸುವನೋ ಆಗ.
“ನಾವು ಸಧ್ಯಕ್ಕೆ ಜ್ಞಾನೋದಯವಾದ ಕಾಲದಲ್ಲಿ ಜೀವಿಸುತ್ತಿದ್ದೇವೆಯೇ?” ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ “ಇಲ್ಲ, ಆದರೆ ನಾವು ಜ್ಞಾನೋದಯದ ಕಾಲದಲ್ಲಿ ಜೀವಿಸುತ್ತಿದ್ದೇವೆ.” ಸಧ್ಯದ ಪರಿಸ್ಥಿತಿಯಲ್ಲಿ, ಜನತೆ ಧಾರ್ಮಿಕ ಸಮಸ್ಯೆಗಳಲ್ಲಿ ಕೂಡ ಬೇರೆಯವರ ನಿರ್ದೇಶನವಿಲ್ಲದೆ ಆತ್ಮ ವಿಶ್ವಾಸದಿಂದ ಸ್ವಂತ ತಿಳುವಳಿಕೆ ಉಪಯೋಗಿಸಲು ಇನ್ನು ತುಂಬಾ ಕೊರತೆಯಿದೆ. ಆದರೂ ಈಗ ಜನತೆ ಈ ದಿಸೆಯಲ್ಲಿ ಮುನ್ನೆಡೆಯಲು ಮಾರ್ಗವೊಂದು ತೆರೆದಿರುವ ಮತ್ತು ಜ್ಞಾನೋದಯ ಅಂದರೆ ಸ್ವಯಂ ಕೃತ ಅಪ್ರಾಪ್ತತೆ ಯಿಂದ ಬಿಡುಗಡೆಯಾಗಲು ಅಡೆತಡೆಗಳು ಕ್ರಮೇಣ ಕಡಿಮೆಯಾಗುತ್ತಿರುವ ಸ್ಪಷ್ಟ ಸೂಚನೆಗಳು ಕಾಣ ಸಿಗುತ್ತಿವೆ. ಈ ನಿಟ್ಟಿನಲ್ಲಿ ಈ ಕಾಲ ಜ್ಞಾನೋದಯದ ಕಾಲವೆಂದು ಹೇಳಬಹುದು, ಫ್ರೆಡೆರಿಕ್ ನ ಶತಮಾನ.
ಜನತೆಯ ಧಾರ್ಮಿಕ ವಿಷಯಗಳಲ್ಲಿ ಯಾವ ನಿರ್ದೇಶನವೂ ನೀಡದೆ, ಅವರನ್ನು ಸ್ವತಂತ್ರವಾಗಿ ಬಿಟ್ಟು ಅವರು ಸಹಿಷ್ಣುತೆ ಎಂಬ ಅಹಂಕಾರದ ಶೀರ್ಷಿಕೆಯನ್ನೂ ತ್ಯಜಿಸುವಂತೆ ಮಾಡುವುದು ತನ್ನ ಕರ್ತವ್ಯ ಎಂದು ಯಾವುದೇ ಕೀಳು ಭಾವನೆಯಿಲ್ಲದೆ ಹೇಳುವ ಒಬ್ಬ ರಾಜ, ಸ್ವತಃ ಅವನೇ ಜ್ಞಾನೋದಯ ಹೊಂದಿದವನಾಗಿದ್ದಾನೆ ಮತ್ತು ವರ್ತಮಾನ ಮತ್ತು ಭವಿಷ್ಯದ ಜನತೆಯಿಂದ ಪ್ರಶಂಸೆಗೆ ಅರ್ಹನಾಗಿದ್ದಾನೆ. ಆತ ಆತ್ಮ ಸಾಕ್ಷಿಯ ಎಲ್ಲ ವಿಷಯದ್ಲಲೂ ಸ್ವಂತ ಯೋಚನೆ ಉಪಯೋಗಿಸಲು ಸ್ವಾತಂತ್ರ್ಯ ನೀಡಿ ಮಾನವ ಜನಾಂಗವನ್ನು ಅಪ್ರಭುದ್ಧತೆಯಿಂದ – ಸರ್ಕಾರದ ಕಡೆಯಿಂದಾದರೂ – ಬಿಡುಗಡೆ ಗೊಳಿಸಿದ ಮೊದಲ ವ್ಯಕ್ತಿಯಾಗಿ ಪ್ರಶಂಸಾರ್ಹ. ಇವನ ಆಡಳಿತದಲ್ಲಿ, ಗೌರವಾನ್ವಿತ ಪಾದ್ರಿಗಳು, ವಿದ್ವಾಂಸರ ಸ್ತರದಲ್ಲಿ, ತಮ್ಮ ಅಧಿಕೃತ ಕೆಲಸಕ್ಕೆ ಕುತ್ತು ಬಾರದಂತೆ ಸ್ವತಂತ್ರವಾಗಿ ಮತ್ತು ಬಹಿರಂಗವಾಗಿ ತಮ್ಮ ತೀರ್ಮಾನಗಳು ಮತ್ತು ಅಭಿಪ್ರಾಯಗಳನ್ನು ಪ್ರಪಂಚದ ಪರಿಶೀಲನೆಗಾಗಿ ಮುಂದಿಡಬಹುದು; ಇವು ಒಮ್ಮೊಮ್ಮೆ ಒಂದು ಒಪ್ಪಿತ ಆಕೃತಿಗಿಂತಲೂ ಭಿನ್ನವಾಗಿದ್ದರೂ ಕೂಡ. ಅಧಿಕೃತ ಕೆಲಸವಿಲ್ಲದರಿಗಂತೂ ಇನ್ನೂ ಹೆಚ್ಚಿನ ಸ್ವಾತಂತ್ರ್ಯವಿದೆ. ತಮ್ಮ ಕಾರ್ಯವನ್ನೇ ಅಪಾರ್ಥ ಮಾಡಿಕೊಂಡಿರುವ ಇತರ ಸರ್ಕಾರಗಳಂತಹ ಬಾಹ್ಯ ಅಡೆತಡೆಗಳ ವಿರುದ್ಧವೂ ಈ ಸ್ವಾತಂತ್ರ್ಯದ ಸ್ಫೂರ್ತಿ ಹರಡುತ್ತಿದೆ. ಈ ಸ್ವಾತಂತ್ರ್ಯವು ಜನತೆಯ ಹೊಂದಾಣಿಕೆ, ಸುವ್ಯವಸ್ಥೆ ಮತ್ತು ಒಕ್ಕೂಟದ ಒಗ್ಗಟ್ಟಿಗೆ ಹಾನಿ ಮಾಡಬಹುದೆಂಬ ಆತಂಕವನ್ನು ದೂರ ಮಾಡಿ ಅಂತಹ ಸರ್ಕಾರಗಳಿಗೆ ಮಾದರಿಯಾಗಿ ಪ್ರಕಾಶಿಸುತ್ತಿದೆ. ಉದ್ದೇಶಪೂರ್ವಕವಾಗಿ ಅವರನ್ನು ಒಂದು ಆಕೃತಿಯಲ್ಲಿ ಹಿಡಿದಿಡದಿದ್ದರೆ, ಜನತೆ ಕ್ರಮೇಣ ಅನಾಗರಿಕತೆಯಿಂದ ತಮ್ಮಿಚ್ಛೆಯಿಂದಲೇ ಹೊರ ಬರುತ್ತಾರೆ.
ಸ್ವಯಂ ವಿಧಿಸಿಕೊಂಡ ಅಪ್ರಾಪ್ತತೆಯಿಂದ ಮನುಷ್ಯನ ಬಿಡುಗಡೆ ಎಂಬ ಜ್ಞಾನೋದಯದ ಮುಖ್ಯ ಅಂಶವನ್ನು ಧಾರ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಿ ಹೇಳಿದ್ದೇನೆ. ಏಕೆಂದರೆ ಮೊದಲನೆಯದಾಗಿ ಕಲೆ ಮತ್ತು ವಿಜ್ಞಾನಕ್ಕೆ ಸಂಭಂದ ಪಟ್ಟಂತೆ ಪ್ರಜೆಗಳ ಶಿಕ್ಷಕ-ರಕ್ಷಕರಾಗಲು ನಮ್ಮ ಆಡಳಿತಗಾರರಿಗೆ ಯಾವುದೇ ಆಸಕ್ತಿಯಿಲ್ಲ ಮತ್ತು ಎರಡನೆಯದಾಗಿ ಆ ರೀತಿಯ ಅಪ್ರಾಪ್ತತೆ ಎಲ್ಲಕ್ಕಿಂತ ಅತ್ಯಂತ ಅವಮಾನಕಾರವೂ, ವಿನಾಶಕಾರಿಯೂ ಆಗಿದೆ. ಒಬ್ಬ ರಾಜ್ಯದ ಮುಖ್ಯಸ್ಥ ಧಾರ್ಮಿಕ ಜ್ಞಾನೋದಯವನ್ನು ಓಲೈಸುವ ಯೋಚನಾ ಕ್ರಮವನ್ನು ಹೊಂದಿರುತ್ತಾನೋ ಆತ ಇನ್ನೂ ಮುಂದೆ ಸಾಗುತ್ತಾನೆ; ಯಾಕೆಂದರೆ ಪ್ರಜೆಗಳು ಸಾರ್ವಜನಿಕವಾಗಿ ವಿವೇಚನೆ ಬಳಸುವುದರಿಂದ ಮತ್ತು ರಾಜ್ಯದ ಕಾನೂನುಗಳನ್ನು ಉತ್ತಮವಾಗಿಸುವ ಬಗೆಗೆ ತಮ್ಮ ಚಿಂತನೆಗಳನ್ನು, ಈಗಿನ ಕಾಯಿದೆಗಳ ಟೀಕೆಯನ್ನೂ ಸೇರಿಸಿ – ಪ್ರಪಂಚದೆದುರು ವ್ಯಕ್ತಪಡಿಸಿದಾಗ ತನ್ನ ಶಾಸನಕ್ಕೇನೂ ಅಪಾಯವಿಲ್ಲ ಎಂಬ ಅರಿವು ಆತನಿಗಿರುತ್ತದೆ. ಯಾವ ರಾಜನೂ ನಾವು ಗೌರವಿಸುವವರನ್ನು ಮೀರಿ ಹೋಗಿಲ್ಲ ಎಂಬುದೇ ನಮ್ಮ ಮುಂದಿರುವ ಉತ್ತಮ ಉದಾಹರಣೆ.
ಆದರೆ ಯಾವ ರಾಜ ಸ್ವತಃ ತಾನೇ ಜ್ಞಾನೋದಯ ಹೊಂದಿದ್ದಾನೋ, ಭೂತ-ನೆರಳುಗಳ ಭಯ ಇರದವನಾಗಿದ್ದನೋ ಮತ್ತು ಇನ್ನೊಂದೆಡೆಯಲ್ಲಿ ಜನತೆಯ ಶಾಂತಿ ಕಾಪಾಡಲು ದೊಡ್ಡ ಶಿಸ್ತಿನ ಸೈನ್ಯವನ್ನು ಹೊಂದಿದ್ದಾನೋ ಆತ ಮಾತ್ರ ಯಾವ ರಾಜ್ಯ ಕೂಡ ಹೇಳಲು ಧೈರ್ಯ ಮಾಡದ ಮುಂದಿನ ಮಾತನ್ನು ಹೇಳಬಹುದು: “ಯಾವುದರ ಬಗ್ಗೆಯಾದರೂ, ಎಷ್ಟು ಬೇಕಾದರೂ ವಾದ ಮಾಡಿ, ಆದರೆ ಸುಮ್ಮನೆ ಪಾಲಿಸಿ.” ಬೇರೆಡೆಯಂತೆ ಇಲ್ಲಿಯೂ, ವಿಶಾಲವಾದ ದೃಷ್ಟಿಕೋನದಲ್ಲಿ ವಿಷಯಗಳನ್ನು ಪರಿಗಣಿಸಿದರೆ ಒಂದು ವಿಚಿತ್ರ, ಅನಿರೀಕ್ಷಿತ ಮಾದರಿ ಮಾನವ ವ್ಯವಹಾರಗಳಲ್ಲಿ ಕಾಣಿಸಿಕೊಳ್ಳುತ್ತದೆ, ಅಲ್ಲಿ ಎಲ್ಲವೂ ವಿರೋಧಾಭಾಸವೇ. ಹೆಚ್ಚಿನ ನಾಗರಿಕ ಸ್ವಾತಂತ್ರ್ಯ, ಜನತೆಯ ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕೆ ಅನುಕೂಲವಾದಂತೆ ಕಾಣುತ್ತದೆ, ಆದರೂ ಮೊದಲನೆಯದು ಕಡೆಯದಕ್ಕೆ ದಾಟಲಾಗದ ಗಡಿಗಳನ್ನೂ ಸ್ಥಾಪಿಸಿ ಬಿಟ್ಟಿದೆ. ವ್ಯತಿರಿಕ್ತವಾಗಿ ಕಡಿಮೆ ನಾಗರಿಕ ಸ್ವಾತಂತ್ರ್ಯ, ಅವರ ಸಾಮರ್ಥ್ಯಗಳನ್ನು ವಿಸ್ತರಿಸಲು ಜನತೆಗೆ ಅವಕಾಶ ನೀಡುತ್ತದೆ. ಆದ್ದರಿಂದ, ಪೃಕೃತಿ ಬಹಳ ಪ್ರೀತಿಯಿಂದ ರಕ್ಷಣೆ ಮಾಡಿದ ತಿರುಳಾದ ಸ್ವತಂತ್ರ ಯೋಚನೆಯ ಪರ ಇರುವ ಒಲವು ಮತ್ತು ವೃತ್ತಿಪರತೆಯನ್ನು ಒಮ್ಮೆ ಚಿಪ್ಪಿನಿಂದ ಪೃಕೃತಿಯು ಬೇರ್ಪಡಿಸಿದಾಗ, ಈ ತಿರುಳು ಕ್ರಮೇಣ ಮನುಷ್ಯನ ಮನಸ್ಥಿತಿಯೊಂದಿಗೆ ಪ್ರತಿಕ್ರಿಯಿಸಿ (ಆ ಮೂಲಕ ಮುಕ್ತವಾಗಿ ವರ್ತಿಸುವ ಸಾಮರ್ಥ್ಯ ಹೆಚ್ಚುಮಾಡಿಕೊಳ್ಳುತ್ತಾ),ಮತ್ತು ಜನತೆಯನ್ನು ಒಂದು ಯಂತ್ರಕ್ಕೂ ಮಿಗಿಲಾಗಿ, ಅವರ ಘನತೆಗನುಗುಣವಾಗಿ ಪರಿಗಣಿಸುವ ಮೂಲಕ ಸಹ ಲಾಭ ಪಡೆಯಬಹುದು ಎಂದು ಅರ್ಥೈಸಿಕೊಳ್ಳುವ ಸರ್ಕಾರದ ತತ್ವಗಳ ಮೇಲೆ ಕೂಡ ಅದು ಕೊನೆಯದಾಗಿ ಪ್ರಭಾವ ಬೀರುತ್ತದೆ.
———
ಈ ಪ್ರಬಂಧವು ಮೊದಲು ಬರ್ಲಿನಿಸ್ಚೆ ಮೊನಾಟ್ಸ್‌ಸ್ಕ್ರಿಫ್ಟ್‌ನಲ್ಲಿ ಪ್ರಕಟವಾಯಿತು, ಡಿಸೆಂಬರ್, 1784.
ಕೆಲವು ಆಕರಗಳು